ಕ್ರೀಡೆ

ಭಾರತಕ್ಕೆ ನೆಮ್ಮದಿ ತಂದ ಗೆಲವು

Published On :

ಮೀರ್‌ಪುರ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಸುರೇಶ್ ರೈನಾ(54) ಹಾಗೂ ವಿರಾಟ್ ಕೊಹ್ಲಿ(ಅಜೇಯ 74) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲವು ದಾಖಲಿಸಿತು.
ಬುಧವಾರ ಶೇರೆ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 21 ರನ್‌ಗಳ ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ 20 ಓವರ್ ಗಳಲ್ಲಿ 4 ವಿಕೆಟ್‌ಗೆ 178 ರನ್ ಕಲೆ ಹಾಕಿತು. ನಂತರ ಇಂಗ್ಲೆಂಡ್ ತಂಡ 20  ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್ ದಾಖಲಿಸಲಷ್ಟೇ ಶಕ್ತವಾಯಿತು.
ಆರಂಭಿಕ ಆಘಾತ: ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತಕ್ಕೆ ಆರಂಭಿಕರಿಂದ ಉತ್ತಮ ಆರಂಭ ದೊರೆಯಲಿಲ್ಲ. ಶಿಖರ್ ಧವನ್(14), ರೋಹಿತ್ ಶರ್ಮಾ(5), ಯುವರಾಜ್ ಸಿಂಗ್(1), ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಹಾಗಾಗಿ ಭಾರತ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ, ಸುರೇಶ್ ರೈನಾ(54 ರನ್, 31 ಎಸೆತ, 6 ಬೌಂಡರಿ, 2 ಸಿಕ್ಸರ್) ತಂಡಕ್ಕೆ 81 ರನ್‌ಗಳ ಜತೆಯಾಟ ನೀಡುವ ಮೂಲಕ ಉತ್ತಮ ಕಾಣಿಕೆ ನೀಡಿದರು. ಅಂತಿಮ 9 ಓವರ್‌ಗಳಲ್ಲಿ 101 ರನ್ ಕಲೆ ಹಾಕುವ ಮೂಲಕ ಭಾರತ ಬೃಹತ್ ಮೊತ್ತ ಕಲೆ ಹಾಕಿತು. ಅಂತಿಮವಾಗಿ ಅಜೇಯರಾಗುಳಿದ ವಿರಾಟ್ ಕೊಹ್ಲಿ (ಅಜೇಯ 74, 48 ಎಸೆತ, 8 ಬೌಂಡರಿ) ಹಾಗೂ ಧೋನಿ (ಅಜೇಯ 21 ರನ್, 14 ಎಸೆತ, 1 ಬೌಂಡರಿ, 1 ಸಿಕ್ಸರ್) ಉತ್ತಮ ಬ್ಯಾಟಿಂಗ್ ಮಾಡಿದರು.
ನಂತರ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತಾದರೂ ಸತತ ವಿಕೆಟ್ ಕಳೆದುಕೊಂಡ ಪರಿಣಾಮ ಸೋಲನುಭವಿಸಿತು. ಆಂಗ್ಲರ ಪರ ಮೊಯೀನ್ ಅಲಿ 46 ಹಾಗೂ ಮೈಕಲ್ ಲಂಬ್ 36 ಉತ್ತಮ ಬ್ಯಾಟಿಂಗ್ ಮಾಡಿದರೂ ತಂಡವನ್ನು ಗೆಲವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 178 (ವಿರಾಟ್ ಕೊಹ್ಲಿ ಅಜೇಯ 74, ಸುರೇಶ್ ರೈನಾ 54, ಧೋನಿ ಅಜೇಯ 21, ಡರ್ನ್‌ಬ್ಯಾಚ್ 27ಕ್ಕೆ1).
ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 158 (ಮೊಯೀನ್ ಅಲಿ 46, ಮೈಕಲ್ ಲಂಬ್ 36, ಜಡೇಜಾ 23ಕ್ಕೆ2)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.