ಸೆಮೀಸ್ಗಾಗಿ ಲಂಕಾ, ಕಿವೀಸ್ ಕಾದಾಟ
ಚಿತ್ತಗಾಂಗ್: ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಲು ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸುತ್ತಿದ್ದು, ಮತ್ತೊಂದು ರೋಚಕ ಕದನದ ನಿರೀಕ್ಷೆ ಹುಟ್ಟಿಸಿದೆ.
ಸೋಮವಾರ ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಗುಂಪಿನ ಸೂಪರ್ 10 ಹಂತದ ಪಂದ್ಯದಲ್ಲಿ ಗೆಲವು ದಾಖಲಿಸುವ ತಂಡ ಸೆಮಿಫೈನಲ್ಗೆ ಪ್ರವೇಶಿಸುವುದರಿಂದ ಈ ಪಂದ್ಯಕ್ಕೆ ಮಹತ್ವ ಹೆಚ್ಚಿದೆ.
ಶ್ರೀಲಂಕಾ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲವು ಹಾಗೂ ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಇನ್ನು ನ್ಯೂಜಿಲೆಂಡ್ ತಂಡವು ಸಹ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲವು ಹಾಗೂ 1ರಲ್ಲಿ ಸೋಲನುಭವಿಸಿದೆ. ಹೀಗಾಗಿ ಉಭಯ ತಂಡಗಳು ನಾಲ್ಕು ಅಂಕಗಳೊಂದಿಗೆ ಸಮಬಲ ಸಾಧಿಸಿವೆ. ಹಾಗಾಗಿ ಈ ಪಂದ್ಯದಲ್ಲಿ ಗೆಲವು ದಾಖಲಿಸುವ ತಂಡ ಉಪಾಂತ್ಯಕ್ಕೆ ಪ್ರವೇಶ ಪಡೆಯಲಿದೆ.
ಒಂದುವೇಳೆ ಪಂದ್ಯಫಲಿತಾಂಶ ಕಾಣದೆ ಅಥವಾ ಟೈ ಆಗಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡರೆ, ಅತಿ ಹೆಚ್ಚು ರನ್ರೇಟ್ ಹೊಂದಿರುವ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.
ಶ್ರೀಲಂಕಾ ತಂಡ ಏಷ್ಯಾಕಪ್ ಗೆಲವಿನೊಂದಿಗೆ ವಿಶ್ವಕಪ್ ಪಂದ್ಯಾವಳಿಗೆ ಆಗಮಿಸಿತು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ದಾಖಲೆ ಗೆಲವು ಪಂದ್ಯಾವಳಿಯಲ್ಲಿ ಅತ್ಯುತ್ತಮ ಆರಂಭ ಪಡೆಯುವಂತೆ ಮಾಡಿತು. ಆದರೆ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲು ತಂಡಕ್ಕೆ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.
ಇನ್ನು ನ್ಯೂಜಿಲೆಂಡ್ ತಂಡ ಸಹ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಗೆಲವು ದಾಖಲಿಸಿತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು, ತಂಡ ಮಾಡು ಇಲ್ಲವೆ ಮಡಿ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿದೆ.
ಒಟ್ಟಿನಲ್ಲಿ ಪ್ರಬಲ ಎರಡೂ ತಂಡಗಳು ಮಹತ್ವದ ಪಂದ್ಯದಲ್ಲಿ ಕಾದಾಟ ನಡೆಸುತ್ತಿರುವುದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.
ಔಪಚಾರಿಕ ಪಂದ್ಯದಲ್ಲಿ ಇಂಗ್ಲೆಂಡ್ ಪ್ರಬಲ: ದಿನದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಕಾದಾಟ ನಡೆಸುತ್ತಿದ್ದು, ಈ ಎರಡೂ ತಂಡಗಳು ಪಂದ್ಯಾವಳಿಯಿಂದ ಹೊರಗುಳಿದಿರುವ ಪರಿಣಾಮ ಪಂದ್ಯ ಔಪಚಾರಿಕವಾಗಿದೆ.
ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋಲನುಭವಿಸಿತ್ತು, ನಂತರ ಶ್ರೀಲಂಕಾ ವಿರುದ್ಧ ರೋಚಕ ಗೆಲವು ದಾಖಲಿಸಿದರೆ, ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿ ಪಂದ್ಯಾವಳಿಯಿಂದ ಹೊರಗುಳಿಯಿತು.
ಇನ್ನು ನೆದರ್ಲ್ಯಾಂಡ್ಸ್ ತಂಡ ಆಡಿದ ಮೂರು ಪಂದ್ಯದಲ್ಲೂ ಸೋಲನುಭವಿಸಿದೆ. ಆದರೆ ಈ ತಂಡ ಯಾವಾಗ ಬೇಕಾದರೂ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿರುವುದರಿಂದ ಆಂಗ್ಲರು ಡಚ್ಚರನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಇಂದಿನ ಪಂದ್ಯಗಳು
ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್
ಮಧ್ಯಾಹ್ನ 3ಕ್ಕೆ
ಶ್ರೀಲಂಕಾ ಮತ್ತು ನ್ಯೂಜಿಲೆಂಡ್
ಸಂಜೆ 7ಕ್ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

