ಕ್ರೀಡೆ

ಉತ್ತರದಲ್ಲಿ ಅರಳಿದ ಹಾಕಿ ಪ್ರತಿಭೆಗಳು

Published On :

ಬೆಂಗಳೂರು: ಅವರ ಮನೆಯಲ್ಲಿ ಕತ್ತಲಾದರೆ, ದೀಪಗಳು ಬೆಳಗುವುದು ಕಷ್ಟ. ಆದರೆ, ಅವರ ಮನದಲ್ಲಿ ನಾವು ರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತೇವೆ ಎಂಬ ಅದಮ್ಯ ಭರವಸೆ ಕಂಗೊಳಿಸುತ್ತಿದೆ. ಅವರ ತವರಿನಲ್ಲಿ ರಾಷ್ಟ್ರೀಯ ಕ್ರೀಡೆ ಹಾಕಿಯ ಹೊಳಪಿಲ್ಲ. ಆದರೆ ಅವರ ತೋಳ್ಬಲದಲ್ಲಿ ಹಾಕಿ ಸ್ಟಿಕ್ ತಿರುಗಿಸುವ ಮಾಂತ್ರಿಕ ಶಕ್ತಿ ತುಂಬಿದೆ. ಹುಟ್ಟಿದ ಊರಿನಲ್ಲಿ ಹಾಕಿ ಅಬ್ಬರ ಇರದಿದ್ದರೂ, ಜೀವನದಲ್ಲಿ ಸಿಕ್ಕ ಚಿಕ್ಕಪುಟ್ಟ ಅವಕಾಶಗಳನ್ನು ಬಳಸಿಕೊಂಡು ರಾಜ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಉತ್ತರ ಕರ್ನಾಟಕದ ಆಟಗಾರರು ತಂಡದ ಭರವಸೆಯ ಆಟಗಾರರೂ ಎನಿಸಿರುವುದೇ ಮತ್ತೊಂದು ಅಚ್ಚರಿಯ ವಿಷಯ.
  ಇದೇ ಮಾರ್ಚ್ 29ರಿಂದ ಬರುವ ಏಪ್ರಿಲ್ 6ರವರೆಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಹಾಕಿ ಪಂದ್ಯಾವಳಿಗೆ ಉತ್ತರ ಕರ್ನಾಟಕದ ನಾಲ್ವರು ಆಟಗಾರರು  ಆಯ್ಕೆಯಾಗಿದ್ದಾರೆ.
ಹಾಕಿ ಎಂದಾಕ್ಷಣ ನಮಗೆ ಕೊಡಗು ಮತ್ತು ಬೆಂಗಳೂರು ಮಾತ್ರ ನೆನಪಿಗೆ ಬರುತ್ತದೆ. ಅಲ್ಲಿ ಹಾಕಿ ಆಡಲು ಮೂಲಭೂತ ಸೌಕರ್ಯಗಳು ಹೆಚ್ಚಿವೆ. ಆದರೆ, ಉತ್ತರ ಕರ್ನಾಟಕದ ಪಾಲಿಗೆ ಇದು ಕಷ್ಟಸಾಧ್ಯ. ಕಾರಣ ಅಲ್ಲಿನ ಯಾವುದೇ ನಗರಕ್ಕೂ ಇದುವರೆಗೂ ಹಾಕಿಯ ಮೂಲಭೂತ ಸೌಕರ್ಯಗಳು ಸೂಕ್ತ ರೀತಿಯಲ್ಲಿ ದೊರಕಿಲ್ಲ.
ಆದಾಗ್ಯೂ, ಬಾಗಲಕೋಟೆಯಿಂದ ಆಂಜನಯ್ಯ ಅಂಬಿಗೇರ್ ಮತ್ತು ವೀರಣ್ಣ ಎಸ್. ಪಾಟೀಲ್ ಅವರು ರಾಜ್ಯ ತಂಡದ ಕದ ತಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆಯ್ಕೆಯಾಗಿದ್ದು ಹೇಗೆ: ಆಂಜನಯ್ಯ ಮತ್ತು ವೀರಣ್ಣ ಬಾಗಲಕೋಟೆಯಲ್ಲಿರುವ ಸಿಟಿ ಸ್ಪೋರ್ಟ್ಸ್ ಕ್ಲಬ್ ಬೇಸಿಗೆಯಲ್ಲಿ ನಡೆಸುವ ಹಾಕಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಹಾಕಿಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದಾರೆ. ಆದರೆ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದ ಕೊಡಗಿನ ಕೂಡಗಿ ಕ್ರೀಡಾ ಹಾಸ್ಟೇಲ್ ಅವರನ್ನು ಆಯ್ಕೆ ಮಾಡಿಕೊಂಡು ಮತ್ತಷ್ಟು ತರಬೇತಿ ನೀಡಿ ಸಜ್ಜುಗೊಳಿಸಿದೆ. ಇದರಲ್ಲಿ ವೀರಣ್ಣ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಷ್ಟು ಪ್ರತಿಭೆಯನ್ನು ಹೊಂದಿದ್ದಾರೆ ಎನ್ನುತ್ತಾರೆ ತಂಡದ ಕೋಚ್ ಬಿ.ಎಸ್ ವೆಂಕಟೇಶ್.
'ಈಗ ಬಾಗಲಕೋಟೆಯಲ್ಲಿ ಸಿಟಿ ಸ್ಪೋರ್ಟ್ಸ್ ಕ್ಲಬ್ ಹಾಕಿ ಕಾರ್ಯನಿರ್ವಹಿಸುತ್ತಿದೆ. ಈ ಕ್ಲಬ್‌ನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತಂದರೆ, ಈ ಭಾಗದಲ್ಲಿ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಲು ಅನುಕೂಲವಾಗುತ್ತದೆ' ಎನ್ನುತ್ತಾರೆ ಅಂಜನಯ್ಯ ಮತ್ತು ವೀರಣ್ಣ.
ಪ್ರತಿಭೆ ಪಂಡೂರಿ: ರಾಷ್ಟ್ರೀಯ ಪಂದ್ಯಾವಳಿಗೆ ಹೊರಟು ನಿಂತಿರುವ ರಾಜ್ಯ ತಂಡದ ಭರವಸೆಯ ಆಟಗಾರನೆಂದರೆ ಬಿಸಿಲುನಾಡು ಬಳ್ಳಾರಿಯ ಪಂಡೂರಿ ರಾಜು. ಇವರ ಬಗ್ಗೆ ತಂಡದ ಕೋಚ್ ತುಂಬು ವಿಶ್ವಾಸವನ್ನೇ ಇಟ್ಟುಕೊಂಡಿದ್ದಾರೆ. ಇವರು ಸಹ ಬಡತನದಲ್ಲಿ ಬೆಳೆದು ಬಂದವರಾಗಿದ್ದು, ಬಳ್ಳಾರಿಯ ಬೆಸ್ಟ್ ಸ್ಕೂಲ್‌ನಲ್ಲಿ ಹಾಕಿ ಆಡುವ ಮೂಲಕ, ದೊರಕಿದ ಅವಕಾಶದಲ್ಲಿ ಮಿಂಚಿ ತಮ್ಮ ಪ್ರತಿಭೆಯನ್ನು ಹೊರಸೂಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಬಳ್ಳಾರಿ ಜನತಾ ಸ್ಟೀಲ್ ವರ್ಕ್ (ಜೆಎಸ್‌ಡಬ್ಲ್ಯೂ) ಹಾಕಿ ತಂಡದಲ್ಲೂ ಸಮರ್ಥ ಹೋರಾಟ ನೀಡಿ, ನಂತರ ಇತ್ತೀಚೆಗೆ ರಾಷ್ಟ್ರೀಯ ತಂಡಕ್ಕೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.ರಕ್ಷಣಾ ವಿಭಾಗದಲ್ಲಿ ಹನುಮಂತ: ಹಾಕಿ ಸೌಲಭ್ಯಗಳು ದೊರಕದಿರುವ ರಾಜ್ಯದ ನಗರಗಳಲ್ಲಿ ರಾಯಚೂರು ಸಹ ಒಂದು. ಅಂತಹ ನಗರದಲ್ಲೇ ರಾಜ್ಯ ಕ್ರೀಡಾ ಹಾಸ್ಟೇಲ್‌ನಲ್ಲಿ ಸಿಕ್ಕ ಅಲ್ಪ ಅವಕಾಶಗಳನ್ನೇ ಬಳಸಿಕೊಂಡು, ರಾಯಚೂರು ಹಾಕಿ ಕ್ಲಬ್ ಪರ ತಮ್ಮ ಪ್ರತಿಭೆ ಮೆರೆದು ಈಗ ರಾಜ್ಯ ತಂಡದಲ್ಲಿ ಅವಕಾಶ ಗಿಟ್ಟಿಸಿರುವ ಅನುಮಂತ್ ಪಿ. ಸಹ ಬಡತನದಲ್ಲಿ ಅರಳಿದ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕರ್ನಾಟಕ ಪಂದ್ಯಗಳು:
ಪಂದ್ಯಾಳಿಯಲ್ಲಿ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಮಾರ್ಚ್ 29ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಒಡಿಶಾ ತಂಡದ ವಿರುದ್ಧ ಸೆಣಸಲಿದೆ. ನಂತರ ಮಾರ್ಚ್ 31ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ ಹೋರಾಟ ನಡೆಸಲಿದೆ. ನಂತರ ಏಪ್ರಿಲ್ 2ರಂದು ಹಿಮಾಚಲಪ್ರದೇಶದ ವಿರುದ್ಧ ಕಾದಾಡಲಿದೆ.

'ಈ ನಾಲ್ವರು ಆಟಗಾರರು ಉತ್ತರ ಕರ್ನಾಟಕದಿಂದ ಬಂದರೂ, ಅಪಾರ ಪ್ರತಿಭೆಯನ್ನು ಹೊಂದಿದ್ದಾರೆ. ಅದರಲ್ಲೂ ಪಂಡೂರಿ ರಾಜು ಮತ್ತು ಆಂಜನಯ್ಯ ಅವರು ನಮ್ಮ ತಂಡದ ಭರವಸೆಯ ಆಟಗಾರರು ಎನಿಸಿದ್ದಾರೆ. ಕರ್ನಾಟಕ ಹಾಕಿ ಸಂಸ್ಥೆಯಲ್ಲಿ ಇದುವರೆಗೂ ನಡೆದ ಹಾಕಿ ಶಿಬಿರದಲ್ಲಿ ನಾವು ಸೂಕ್ತ ತಯಾರಿ ನಡೆಸಿಕೊಂಡು ಪಂದ್ಯಾವಳಿಗೆ ಸಿದ್ಧರಾಗಿದ್ದೇವೆ. ಆದರೆ, ಶಿಬಿರ ನಡೆಸುವ ಸಮಯದಲ್ಲೇ ಮಕ್ಕಳಿಗೆ ಪರೀಕ್ಷೆ ನಡೆದಿದ್ದು, ಕೊಂಚ ತೊಂದರೆಯಾಗಿ ಪರಿಣಮಿಸಿತು. ಆದಾಗ್ಯೂ ನಾವು ಅಗ್ರಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದೇವೆ' ಟಿ ಬಿ.ಎಸ್ ವೆಂಕಟೇಶ್, ತಂಡದ ಕೋಚ್        'ಆಯ್ಕೆ ಸಮಿತಿ ಸದಸ್ಯರಾದ ಕೆನರಾ ಬ್ಯಾಂಕ್ ಸೋಮಣ್ಣ ಮತ್ತು ಕೆ.ಕೆ ಪೂಣಚ್ಚ ರಾಷ್ಟ್ರೀಯ ಪಂದ್ಯಾವಳಿಗೆ ಶ್ರೇಷ್ಠ ತಂಡವನ್ನೇ ಆಯ್ಕೆ ಮಾಡಿದ್ದಾರೆ. ಕಳೆದ 40 ದಿನಗಳಿಂದ ನಡೆದ ಶಿಬಿರದಲ್ಲಿ ಆಟಗಾರರಿಗೆ ಹುಮ್ಮಸ್ಸು ತುಂಬುವ ಕೆಲಸವನ್ನು ನಾನು ನಿರ್ವಹಿಸಿದ್ದೇನೆ. ಶಿಬಿರದಲ್ಲಿ ಆಟಗಾರರ ಉತ್ಸಾಹ ನೋಡಿದರೆ, ರಾಜ್ಯ ತಂಡ ಅಗ್ರಸ್ಥಾನ ಪಡೆಯುವುದರಲ್ಲಿ ಎರಡು ಮಾತಿಲ್ಲ'
- ಎಸ್.ಬಿ ರಮೇಶ್, ತಂಡದ ಮ್ಯಾನೇಜರ್

ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.