ಕ್ರೀಡೆ

ಜಮ್ಮು- ಕಾಶ್ಮೀರ ವಿರುದ್ಧ ಕೇಕೆ ಹಾಕಿದ ಒಡಿಶಾ

Published On :

-ಡಿ.ಎನ್. ಮಹೇಂದ್ರ
ಮೈಸೂರು:
ಜಾಹ್ನವಿ ಪ್ರಧಾನ್ ಗಳಿಸಿದ ಅತ್ಯದ್ಭುತ ನಾಲ್ಕು ಗೋಲ್‌ಗಳ ನೆರವಿನಿಂದ ಒಡಿಶಾ ತಂಡ, ಜಮ್ಮು ಮತ್ತು ಕಾಶ್ಮೀರ ತಂಡವನ್ನು ಕಿರಿಯ ಮಹಿಳೆಯರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ 10-0 ಗೋಲುಗಳ ಅಂತರದಿಂದ ಮಣಿಸಿತು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಾಕಿ ಕರ್ನಾಟಕ ಆಯೋಜಿಸಿರುವ ಪಂದ್ಯಾವಳಿಯ ಬಿ ವಿಭಾಗದ ಈ ಪಂದ್ಯದಲ್ಲಿ ಜಾಹ್ನವಿ ಪ್ರಧಾನ್ ಮತ್ತು ಮೋಸ್ಮಿತ್ ಲುಗೂನ್ ಅವರು ಗಳಿಸಿದ ಗೋಲುಗಳು ತಂಡಕ್ಕೆ ಹೆಚ್ಚು ಆಸರೆ ಆಯಿತು. ನಮ್ರತ ಜಾಸ್ಮಿನ್ ಬಾರಾ ಅವರು ಪಂದ್ಯ ಆರಂಭವಾದ ಮೊದಲ ನಿಮಿಷದಲ್ಲಿಯೇ ಅತ್ಯಾಕರ್ಷಕ ಗೋಲ್ ದಾಖಲಿಸುವ ಮೂಲಕ ತಂಡದ ವಿಜಯೋತ್ಸವಕ್ಕೆ ನಾಂದಿ ಹಾಡಿದರು. ಆ ಮೂಲಕ ಸಹ ಆಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದರು.
ಜಾಹ್ನವಿ ಪ್ರಧಾನ್ ಪಂದ್ಯದ 28, 31, 47 ಮತ್ತು 58ನೇ ನಿಮಿಷಯದಲ್ಲಿ ನಾಲ್ಕು ಗೋಲ್ ಗಳಿಸುವಲ್ಲಿ ಯಶಸ್ವಿಯಾದರೆ, ಮೋಸ್ಮಿತ್ ಲುಗೂನ್ 8, 26 ಮತ್ತು 32ನೇ ನಿಮಿಷದಲ್ಲಿ ಚೆಂಡು ಗೋಲ್ ಪೆಟ್ಟಿಗೆಗೆ ನುಗ್ಗುವಂತೆ ನೋಡಿಕೊಂಡರು. ಅಂತೆಯೇ ನಾಯಕಿ ರಿಂಕಿ ಕುಜೂರ್ 2 ಗೋಲ್ ಬಾರಿಸಿದರು. ಪಂದ್ಯದ ಮೊದಲಾರ್ಧದಲ್ಲಿ 7 ಗೋಲ್ ಮತ್ತು ಉಳಿದಾರ್ಧ ಸಮಯದಲ್ಲಿ 3 ಗೋಲ್ ದಾಖಲಾಯಿತು. ಎಲ್ಲಾ ಪಂದ್ಯಾವಳಿಯಲ್ಲಿ ಆದಂತೆಯೇ ಈ ಪಂದ್ಯಾವಳಿಯಲ್ಲಿಯೂ ಎದುರಾಳಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಒಂದು ಗೋಲ್ ಗಳಿಸಿಕೊಳ್ಳಲು ಸಹ ಅವಕಾಶ ನೀಡಲಿಲ್ಲ.
ಬಳಿಕ ನಡೆದ ಆಂಧ್ರಪ್ರದೇಶ ಮತ್ತು ಅಸ್ಸಾಂ ತಂಡದ ನಡುವಿನ ಪಂದ್ಯಾವಳಿಯಲ್ಲಿ ಅಸ್ಸಾಂ ತಂಡ 4-0 ಅಂತರದಿಂದ ಜಯಗಳಿಸಿತು. ಫುಲ್ವಾರಿ ಕಂಡುಲಾನ ಎರಡು ಗೋಲ್ ಬಾರಿಸಿದರೆ, ಗೀತಾಂಜಲಿ ಕಿಸಾನ್ ಮತ್ತು ಮಾಕ್ಸಿಮ ಕ್ಷಲ್ಸೋ ತಲಾ ಒಂದು ಗೋಲ್ ಬಾರಿಸಿದರು. ಗೀತಾಂಜಲಿ ಪಂದ್ಯದ 22ನೇ ನಿಮಿಷಯದಲ್ಲಿ ಗೋಲ್ ಬಾರಿಸಿ ತಂಡದ ಖಾತೆ ತೆರೆದರು. ಪಂದ್ಯದ ಮೊದಲಾರ್ಧದಲ್ಲಿ ನಾಲ್ಕು ಗೋಲ್ ಸಂಪಾದಿಸಿದ್ದು ಬಿಟ್ಟರೆ, ದ್ವಿತೀಯಾರ್ಧದಲ್ಲಿ ಯಾವುದೆ ಗೋಲ್ ದಾಖಲಾಗಲಿಲ್ಲ. ಇದುವರೆಗೆ ನಡೆದ ಎಲ್ಲಾ ಪಂದ್ಯಾವಳಿಯಲ್ಲೂ ಜಯಗಳಿಸಿದ ತಂಡ ಬಿಟ್ಟರೆ, ಎದುರಾಳಿ ತಂಡ ಶೂನ್ಯ ಸಂಪಾದನೆಯಲ್ಲಿಯೇ ಮಣಿದಿದ್ದವು. ಆದರೆ, ಭಾನುವಾರ ನಡೆದ ಕೇರಳ ಮತ್ತು ಗುಜರಾತ್ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕೇರಳ ತಂಡವು 4-1 ಅಂತರದಿಂದ ಜಯಗಳಿಸಿತು. ಕೇರಳ ತಂಡದ ಕೆ. ಪ್ರತೀಶ 2 ಗೋಲ್, ಎಂ.ಆರ್. ಸಿಂಧು ಮತ್ತು ಅಶ್ವಿನಿ ಕುಂಹಿಕೃಷ್ಣನ್ ತಲಾ ಒಂದೊಂದು ಗೋಲು ದಾಖಲಿಸಿದರು. ಸಿಂಧು ಪಂದ್ಯದ ಮೊದಲ ನಿಮಿಷದಲ್ಲಿಯೇ ಗೋಲ್ ಬಾರಿಸಿದ್ದು ವಿಶೇಷ. ಇದಕ್ಕೆ ಪ್ರತಿಯಾಗಿ ಗುಜರಾತ್ ತಂಡದ ಪರಮೇಶ್ವರಿ ಶಾ ಪಂದ್ಯದ 62ನೇ ನಿಮಿಷಯದಲ್ಲಿ ಒಂದು ಗೋಲ್ ಬಾರಿಸಿದರು. ಪಂದ್ಯಾವಳಿಯ ಮೊದಲಾರ್ಧದಲ್ಲಿ 3-1 ಅಂತರ ಕಾಯ್ದುಕೊಂಡಿದ್ದ ಕೇರಳ ತಂಡ, ದ್ವಿತೀಯಾರ್ಧದಲ್ಲಿ ಮತ್ತೊಂದು ಗೋಲ್‌ನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.
ಪಂದ್ಯ ಹದಿನೇಳು- ಜಮ್ಮು- ಕಾಶ್ಮೀರ ಮಣಿಸಿದ ಒರಿಸ್ಸಾ 10-0.

ಒರಿಸ್ಸಾ ಗೋಲ್ ಸ್ಕೋರ್
ನಮ್ರತ ಜಾಸ್ಮಿನ್ ಬಾರಾ- 1 ನಿ.
ಮೋಸ್ಮಿತ್ ಲುಗೂನ್- 8, 26, 32 ನಿ.
ಜಾಹ್ನವಿ ಪ್ರಧಾನ್- 28, 31, 47, 58 ನಿ.
ರಿಂಕಿ ಕುಜೂರ್- 29, 40 ನಿ.

ಅಸ್ಸಾಂ ಗೋಲ್ ಸ್ಕೋರ್
ಗೀತಾಂಜಲಿ ಕಿಸಾನ್- 23 ನಿ.
ಫುಲ್ವಾರಿ ಕಂಡುಲಾನ 26, 34 ನಿ.
ಮಾಕ್ಸಿಮ ಕ್ಷಲ್ಸೋ- 30 ನಿ.

ಕೇರಳ ಗೋಲ್ ಸ್ಕೋರ್
ಎಂ.ಆರ್. ಸಿಂಧು- 1 ನಿ.
ಕೆ. ಪ್ರತೀಶ- 10, 21 ನಿ.
ಅಶ್ವಿನಿ ಕುಂಹಿಕೃಷ್ಣನ್- 47 ನಿ.

ಗುಜರಾತ್ ತಂಡದ ಗೋಲ್ ಸ್ಕೋರ್
ಪರಮೇಶ್ವರಿ ಶಾ- 62 ನಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.