ಕ್ರೀಡೆ

ಆರ್ಪಿಎಲ್ ಟೂರ್ನಿ ಲಲಿತ್ ಮೋದಿ ಚಿತ್ತ

ಆರ್ಪಿಎಲ್ ಟೂರ್ನಿ ಲಲಿತ್ ಮೋದಿ ಚಿತ್ತ
Published On :

ಜೈಪುರ: ಬಿಸಿಸಿಐ ವಿರೋಧದ ನಡುವೆಯೂ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಈಗ ರಾಜಸ್ಥಾನ ಪ್ರಿಮಿಯರ್ ಲೀಗ್ ನಡೆಸಲು ಚಿಂತನೆ ನಡೆಸಿದ್ದಾರೆ.
ಬುಧವಾರ ಈ ವಿಷಯವನ್ನು ತಿಳಿಸಿರುವ ಆರ್ಸಿಎ ನೂತನ ಕಾರ್ಯದರ್ಶಿ ಸುಮೆಂದ್ರ ತಿವಾರಿ, ಬುಧವಾರ ನಡೆದ ಸಂಸ್ಥೆಯ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ರಾಜಸ್ಥಾನ ಪ್ರಿಮಿಯರ್ ಲೀಗ್ ಅನ್ನು ಆರಂಭಿಸುವ ಬಗ್ಗೆ ಲಲಿತ್ ಮೋದಿ ಅವರು ಚರ್ಚಿಸಿದ್ದಾರೆ. ಮಧ್ಯಾಹ್ನ 3ರಿಂದ ಸುಮಾರು 2 ಗಂಟೆಗಳ ಕಾಲ ವಿಡಿಯೊ ಕಾನ್ಫೆರೆನ್ಸ್ ಮೂಲಕ ಮೋದಿ, ಈ ಕಾರ್ಯಕಾರಿ ಸಮಿತಿ ಸಭೆಯನ್ನು ನಡೆಸಿದರು ಎಂದು ತಿಳಿಸಿದ್ದಾರೆ. ಈ ಸಭೆಯಲ್ಲಿ ಆರ್ಪಿಎಲ್ ಜತೆಗೆ, ಬಿಸಿಸಿಐ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ.
ನಾವು ಬಿಸಿಸಿಐ ನಿರ್ಧಾರದ ವಿರುದ್ಧ ಜೈಪುರ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ನಮ್ಮ ಸಂಸ್ಥೆಯನ್ನು ಹಾಗೂ ನ್ಯಾಯಾಲಯ ನೀಡಿದ ತೀರ್ಪುನ್ನು ಬಿಸಿಸಿಐ ವಜಾಗೊಳಿಸಲು ಸಾಧ್ಯವಿಲ್ಲ. ನಮ್ಮ ಪರ ವಕೀಲರಾದ ಸುದೀಪ್ ಹೊರಾ ಈ ಕುರಿತು ಸರಿಯಾದ ದಾಖಲೆ ಸಿದ್ಧಪಡಿಸುತ್ತಿದ್ದು, ಆದಷ್ಟು ಬೇಗ ಜೈಪುರ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ ಎಂದರು.
ಇನ್ನು ಆರ್ಸಿಎನ ಯೋಜನೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ತಿವಾರಿ, ನಾವು ರಾಜ್ಯದಲ್ಲಿ ವಿಶ್ವ ದರ್ಜೆಯ ಗುಣಮಟ್ಟದ ಎಂಟು ಅಕಾಡೆಮಿಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ. ಜೈಪುರದಲ್ಲಿರುವ ನಮ್ಮ ಅಕಾಡೆಮಿಯನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ರೇಗ್ ಚಾಪೆಲ್ ಪ್ರಶಂಸೆ ನೀಡಿದ್ದು, ಈ ಅಕಾಡೆಮಿಗಳಿಂದ ಎಲ್ಲಾ ವರ್ಗದ ಆಟಗಾರರು ಪ್ರಯೋಜನ ಪಡೆಯಲಿದ್ದಾರೆ. ಜೈಪುರ ಹಾಗೂ ಉದಯ್ಪುರದಲ್ಲಿ ಎರಡು ನೂತನ ಕ್ರೀಡಾಂಗಣವನ್ನು ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಜೈಪುರದಲ್ಲಿರುವ ಸವಾಯ್ ಮಾನ್ಸಿಂಗ್ ಕ್ರೀಡಾಂಗಣ ಸರ್ಕಾರದ್ದಾಗಿದ್ದು, ನಾವು ಸ್ವಂತ ಕ್ರೀಡಾಂಗಣ ಹೊಂದಲು ಯೋಚಿಸಿದ್ದೇವೆ ಎಂದು ತಿಳಿಸಿದ್ದಾರೆ. ಮೋದಿ ಭಾರತಕ್ಕೆ ಮರಳುವ ತನಕ ಲಂಡನ್ನಿಂದಲೇ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.