ಫುಟ್ಬಾಲ್ ರ್ಯಾಂಕಿಂಗ್: ಭಾರತ 152ಕ್ಕೇರಿಕೆ
ನವದೆಹಲಿ: ಭಾರತ ತಂಡ ನೂತನ ಜಾಗತಿಕ ಫುಟ್ಬಾಲ್ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡು ಸ್ಥಾನ ಮೇಲೇರಿದೆ. ಆ ಮೂಲಕ ಭಾರತ ಪಟ್ಟಿಯಲ್ಲಿ 152ನೇ ಸ್ಥಾನದ ಗೌರವ ಪಡೆದಿದೆ. ಬಾಂಗ್ಲಾದೇಶ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ಧ ಪಂದ್ಯದಲ್ಲಿ ಭಾರತದ ಆಟಗಾರರು 2-2 ಗೋಲುಗಳಿಂದ ಡ್ರಾ ಸಾಧಿಸುವ ಮೂಲಕ ರ್ಯಾಂಕಿಂಗ್ನಲ್ಲಿ ಮೇಲೇರಿದರು.ಈ ಪಂದ್ಯದಿಂದ ಭಾರತ ಒಟ್ಟು 43 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿತು. ಏಷ್ಯನ್ ರಾಷ್ಟ್ರಗಳ ಪೈಕಿ ಇರಾನ್ (42ನೇ ಸ್ಥಾನ) ಉನ್ನತ ಸ್ಥಾನದಲ್ಲಿರುವ ತಂಡವಾಗಿದೆ. ಜಪಾನ್ (48), ಉಜ್ಬೇಕಿಸ್ತಾನ (55) ಕ್ರಮವಾಗಿ ನಂತರದಲ್ಲಿವೆ. ಈ ಮಧ್ಯೆ ಸ್ಪೇನ್ ವಿಶ್ವದ ನಂಬರ್ ಒನ್ ತಂಡ ಎಂಬ ಹೆಗ್ಗಳಿಕೆ ಪಡೆದಿದೆ.
ಪಶ್ಚಿಮ ಬಂಗಾಳಕ್ಕೆ ಪ್ರಶಸ್ತಿ
ಹುಬ್ಬಳ್ಳಿ: ಎದುರಾಳಿ ಆಂಧ್ರ ಪ್ರದೇಶ ತಂಡವನ್ನು 14 ರನ್ಗಳಿಂದ ಮಣಿಸುವ ಮೂಲಕ ಪಶ್ಚಿಮ ಬಂಗಾಳ ತಂಡವು 26ನೇ ರಾಷ್ಟ್ರೀಯ ಅಂಗವಿಕಲರ ಕ್ರಿಕೆಟ್ 'ಡೆನ್ನಿಸನ್ ಟ್ರೋಫಿ-2014'ನ್ನು ತನ್ನದಾಗಿಸಿಕೊಂಡಿತು.
ಗುರುವಾರ ಬೆಳಗ್ಗೆ ಸೆಮಿಫೈನಲ್ ಪಂದ್ಯದಲ್ಲಿ ಎ ಗುಂಪಿನಿಂದ ಪಶ್ಚಿಮ ಬಂಗಾಳ, ಬಿ ಗುಂಪಿನಿಂದ ಆಂಧ್ರ ಪ್ರದೇಶ ತಲಾ 6 ಅಂಕ ಗಳಿಸಿ ಫೈನಲ್ ಪ್ರವೇಶಿಸಿದ್ದವು. ಮಧ್ಯಾಹ್ನ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ಬಂಗಾಳ, 12 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು. ಅಬ್ದುಲ್ ಖಲೇಕ್ ಆಜೇಯ 25 ರನ್ ಗಳಿಸಿದರು. ಸಮರೇಶ ಬಿಸ್ವಾಸ್ (15), ದೆಬ್ರೊತೊ ರಾಯ್ (9) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಸವಾಲಿನ ಮೊತ್ತ ಬೆನ್ನಟ್ಟಿದ ಆಂಧ್ರ ಪ್ರದೇಶದ ಆದಮ್ (24) ಅವರ ಉತ್ತಮ ಆಟದ ಹೊರತಾಗಿಯೂ 6 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಲಷ್ಟೇ ಶಕ್ತವಾಯಿತು. ಬೌಲಿಂಗ್ನಲ್ಲಿಯೂ ಮಿಂಚಿದ ಪಶ್ಚಿಮ ಬಂಗಾಳ ತಂಡದ ಅಬ್ದುಲ್ ಖಲೇಕ್ ಮೂರು ವಿಕೆಟ್ ಪಡೆದರು.
ಸೆಮಿಫೈನಲ್ ಪಂದ್ಯಗಳಲ್ಲಿ ತಮಿಳುನಾಡು ತಂಡವನ್ನು ಪಶ್ಚಿಮ ಬಂಗಾಳ 8 ವಿಕೆಟ್ಗಳಿಂತ ಮಣಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಮಿಳುನಾಡು, 9.4 ಓವರ್ಗಳಲ್ಲಿ 28 ರನ್ಗಳಿಗೆ ಆಲೌಟಾಯಿತು. ಈ ಪಂದ್ಯವನ್ನು ಗೆಲ್ಲಲು ಪಶ್ಚಿಮ ಬಂಗಾಳ ಹೆಚ್ಚು ಬೆವರು ಸುರಿಸಬೇಕಾಗಿ ಬರಲಿಲ್ಲ. ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ ವಿದರ್ಭ ತಂಡ 31 ರನ್ಗಳಿಂದ ಸೋತಿತು. ಆದರೆ, ಎರಡೂ ತಂಡಗಳು ಫೈನಲ್ ಪ್ರವೇಶಿಸುವ ಅವಕಾಶವನ್ನು ಆಗಲೇ ಕಳೆದುಕೊಂಡಿದ್ದವು. ಶುಕ್ರವಾರ ವಿಜೇತರಿಗೆ ಪ್ರಶಸ್ತಿ ವಿತರಿಸಲಾಗುತ್ತದೆ.
ಅಥ್ಲೀಟ್ಗಳ ವಿದೇಶಿ ತರಬೇತಿಗೆ ಸರ್ಕಾರ ಅಸ್ತು
ನವದೆಹಲಿ: ಕಾಮನ್ವೆಲ್ತ್ ಹಾಗೂ ಏಷ್ಯಾ ಕ್ರೀಡಾಕೂಟದ ತಯಾರಿಯ ಭಾಗವಾಗಿ ಭಾರತದ ಪ್ರಮುಖ ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲೀಟ್ಗಳು ವಿದೇಶದಲ್ಲಿ ತರಬೇತಿ ನಡೆಸಲು ಕೇಂದ್ರ ಕ್ರೀಡಾ ಸಚಿವಾಲಯ ಒಪ್ಪಿಗೆ ನೀಡಿದೆ. ಭಾರತದ ಪರ ಪದಕ ನಿರೀಕ್ಷೆ ಹೊಂದಿರುವ ಆಟಗಾರರಾದ ವಿಕಾಸ್ ಗೌಡ, ಕೃಷ್ಣ ಪೂನಿಯಾ ಸೇರಿದಂತೆ ಪ್ರಮುಖ ಅಥ್ಲೀಟ್ಗಳನ್ನು ತರಬೇತಿಗೆ ಕಳುಹಿಸಲು ಒಪ್ಪಿಗೆ ನೀಡಲಾಗಿದೆ.
ಪೂನಿಯಾ ಜತೆಗೆ ಪತಿ ಹಾಗೂ ಕೋಚ್ ಆಗಿರುವ ವೀರೇಂದರ್ ಅವರು ಕ್ಯಾಲಿಫೊರ್ನಿಯಾದಲ್ಲಿರುವ ಮ್ಯಾಕ್ ವಿಲ್ಕಿನ್ಸ್ ಟ್ರೈನಿಂಗ್ ಸೆಂಟರ್ಗೆ ಮೇ 1ರಿಂದ ಜು.21ರವರೆಗೆ ತೆರಳಲು ಸರ್ಕಾರ ಅನುಮತಿ ನೀಡಿದೆ. ಪೂನಿಯಾ ಸಹ ಆಟಗಾರ್ತಿ ಸೀಮಾ ಪುನಿಯಾ ಕ್ಯಾಲಿಫೋರ್ನಿಯಾದ ನ್ಯೂ ಪೋರ್ಟ್ ಬೀಚ್ನಲ್ಲಿರುವ ಥ್ರೋಯಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅನುಮತಿ ನೀಡಲಾಗಿದೆ. ಇನ್ನು ವಿಕಾಸ್ ಗೌಡ ಅಮೆರಿಕಾದ ಫೊನಿಕ್ಸ್ನಲ್ಲಿರುವ ಜಾನ್ ಗೊಡಿನಾ ಥ್ರೋಯಿಂಗ್ ಸೆಂಟರ್ನಲ್ಲಿ ಏ.1ರಿಂದ ಕೋರಿಯಾದಲ್ಲಿ ನಡೆಯಲಿರುವ ಏಷ್ಯಾ ಕ್ರೀಡಾಕೂಟ(ಸೆ.19-ಅ.4)ದವರೆಗೂ ತರಬೇತಿ ಪಡೆಯಲಿದ್ದಾರೆ. ಮುಂಬರುವ ಕಾಮನ್ವೆಲ್ತ್ ಹಾಗೂ ಏಷ್ಯಾ ಕ್ರೀಡಾಕೂಟದ ತಯಾರಿಯ ಭಾಗವಾಗಿ ಭಾರತದ ಪ್ರಮುಖ ಅಥ್ಲೀಟ್ಗಳಿಗೆ ವಿದೇಶದಲ್ಲಿ ತರಬೇತಿ ನೀಡುವ ಕುರಿತು ಭಾರತೀಯ ಅಥ್ಲೆಟಿಕ್ ಫೆಡರೇಷನ್ ನೀಡಿದ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿರುವುದು ಸಂತಸ ತಂದಿದೆ.
ಭಾರತ ಆರ್ಚರಿಗಳಿಗೆ
2 ಚಿನ್ನ, 1 ಬೆಳ್ಳಿ
ಬ್ಯಾಂಕಾಕ್: ಭಾರತೀಯ ಆರ್ಚರಿಗಳು ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಮೊದಲ ಏಷ್ಯನ್ ಗ್ರ್ಯಾನ್ ಪ್ರಿ ಆರ್ಚರಿ ಚಾಂಪಿಯನ್ಶಿಪ್ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಮಹಿಳೆಯರ ಕಾಂಪೌಂಡ್ ತಂಡ ವಿಭಾಗದಲ್ಲಿ ಗಗನ್ದೀಪ್ ಕೌರ್, ವಿ. ಜ್ಯೋತಿ ಸುರೇಖಾ ಮತ್ತು ಪಿ. ಲಿಲ್ಲಿ ಚಾನು ಅವರನ್ನೊಳಗೊಂಡ ಭಾರತ 219-204 ಅಂಕಗಳಿಂದ ಇರಾನ್ ವಿರುದ್ಧ ಜಯಗಳಿಸಿ ಮೊದಲ ಚಿನ್ನದ ಪದಕ ಗಳಿಸಿತು. ಇನ್ನು ರಿಕುರ್ವ್ ಪುರುಷರ ವಿಭಾಗದಲ್ಲಿ ಜಯಂತ್ ತಾಲೂಕದಾರ್, ತರುಣ್ದೀಪ್ ರೈ ಮತ್ತು ಕಪಿಲ್ ಅವನ್ನೊಳಗೊಂಡ ಭಾರತೀಯ ಪಡೆ 6-0 ಅಂತರದಲ್ಲಿ ಚೈಪೇಯನ್ನು ಮಣಿಸಿ ಮತ್ತೊಂದು ಚಿನ್ನ ಸಂಪಾದಿಸಿತು. ಅದೇ ರೀತಿ, ಅಭಿಷೇಕ್ ವರ್ಮಾ, ಸಂದೀಪ್ ಕುಮಾರ್ ಮತ್ತು ರಜತ್ ಚೌಹಾಣ್ರಿದ್ದ ಭಾರತ ತಂಡ ಪುರುಷರ ಕಾಂಪೌಂಡ್ ವಿಭಾಗದಲ್ಲಿ ಇರಾನ್ ಎದುರು 227-232ರ ಅಂತರದಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿತು.
ಹಾಕಿ ಆಟಗಾರರ ಅಮಾನತು
ನವದೆಹಲಿ: ಹಾಕಿ ಇಂಡಿಯಾ ಶಿಸ್ತು ಸಮಿತಿಯು ಕ್ರೀಡಾ ಘನತೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ಆಟಗಾರರು ಹಾಗೂ ಕೋಚ್ಗಳನ್ನು ಅಮಾನತು ಮಾಡಿದೆ.
48ನೇ ಅಖಿಲ ಭಾರತ ಬಾಂಬೆ ಗೋಲ್ಡ್ ಕಪ್ ಪಂದ್ಯಾವಳಿಯಲ್ಲಿ ಮೂರು ಆಟಗಾರರು ಅಸಭ್ಯ ವರ್ತನೆ ತೋರಿದ್ದರು ಅಲ್ಲದೆ ರೆಡ್ ಕಾರ್ಡ್ ಪಡೆದಿದ್ದರು. ಈ ಪ್ರಕರಣದ ತನಿಖೆ ನಡೆಸಿದ ನಂತರ ಶಿಸ್ತು ಸಮಿತಿ ಪಂಜಾಬ್ನ ಆಟಗಾರರಾದ ಸರವಣ್ಜಿತ್ ಸಿಂಗ್ ಮತ್ತು ಸಿಂದ್ ಬ್ಯಾಂಕ್ನ ಕರಮ್ಜಿತ್ ಸಿಂಗ್ ಹಾಗೂ ಏರ್ ಇಂಡಿಯಾದ ಗುರ್ಪ್ರೀತ್ ಸಿಂಗ್ ಅವರನ್ನು ಏ.1ರಿಂದ ನಡೆಯಲಿರುವ ಹಾಕಿ ಇಂಡಿಯಾದ ಪಂದ್ಯಾವಳಿಗೆ ಆರು ತಿಂಗಳ ಕಾಲ ನಿಷೇಧ ಹೇರಲಾಗಿದೆ. ಅಲ್ಲದೆ ಇತರ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂಡಿಯನ್ ಆರ್ಮಿ ತಂಡದ ಆಟಗಾರ ಬಚಿತ್ತರ್ ಸಿಂಗ್, ನಾಮಧಾರಿ ಇಲೆವೆನ್ ತಂಡ ಹರ್ಪ್ರೀತ್ ಸಿಂಗ್, ಎನ್.ಸಿ ರೈಲ್ವೇಸ್ ಮಹಿಳಾ ತಂಡದ ಎಲ್ಲಾ ಆಟಗಾರ್ತಿಯರಿಗೆ ಈ ಶಿಕ್ಷೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

