ಕಿವೀಸ್ಗೆ ನೆದರ್ಲ್ಯಾಂಡ್ಸ್ ಸುಲಭ ತುತ್ತು

ಚಿತ್ತಗಾಂಗ್: ನಾಯಕ ಬ್ರೆಂಡನ್ ಮೆಕಲಂ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 10ರ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಸುಲಭ ಗೆಲವು ದಾಖಲಿಸಿದೆ.
ಶನಿವಾರ ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 6 ವಿಕೆಟ್ಗಳ ಅಂತರದಿಂದ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೆದರ್ಲ್ಯಾಂಡ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 151 ರನ್ ದಾಖಲಿಸಿತು. ನಂತರ ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪಡೆ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್ ದಾಖಲಿಸಿ ಗೆಲವಿನ ನಗೆ ಬೀರಿತು. ಮೊದಲ ಗುಂಪಿನಲ್ಲಿ ನೆದರ್ಲ್ಯಾಂಡ್ಸ್ ಹೊರತು ಪಡಿಸಿ ಉಳಿದ ನಾಲ್ಕೂ ತಂಡಗಳು ಗೆಲವು ಹಾಗೂ ಸೋಲಿನ ಫಲಿತಾಂಶ ಪಡೆದಿರುವುದರಿಂದ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಹಾಗಾಗಿ ಈ ಗೆಲವು ನ್ಯೂಜಿಲೆಂಡ್ ತಂಡದ ಉಪಾಂತ್ಯದ ಹಾದಿ ಸುಗಮವಾಗುವಂತೆ ಮಾಡಿದೆ.
ಆದರೆ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಬೇಕಾದರೆ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲವು ದಾಖಲಿಸಲೇಬೇಕಾಗಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮೀಸ್ ಹಂತಕ್ಕೆ ಪ್ರವೇಶ ಪಡೆಯಲಿದೆ.
ಗೌರವ ಮೊತ್ತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಆಗಮಿಸಿದ ನೆದರ್ಲ್ಯಾಂಡ್ಸ್ ತಂಡದ ಬ್ಯಾಟ್ಸ್ಮನ್ಗಳು ಸಮರ್ಥ ರೀತಿಯಲ್ಲಿ ಕಿವೀಸ್ ಬೌಲರ್ಗಳನ್ನು ಎದುರಿಸಿದರು. ಹಾಗಾಗಿ ತಂಡ 151 ರನ್ಗಳ ಗೌರವ ಮೊತ್ತ ದಾಖಲಿಸಲು ಸಾಧ್ಯವಾಯಿತು. ಆರಂಭಿಕರಾಗಿ ಕಣಕ್ಕಿಳಿದ ಮೈಬರ್ಗ್(16) ಹಾಗೂ ಮೈಕಲ್ ಸ್ವಾರ್ಟ್(26) ತಂಡಕ್ಕೆ 34 ರನ್ಗಳ ಆರಂಭ ನೀಡಿದರು. ನಂತರ ಸತತವಾಗಿ ಮೂರು ವಿಕೆಟ್ ಕಳೆದುಕೊಂಡ ನೆದರ್ಲ್ಯಾಂಡ್ಸ್ ಸಂಕಷ್ಟ ಎದುರಿಸಿತು.
ಆಗ ಜತೆಯಾದ ಪೀಟರ್ ಬೊರೇನ್ (49) ಹಾಗೂ ಟಾಮ್ ಕೂಪರ್ (ಅಜೇಯ 40) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡ 150ರ ಗಡಿ ಮುಟ್ಟುವಂತೆ ಮಾಡಿದರು. ಇನ್ನು ನ್ಯೂಜಿಲೆಂಡ್ ತಂಡದ ಪರ ಕೈಲ್ ಮಿಲ್ಸ್, ಬೌಲ್ಟ್, ನಾಥನ್ ಮೆಕಲಂ ಹಾಗೂ ಮೆಕ್ಲೆನಾಗನ್ ತಲಾ 1 ವಿಕೆಟ್ ಪಡೆದರು.
ಮಾರಕವಾದ ಮೆಕಲಂ: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಬ್ರೆಂಡನ್ ಮೆಕಲಂ (65 ರನ್, 45 ಎಸೆತ, 4 ಬೊಂಡರಿ, 3 ಸಿಕ್ಸರ್) ಆಸರೆಯಾದರು.
ಆರಂಭದಲ್ಲೇ ಮಾರ್ಟೀನ್ ಗುಪ್ಟಿಲ್ ವಿಕೆಟ್ ಕಳೆದುಕೊಂಡ ಕಿವೀಸ್, ಒತ್ತಡಕ್ಕೆ ಸಿಲುಕಿತು. ನಂತರ ಕೇನ್ ವಿಲಿಯಮ್ಸ್(29), ರಾಸ್ ಟೇಲರ್ (18) ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದರೆ ಹಾಲೆಂಡ್ ಬೌಲರ್ಗಳನ್ನು ಕಾಡಿದ ಬ್ರೆಂಡನ್ ಮೆಕಲಂ ಅರ್ಧ ಶತಕ ದಾಖಲಿಸಿ ತಂಡವನ್ನು ಗೆಲವಿನತ್ತ ಕೊಂಡೋಯ್ದರು. ಅಂತಿಮವಾಗಿ ಕೋರೆ ಆ್ಯಂಡರ್ಸನ್(20) ಹಾಗೂ ನಿಶಾಮ್(7) ಅಜೇಯರಾಗುಳಿದರು. ನೆದರ್ಲ್ಯಾಂಡ್ಸ್ ಪರ ಟಿಮ್ ಗುಗ್ಟೆನ್ 30 ರನ್ಗಳಿಗೆ 3 ವಿಕೆಟ್ ಪಡೆದು ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್
ನೆದರ್ಲ್ಯಾಂಡ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 151 (ಪೀಟರ್ ಬೊರೇನ್ 49, ಟಾಮ್ ಕೂಪರ್ ಅಜೇಯ 40, ನಾಥನ್ 20ಕ್ಕೆ1)
ನ್ಯೂಜಿಲೆಂಡ್ 19 ಓವರ್ಗಳಲ್ಲಿ 4 ವಿಕೆಟ್ಗೆ 152 (ಬ್ರೆಂಡನ್ ಮೆಕಲಂ 65, ವಿಲಿಯಮ್ಸನ್ 29, ಟಿಮ್ ಗುಗ್ಟೆನ್ 30ಕ್ಕೆ3 )
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


