ಯುನೈಟೆಡ್ಗೆ ಬಿಎಫ್ಸಿ ಸೆಡ್ಡು
ಕೋಲ್ಕತಾ: ಐ ಲೀಗ್ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೆಂಗಳೂರು ಎಫ್ಸಿ ತಂಡ 21ನೇ ಸುತ್ತಿನ ಪಂದ್ಯದಲ್ಲಿ ಯುನೈಟೆಡ್ ಎಸ್ಸಿ ತಂಡವನ್ನು ಎದುರಿಸಲಿದ್ದು, ಗೆಲವಿನ ಹಾದಿಯಲ್ಲಿ ಮುಂದುವರಿಯಲು ಸಜ್ಜಾಗಿದೆ.
ಗುರುವಾರ ಮಧ್ಯಾಹ್ನ ಕಲ್ಯಾಣಿ ಕ್ರೀಡಾಂಗಣದಲ್ಲಿ ಬಿಎಫ್ಸಿ ತಂಡದ ಸವಾಲನ್ನು ಆತಿಥೇಯ ಯುನೈಟೆಡ್ ತಂಡ ಯಾವ ರೀತಿ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕು. ಈ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿ ಪರಿಣಮಿಸಿದೆ.
ಈ ಬಾರಿ ಐ ಲೀಗ್ ಪಂದ್ಯಾವಳಿಗೆ ಪದಾರ್ಪಣೆ ಮಾಡಿರುವ ಬೆಂಗಳೂರು ಎಫ್ಸಿ ತಂಡ, ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಸಾಗಿದೆ. ಪರಿಣಾಮ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಕಳೆದ ಮೂರು ಪಂದ್ಯಗಳ ಪೈಕಿ ಬಿಎಫ್ಸಿ, ಆರಂಭಿಕ ಎರಡು ಪಂದ್ಯಗಳಲ್ಲಿ ಡ್ರಾ ಹಾಗೂ ಸೋಲನುಭವಿಸುವ ಮೂಲಕ ಕೇವಲ 1 ಅಂಕವನ್ನು ಪಡೆದುಕೊಂಡಿತ್ತು. ಅಲ್ಲದೆ ತನ್ನ ಅಗ್ರಸ್ಥಾನವನ್ನು ಕಳೆದುಕೊಳ್ಳುವ ಒತ್ತಡದಲ್ಲಿತ್ತು. ಆದರೆ ಕಳೆದ ಪಂದ್ಯದಲ್ಲಿ ಚರ್ಚಿಲ್ ಬ್ರದರ್ಸ್ ವಿರುದ್ಧ 3-0 ಗೋಲುಗಳ ಗೆಲವು ದಾಖಲಿಸಿದ ಬಿಎಫ್ಸಿ ಮತ್ತೆ ತನ್ನ ಗೆಲವಿನ ಲಯ ಕಂಡುಕೊಳ್ಳುವ ಮೂಲಕ ಅಗ್ರಸ್ಥಾನವನ್ನು ಗಟ್ಟಿ ಮಾಡಿಕೊಂಡಿತು.
ಯಾವುದೇ ದೇಶದಲ್ಲಿ ತಂಡವೊಂದು ಯಶಸ್ಸು ಸಾಧಿಸಿದೆ ಎಂದರೆ, ಆ ತಂಡ ತಮ್ಮ ಸೋಲಿನಿಂದ ಮರು ಹೋರಾಟ ನೀಡುವ ಶೈಲಿ ಪ್ರಮುಖವಾಗಿರುತ್ತದೆ ಎಂದು ಬಿಎಫ್ಸಿ ತಂಡದ ಕೋಚ್ ಆ್ಯಶ್ಲೆ ವೆಸ್ಟ್ವುಡ್ ತಿಳಿಸಿದ್ದಾರೆ.ಇನ್ನು ಯುನೈಟೆಡ್ ಎಸ್ಸಿ ತಂಡದ ಪರಿಸ್ಥಿತಿ ತೀರಾ ಹೀನಾಯವಾಗಿದೆ. ಸತತ ಒಂಬತ್ತು ಪಂದ್ಯಗಳಲ್ಲಿ ಯುನೈಟೆಡ್ ತಂಡ ಒಂದೂ ಗೆಲವನ್ನು ಕಂಡಿಲ್ಲ. ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಯುನೈಟೆಡ್ ಸೋಲನುಭವಿಸಿದೆ. ಅಲ್ಲದೆ ತಂಡ ಸುಬ್ರತಾ ಭಟ್ಟಚಾರ್ಯ ಅವರನ್ನು ಹೊಸ ತಾಂತ್ರಿಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದೆಯಾದರೂ ಕಳೆದ ಮೂರು ಪಂದ್ಯಗಳಲ್ಲಿ ಕೇವಲ 2 ಅಂಕಗಳನ್ನು ಪಡೆದುಕೊಂಡಿದೆ. ಹಾಗಾಗಿ ಯುನೈಟೆಡ್ ತಂಡಕ್ಕೆ ಗೆಲವು ಅನಿವಾರ್ಯವಾಗಿ ಪರಿಣಮಿಸಿದೆ.
ಇನ್ನು ಕಲ್ಯಾಣಿ ಕ್ರೀಡಾಂಗಣದಲ್ಲಿ ಯುನೈಟೆಡ್ ತಂಡದ ಸಾಧನೆ ಸಹ ಉತ್ತಮವಾಗಿಲ್ಲ. ಆಡಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಗೆಲವು, ಎರಡರಲ್ಲಿ ಸೋಲು ಹಾಗೂ ಎರಡರಲ್ಲಿ ಡ್ರಾ ಫಲಿತಾಂಶ ಪಡೆದಿದೆ.
ಈ ಪಂದ್ಯದಲ್ಲಿ ಬಿಎಫ್ಸಿ ತಂಡವೂ ಸಹ ಮೈಮರೆಯುವಂತಿಲ್ಲ. ಬಿಎಫ್ಸಿ ಆಟಗಾರರು ತವರಿನ ಬೆಂಬಲಿಗರ ಹೊರತಾಗಿ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಅಲ್ಲದೆ ಬಿಎಫ್ಸಿ ತಂಡ ಹೊರಗಿನ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿಲ್ಲ.
ಬಿಎಫ್ಸಿ ಪಂದ್ಯಾವಳಿಯಲ್ಲಿ ಇನ್ನು ಐದು ಪಂದ್ಯಗಳನ್ನು ಹೊರಗಿನ ಅಂಗಣದಲ್ಲಿ ಆಡಬೇಕಾಗಿದ್ದು, ಈ ಪಂದ್ಯದಲ್ಲಿ ಗೆಲವು ದಾಖಲಿಸಿ ತಮ್ಮ ಹಾದಿಯನ್ನು ಸುಗಮ ಮಾಡಿಕೊಳ್ಳಲು ಉತ್ತಮ ಅವಕಾಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

