ವಿನಯ್ ಪಡೆಗೆ ಜಾರ್ಖಂಡ್ ಸವಾಲು
ಕೋಲ್ಕತಾ: ಅದ್ಭುತ ಫಾರ್ಮ್ನಿಂದ ಗೆಲವಿನ ಹಾದಿಯಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಕರ್ನಾಟಕ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಸವಾಲು ನೀಡಲು ಸಿದ್ಧವಾಗಿದೆ.
ಶುಕ್ರವಾರ ಇಲ್ಲಿನ ಜಾಧವ್ಪುರ ಯೂನಿವರ್ಸಿಟಿ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡದ ವಿರುದ್ಧ ಗೆಲವು ದಾಖಲಿಸಿ ಫೈನಲ್ಗೆ ಪ್ರವೇಶಿಸಲು ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಯೋಜನೆ ರೂಪಿಸಿದೆ.
ಆತ್ಮ ವಿಶ್ವಾಸದಲ್ಲಿ ರಾಜ್ಯ ತಂಡ: ರಣಜಿ ಪಂದ್ಯಾವಳಿಯಲ್ಲಿನ ಯಶಸ್ಸನ್ನು ಮುಂದುವರಿಸಿರುವ ಕರ್ನಾಟಕ ತಂಡ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಕರ್ನಾಟಕ ತಂಡ ಈ ಋತುವಿನಲ್ಲಿ ನೀಡಿರುವ ಪ್ರದರ್ಶನ ಅತ್ಯದ್ಭುತವಾಗಿದೆ. ರಣಜಿ ಪಂದ್ಯಾವಳಿಯಲ್ಲಿ ಸೋಲನ್ನು ಕಾಣದೇ ಚಾಂಪಿಯನ್ ಆದ ರಾಜ್ಯ ತಂಡ, ನಂತರ ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿತು. ತಮಿಳುನಾಡು ವಿರುದ್ಧದ ಪಂದ್ಯದಲ್ಲಿನ ಸೋಲು ಹೊರತುಪಡಿಸಿದರೆ ಕರ್ನಾಟಕ ತಂಡ ಗೆಲವಿನ ಸಿಹಿಯನ್ನು ಸವಿಯುತ್ತಾ ತಮ್ಮ ಪಯಣ ಮುಂದುವರಿಸಿದೆ.
ರಣಜಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ನಂತರ ದೇಶಿ ಕ್ರಿಕೆಟ್ನ ಸೀಮಿತ ಓವರ್ನ ಮಹತ್ವದ ಪಂದ್ಯಾವಳಿಯಾದ ವಿಜಯ್ ಹಜಾರೆಯಲ್ಲೂ ಪ್ರಶಸ್ತಿ ಎತ್ತಿ ಹಿಡಿಯಲು ಹವಣಿಸುತ್ತಿದೆ.
ಕರ್ನಾಟಕ ತಂಡವನ್ನು ನೋಡುವುದಾದರೆ, ರಣಜಿಯಲ್ಲಿನ ಬಹುತೇಕ ಆಟಗಾರರು ಈಗಲೂ ಮುಂದುವರಿದಿದ್ದಾರೆ. ಹಾಗಾಗಿ ತಂಡದ 16 ಆಟಗಾರರು ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವುದು ತಂಡದ ಫ್ಲಸ್ ಪಾಯಿಂಟ್ ಆಗಿದೆ. ರಾಬಿನ್ ಉತ್ತಪ್ಪ, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಕರುಣ್ ನಾಯರ್, ಗಣೇಶ್ ಸತೀಶ್ ಬ್ಯಾಟಿಂಗ್ ವಿಭಾಗದ ಆಧಾರ ಸ್ತಂಭಗಳಾಗಿದ್ದಾರೆ.
ಇನ್ನು ಬೌಲಿಂಗ್ನಲ್ಲಿ ವಿನಯ್ ಕುಮಾರ್ ತಮ್ಮ ದಾಳಿಯನ್ನು ಈ ಪಂದ್ಯದಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಇವರಿಗೆ ಸಾಥ್ ನೀಡಲು ಅಭಿಮನ್ಯು ಮಿಥುನ್, ಎಚ್.ಎಸ್ ಶರತ್ ಸಿದ್ಧವಾಗಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅಬ್ರಾರ್ ಖಾಜಿ ಅಥವಾ ಶ್ರೇಯಸ್ ಗೋಪಾಲ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಉತ್ತಮ ಲಯದಲ್ಲಿ ಜಾರ್ಖಂಡ್: ಇನ್ನು ಜಾರ್ಖಂಡ್ ತಂಡವನ್ನು ನೋಡುವುದಾದರೆ, ಈ ತಂಡ ತಮ್ಮ ಕಳೆದ ನಾಲ್ಕೂ ಪಂದ್ಯಗಳಲ್ಲಿ ಗೆಲವು ದಾಖಲಿಸುತ್ತಾ ಬಂದಿದ್ದು, ಉತ್ತಮ ಲಯದಲ್ಲಿದ್ದಾರೆ.
ಜಾರ್ಖಂಡ್ ಪರ ಕುಮಾರ್ ದೇವಬ್ರತ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರ ಜತೆಗೆ ಇಶಾಂಕ್ ಜಗ್ಗಿ, ಸೌರಬ್ ತಿವಾರಿ, ಆಶೀಶ್ ಯಾದವ್ ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ. ಇನ್ನು ಬೌಲಿಂಗ್ನಲ್ಲಿ ವರುಣ್ ಎರಾನ್, ಜಸ್ಕರಣ್ ಸಿಂಗ್ ವೇಗದ ಅಸ್ತ್ರಗಳಾಗಿದ್ದರೆ, ಇನ್ನು ಸ್ಪಿನ್ ವಿಭಾಗದಲ್ಲಿ ರಾಹುಲ್ ಶುಕ್ಲಾ ಹಾಗೂ ಶಹಬಾಜ್ ನದೀಮ್ ಸಹ ಉತ್ತಮ ಲಯದಲ್ಲಿದ್ದಾರೆ.
ತಂಡಗಳು
ಕರ್ನಾಟಕ: ವಿನಯ್ ಕುಮಾರ್(ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್ ರಾಹುಲ್, ಗಣೇಶ್ ಸತೀಶ್, ಮಾಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಕುನಾಲ್ ಕಪೂರ್, ಕರುಣ್ ನಾಯರ್, ಸಿ.ಎಮ್ ಗೌತಮ್, ಅಮಿತ್ ವರ್ಮಾ, ಶ್ರೇಯಸ್ ಗೋಪಾಲ್, ಅಬ್ರಾರ್ ಖಾಜಿ, ಅಭಿಮನ್ಯು ಮಿಥುನ್, ಎಚ್.ಎಸ್ ಶರತ್, ಎಸ್.ಅರವಿಂದ್.
ಜಾರ್ಖಂಡ್: ಸೌರಬ್ ತಿವಾರಿ(ನಾಯಕ), ಕುಮಾರ್ ದೇವಬ್ರತ್, ಶಿವ್ ಗೌತಮ್, ಇಶಾನ್ ಕಿಶನ್, ಇಶಾಂಕ್ ಜಗ್ಗಿ, ಜಸ್ಕರಣ್ ಸಿಂಗ್, ಕೌಶಾಲ್ ಸಿಂಗ್, ಕೇಶವ್ ಕುಮಾರ್, ಶಹಬಾಜ್ ನದೀಮ್, ರಮೀಜ್ ನೆಮತ್, ಸಮರ್ ಖಾದಿರ್, ರಾಜು ಕುಮಾರ್, ರಾಹುಲ್ ಶುಕ್ಲಾ, ವಿಕಾಸ್ ಸಿಂಗ್, ವಿರಾಟ್ ಸಿಂಗ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

