ಕ್ರೀಡೆ

ಸೆಮೀಸ್ಗೆ ಹರಿಣಗಳು, ಮನೆಗೆ ಆಂಗ್ಲರು

Published On :

ಚಿತ್ತಗಾಂಗ್: ನಾಯಕ ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆಲವು ದಾಖಲಿಸಿದೆ.
ಶನಿವಾರ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3 ರನ್ಗಳ ಅಂತರದಲ್ಲಿ ಗೆಲವು ದಾಲಿಸಿತು. ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಹರಿಣಗಳ ಪಡೆ 20 ಓವರ್ಗಳಲ್ಲಿ 5 ವಿಕೆಟ್ಗೆ 196 ರನ್ ದಾಖಲಿಸಿತು. ನಂತರ ಬ್ಯಾಟಿಂಗ್ ಮಾಡಿದ ಆಗ್ಲರು, 20 ಓವರ್ಗಳಲ್ಲಿ 7 ವಿಕೆಟ್ 193 ರನ್ ಗಳಿಸಿತು.
ಈ ಪಂದ್ಯ ಉಭಯ ತಂಡಗಳ ಸೆಮಿ ಫೈನಲ್ ಹಣೆಬರಹ ನಿರ್ಧರಿಸುವ ಪಂದ್ಯವಾಗಿದ್ದರಿಂದ ಹೆಚ್ಚು ಮಹತ್ವ ಪಡೆದುಕೊಂಡಿತು.
ಈ ಗೆಲವಿನ ಮೂಲಕ ದಕ್ಷಿಣ ಆಫ್ರಿಕಾ  6 ಅಂಕಗಳನ್ನು ಪಡೆದು ಸೆಮಿಫೈನಲ್  ಹಂತಕ್ಕೆ ಪ್ರವೇಶಿಸಿತು.
ಉತ್ತಮ ಆರಂಭ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕರಿಂದ ಉತ್ತಮ ಆರಂಭ ದೊರೆಯಿತು.
  ಹಶೀಂ ಆಮ್ಲಾ(56) ಹಾಗೂ ಖಿಂಟಾನ್ ಡಿ ಕಾಕ್ (29) ಮೊದಲ ವಿಕೆಟ್ಗೆ 90 ರನ್ ಪೇರಿಸುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ವೇಳೆ ಆಮ್ಲಾ, ಬ್ರಾಡ್ ಎಸೆತದಲ್ಲಿ ಅಲೆಕ್ಸ್ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು.
  ಆಮ್ಲಾ ವಿಕೆಟ್ ಕಳೆದುಕೊಂಡ ನಂತರ ಹರಿಣಗಳ ರನ್ ವೇಗ ಕುಂಠಿತವಾಯಿತು.
ಕಾಕ್, ಆಮ್ಲಾ ಹಿಂದೆಯೇ ಪೆವಿಲಿಯನ್ ಸೇರಿದರೆ, ಡುಮಿನಿ(5) ರನೌಟ್ ಆಗಿದ್ದು, ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಮಿಲ್ಲರ್ (19) ಹಾಗೂ ಮಾರ್ಕೆಲ್(3) ಕೊನೆ ಗಳಿಗೆಯಲ್ಲಿ ಔಟಾದರು. ಅಂತಿಮವಾಗಿ ಡಿವಿಲಿಯರ್ಸ್ (ಅಜೇಯ 69 ರನ್, 28 ಎಸೆತ, 9 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮಾಡಿದರು.
ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ದಕ್ಷಿಣ ಆಫ್ರಿಕಾ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ಯುವುದರ ಜತೆಗೆ ತಂಡದ ಸೆಮೀಸ್ ಆಸೆ ಜೀವಂತವಾಗಿರುವಂತೆ ಮಾಡಿದರು.
ಇಂಗ್ಲೆಂಡ್ ತಂಡದ ಪರ ಟಿಮ್ ಬ್ರೆಸ್ನನ್, ಕ್ರಿಸ್ ಜೋರ್ಡನ್, ಟ್ರೆಡ್ವೆಲ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ ಒಂದು ವಿಕೆಟ್ ಪಡೆದರು.
ಬೋಪಾರ ಹೋರಾಟ ವ್ಯರ್ಥ:
ದಕ್ಷಿಣ ಆಫ್ರಿಕಾ ತಂಡ ನೀಡಿದ ಬಹೃತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಿಂದ ಸಾಧಾರಣ ಆರಂಭ ದೊರೆಯಿತು.
ಆರಂಭಿಕರಾದ ಅಲೆಕ್ಸ್ ಹೇಲ್ಸ್  (38) ಹಾಗೂ ಮೈಕಲ್ ಲಂಬ್ (18) ತಂಡಕ್ಕೆ 46 ರನ್ಗಳ ಜತೆಯಾಟ ನೀಡಿದರು.
ಈ ವೇಳೆ ಲಂಬ್ ಪಾರ್ನೆಲ್ ಎಸೆತಕ್ಕೆ ಬಲಿಯಾದರು. ಮೊದಲ ವಿಕೆಟ್ ಪತನವಾದ ಬೆನ್ನಲ್ಲೇ ಮತ್ತೆರಡು ವಿಕೆಟ್ ಉದುರಿದ್ದು, ತಂಡಕ್ಕೆ ತೀವ್ರ ಹಿನ್ನಡೆ ಉಂಟುಮಾಡಿತು. ಈ ಮೂಲಕ ಇಂಗ್ಲೆಂಡ್ ತಂಡ 73 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ಮೊಯೀನ್ ಅಲಿ(10), ಐಯಾನ್ ಮಾರ್ಗನ್ 14, ನಿರಾಸೆ ಮೂಡಿಸಿದರು. ಈ ವೇಳೆ ಕೊಂಚ ಹೋರಾಟದ ಪ್ರದರ್ಶನ ನೀಡಿದ ಜೋಸ್ ಬಟ್ಲರ್ 34 ರನ್ ಗಳಿಸಿ ಔಟಾದರು.
ಅಂತಿಮ ಕ್ಷಣದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ರವಿ ಬೊಪಾರ ಇಂಗ್ಲೆಂಡ್ ತಂಡದ ಗೆಲವಿನ ಆಸೆಯನ್ನು ಮತ್ತೆ ಚಿಗುರಿಸಿದರು.
ಕೇವಲ 18 ರನ್ಗಳನ್ನು ಎದುರಿಸಿದ ಬೊಪಾರ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 31 ರನ್ ದಾಖಲಿಸಿದರು.
ಕ್ರಿಸ್ ಜೋರ್ಡನ್ 16ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಬ್ರೆಸ್ನ್ನ್ 17 ಹಾಗೂ ಬ್ರಾಡ್ 1 ರನ್ಗಳಿಸಿ ಅಜೇಯರಾಗುಳಿದರು.
ಮಿಂಚಿದ ಪಾರ್ನೆಲ್, ಸ್ಟೇಯ್ನ್: ದ ಬೃಹತ್ ಮೊತ್ತವನ್ನು ಪೇರಿಸಿದ ನಂತರ ಇಂಗ್ಲೆಂಡ್ನ ಸ್ಫೋಟಕ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕಲು ಹರಿಣಗಳ ಬೌಲರ್ಗಳಿಗೆ ಸ್ವಲ್ಪ ಹೆಚ್ಚಿನ ಕಷ್ಟವಾಯಿತು.
ಆಂಗ್ಲರ ಆರಂಭಿಕ ಮೂವರು ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿ ತೋರಿದ ವೇಯ್ನ್ ಪಾರ್ನೆಲ್ ತಂಡಕ್ಕೆ ನಿಯಂತ್ರಣ ತಂದುಕೊಟ್ಟರು.
ಅಲ್ಲದೆ ಅಂತಿಮ ಓವರ್ನಲ್ಲಿ ಆಂಗ್ಲರಿಗೆ ಗೆಲವಿನ ದಡ ಸೇರಲು 23 ರನ್ಗಳ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ಡೇಲ್ ಸ್ಟೇಯ್ನ್ ಮತ್ತೊಮ್ಮೆ ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಈ ಗೆಲವಿನಿಂದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ಗೆ ಪ್ರವೇಶಿಸಿದೆ. ಇನ್ಗು ಮತ್ತೊಂದು ತಂಡದ ಸ್ಥಾನ ಖಚಿತವಾಗಿಲ್ಲ.
ನ್ಯೂಜಿಲೆಂಡ್ ಹಾಗೂ ಶ್ರೀಲಂಕಾತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಈ ತಂಡಗಳ ನಡುವಣ ಪಂದ್ಯ ಸೆಮಿಫೈನಲ್ಗೆ ಪ್ರವೇಶಿಸುವ ಎರಡನೇ ತಂಡವನ್ನು ನಿರ್ಧರಿಸಲಿದೆ.
ದಕ್ಷಿಣ ಆಫ್ರಿಕಾ ತಂಡದ ಪರ ಬ್ಯಾಟಿಂಗ್ನಲ್ಲಿ ಅಮೋಘ ಇನಿಂಗ್ಸ್ ಆಡಿದ ಡಿವಿಲಿಯರ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ಗೆ 196 (ಹಶೀಂ ಆಮ್ಲಾ 56, ಡಿವಿಲಿಯರ್ಸ್ ಅಜೇಯ 69, ಟ್ರೆಡ್ವೆಲ್ 25ಕ್ಕೆ1)
ಇಂಗ್ಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ಗೆ 193 (ಅಲೆಕ್ಸ್ 38, ಬೊಪಾರ 31, ಜೋಸ್ ಬಟ್ಲರ್ 34,  ಪಾರ್ನೆಲ್ 31ಕ್ಕೆ3, ಇಮ್ರಾನ್ ತಾಹಿರ್ 27ಕ್ಕೆ2)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.