ಕ್ರೀಡೆ

ದುರ್ಬಲರ ಮೇಲೆ ಸವಾರಿಗೆ ಆಫ್ರಿಕಾ ಸನ್ನದ್ಧ

Published On :

ಚಿತ್ತಗಾಂಗ್: ದಕ್ಷಿಣ ಆಫ್ರಿಕಾ ಐಸಿಸಿ ವಿಶ್ವಕಪ್ ಟಿ-20 ಕ್ರಿಕೆಟ್ ಟೂರ್ನಿಯ ತನ್ನ ಮುಂದಿನ ಪಂದ್ಯದಲ್ಲಿ ಎದುರಾಗಲಿರುವ ದುರ್ಬಲ ನೆದರ್‌ಲ್ಯಾಂಡ್ಸ್ ತಂಡದ ವಿರುದ್ಧ ಗೆಲವು ದಾಖಲಿಸಿ ಸೆಮಿಫೈನಲ್ ಹಾದಿಯನ್ನು ಸರಳಗೊಳಿಸಿಕೊಳ್ಳಬೇಕಾಗಿದೆ. ಗೆಲವಿನೊಂದಿಗೆ ಉತ್ತಮ ರನ್ ಸರಾಸರಿ ಹೊಂದುವುದೂ ಸಹ ಅಷ್ಟೇ ಮುಖ್ಯವಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ನೆದರ್‌ಲ್ಯಾಂಡ್ಸ್ ತಂಡಗಳು ಗುರುವಾರ ಚಿತ್ತಗಾಂಗ್‌ನಲ್ಲಿ ನಡೆಯಲಿರುವ ಸೂಪರ್-10ರ ಗುಂಪು-1ರ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದೆ.
ದಕ್ಷಿಣ ಆಫ್ರಿಕಾ ಆಡಿದ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ಸೋಲು ಮತ್ತು ನ್ಯೂಜಿಲೆಂಡ್ ವಿರುದ್ಧ ಗೆಲವು ದಾಖಲಿಸಿ ಐದು ತಂಡಗಳ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನೆದರ್‌ಲ್ಯಾಂಡ್ಸ್ ಆಡಿದ ಒಂದು ಪಂದ್ಯದಲ್ಲಿ ಶ್ರೀಲಂಕಾ ಎದುರು ದಯನೀಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಕೇವಲ 39 ರನ್‌ಗಳಿಗೆ ಆಲೌಟಾಗಿದ್ದ ನೆದರ್‌ಲ್ಯಾಂಡ್ಸ್ ಟಿ-20 ಇತಿಹಾಸದಲ್ಲಿಯೇ ಕಡಿಮೆ ಮೊತ್ತ ದಾಖಲಿಸಿದ ಅಪಕೀರ್ತಿಗೆ ಒಳಗಾಗಿತ್ತು.
ಹಾಗೆಂದು ನಾಳಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ಪಡೆಯನ್ನು ದಕ್ಷಿಣ ಆಫ್ರಿಕನ್ನರು ಹಗುರವಾಗಿ ಕಾಣುವ ಹಾಗಿಲ್ಲ. ಏಕೆಂದರೆ ಅರ್ಹತಾ ಸುತ್ತಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಯಾನಕ ರೀತಿಯಲ್ಲಿ ಸ್ಫೋಟಿಸಿ ಕೊನೆಗೆ ಸೂಪರ್-10 ಹಂತಕ್ಕೆ ಪ್ರವೇಶ ಪಡೆದಿದ್ದ ನೆದರ್‌ಲ್ಯಾಂಡ್ಸ್ ಹೋರಾಟದ ಬಗ್ಗೆ ಆಫ್ರಿಕಾ ಎಚ್ಚರದಿಂದಿರಬೇಕಾಗುತ್ತದೆ.
ನ್ಯೂಜಿಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಕೊನೆಯ ಓವರಿನಲ್ಲಿ ಅಚ್ಚರಿಯ ರೀತಿಯಲ್ಲಿ ಗೆಲವು ದಾಖಲಿಸಿತ್ತು. ಬಹುತೇಕ ಗೆಲ್ಲುವ ಆಸೆಯನ್ನೇ ಕೈಬಿಟ್ಟಿದ್ದ ಆಫ್ರಿಕಾ ಪಡೆಯನ್ನು ವೇಗಿ ಡೇಲ್ ಸ್ಟೇಯ್ನ್ ಅಂತಿಮ ಎಸೆತದಲ್ಲಿ ಗೆಲವಿನ ಹಾದಿಗೆ ತಂದಿದ್ದರು. ಆ ಮೂಲಕ ಫಫ್ ಡು ಪ್ಲೆಸಿಸ್ ಸಾರಥ್ಯದ ತಂಡ 2 ರನ್‌ಗಳಿಂದ ರೋಚಕ ಗೆಲವು ತನ್ನದಾಗಿಸಿಕೊಂಡಿತ್ತು.
ಕಿಂಟಾನ್ ಡಿ ಕಾಕ್, ಎಬಿ ಡಿವಿಲಿಯರ್ಸ್, ಡುಮಿನಿ, ಡೇವಿಡ್ ಮಿಲ್ಲರ್, ಹಶೀಂ ಆಮ್ಲಾ, ಡೇಲ್ ಸ್ಟೇಯ್ನ್, ಅಲ್ಬಿ ಮಾರ್ಕೆಲ್ ಅವರು ದಕ್ಷಿಣ ಆಫ್ರಿಕಾದ ನಂಬಿಕಸ್ತ ಆಟಗಾರರಾಗಿದ್ದಾರೆ.
ಇನ್ನೊಂದೆಡೆ ಪೀಟರ್ ಬೋರೆನ್ ನಾಯಕತ್ವದ ನೆದರ್‌ಲ್ಯಾಂಡ್ಸ್ ಗೆಲವಿಗಾಗಿ ದೊಡ್ಡ ತಪಸ್ಸು ಮಾಡಬೇಕಿದೆ. ಆಫ್ರಿಕಾ ಸವಾಲನ್ನು ಹತ್ತಿಕ್ಕುವುದು ನೆದರ್‌ಲ್ಯಾಂಡ್ಸ್‌ಗೆ ಸುಲಭದ್ದಲ್ಲ. ಈಗಷ್ಟೇ ಜಾಗತಿಕ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ನೆದರ್‌ಲ್ಯಾಂಡ್ಸ್ ಸೋತರೆ ಕಳೆದುಕೊಳ್ಳುವುದೇನೂ ಇಲ್ಲ. ಆದರೂ, ಗೆದ್ದು ಹೊಸ ಇತಿಹಾಸ ಬರೆಯುವ ಉತ್ತಮ ಅವಕಾಶ ಅದರ ಮುಂದಿದೆ.
ಇಂದಿನ ಪಂದ್ಯಗಳು
ನೆದರ್‌ಲ್ಯಾಂಡ್ಸ್-ದ.ಆಫ್ರಿಕಾ
(ಸ್ಥಳ-ಚಿತ್ತಗಾಂಗ್, ಮ.3 ಗಂಟೆ)
ಇಂಗ್ಲೆಂಡ್-ಶ್ರೀಲಂಕಾ
(ಸ್ಥಳ-ಚಿತ್ತಗಾಂಗ್, ರಾತ್ರಿ 7 ಗಂಟೆ)

ಅಂಕಪಟ್ಟಿ
ಗುಂಪು-1
ತಂಡ    ಪಂದ್ಯ    ಜಯ    ಸೋಲು    ಅಂಕ    ರನ್‌ಸರಾಸರಿ
ಶ್ರೀಲಂಕಾ    2    2    0    4    ೤3.225
ನ್ಯೂಜಿಲೆಂಡ್    2    1    1    2    ೤0.276
ದಕ್ಷಿಣ ಆಫ್ರಿಕಾ    2    1    1    2    -0.075
ಇಂಗ್ಲೆಂಡ್    1    0    1    0    -1.688
ನೆದರ್‌ಲ್ಯಾಂಡ್ಸ್    1    0    1    0    -6.050
ಗುಂಪು-2
ತಂಡ    ಪಂದ್ಯ    ಜಯ    ಸೋಲು    ಅಂಕ    ರನ್‌ಸರಾಸರಿ
ಭಾರತ    2    2    0    4    ೤0.363
ವೆಸ್ಟ್ ಇಂಡೀಸ್    2    1    1    2    ೤1.752
ಪಾಕಿಸ್ತಾನ    2    1    1    2    ೤0.077
ಆಸ್ಟ್ರೇಲಿಯಾ    1    0    1    0    -0.800
ಬಾಂಗ್ಲಾದೇಶ    1    0    1    0    -3.650


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.