ಮಳೆ ಬಿಟ್ಟರೆ ಆಟ ಚೆನ್ನ
ಬೆಂಗಳೂರು: ನಿಜಕ್ಕೂ ಇದೊಂದು ಮಹಾಕದನವೇ ಎನ್ನುವಂತಹ ಲೆಕ್ಕಾಚಾರದಲ್ಲಿ ಕ್ರಿಕೆಟ್ ಪಂಡಿತರಿದ್ದಾರೆ. ಏಕೆಂದರೆ, ಇಲ್ಲಿ ಎದುರಾಗುತ್ತಿರುವ ಎರಡೂ ಐಪಿಎಲ್ ತಂಡಗಳು ಮಹಾನ್ ಶಸ್ತ್ರಧಾರಿ ಬ್ಯಾಟ್ಸ್ಮನ್ಗಳನ್ನು ಹೊಂದಿರುವುದರಿಂದ ಗುಡುಗು ಸಿಡಿಲಿನಿಂದ ಕೂಡಿರುವ ರನ್ ಮಳೆ ಸುರಿಯಬಹುದೆಂಬ ನಿರೀಕ್ಷೆ ಎಲ್ಲರದ್ದಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಐಪಿಎಲ್ ಟಿ-20 ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಡೇವಿಡ್ ಮಿಲ್ಲರ್, ಜಾರ್ಜ್ ಬೇಯ್ಲಿ ಮತ್ತು ವೀರೇಂದ್ರ ಸೆಹವಾಗ್ ಅಪಾಯಕಾರಿ ಬ್ಯಾಟ್ಸ್ಮನ್ಗಳಾಗಿದ್ದಾರೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ರಂತಹ ಸ್ಫೋಟಕ ದಾಂಡಿಗರಿದ್ದಾರೆ.
ಈ ಬ್ಯಾಟ್ಸ್ಮನ್ಗಳು ಒಬ್ಬರಿಗಿಂತ ಒಬ್ಬರು ತೀರ ಅಪಾಯಕಾರಿಯೇ. ಹಾಗಾಗಿ, ಇಲ್ಲಿ ಬೌಲರ್ಗಳಿಗೆ ಅಗ್ನಿ ಪರೀಕ್ಷೆಯೇ ಕಾದಿದೆ. ಯಾರು ಹೇಗೆ ಧೂಳೀಪಟವಾಗುತ್ತಾರೆ ಎನ್ನುವುದೇ ಕಷ್ಟ. ಅಂತೆಯೇ ಎರಡೂ ಪಡೆಗಳ ಬೌಲರ್ಗಳು ಹೆಚ್ಚು ಚಿಂತಿತರಾಗಿದ್ದಾರೆ. ಈಗಾಗಲೇ ನಾಲ್ಕು ಬಾರಿ ಶತಕದ ಹೊಸ್ತಿಲಲ್ಲಿ ಮುಗ್ಗರಿಸಿರುವ ಮ್ಯಾಕ್ಸ್ವೆಲ್ ಸದ್ಯ ಟೂರ್ನಿಯಲ್ಲೇ ಅತಿ ಹೆಚ್ಚು ರನ್ಗಳಿಸಿರುವ ಆಟಗಾರರಾಗಿದ್ದಾರೆ. ಮನಬಂದಂತೆ ಬೌಲರ್ಗಳ ಮೇಲೆ ಹರಿಹಾಯುತ್ತಿರುವ ಅವರು 7 ಪಂದ್ಯಗಳಿಂದ 435 ರನ್ ಸಂಪಾದಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಎದುರಾಳಿಯ ಪ್ರತಿಯೊಬ್ಬ ದಾಳಿಕಾರನನ್ನು ಕಠೋರವಾಗಿ ಶಿಕ್ಷಿಸಿದ್ದ ಅವರು ಕೇವಲ 38 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 90 ರನ್ ಸಿಡಿಸಿದ್ದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿದೆ.
ಇನ್ನು ಆರ್ಸಿಬಿ ಮಧ್ಯಮ ಕ್ರಮಾಂಕದ ಆಟಗಾರ ಡಿವಿಲಿಯರ್ಸ್ ಕೂಡ ಇದೇ ಅಂಕಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಡುಗಿದ್ದನ್ನು ಯಾರೂ ಮರೆಯುವಂತಿಲ್ಲ. ಆದರಲ್ಲೂ ಅವರು ವಿಶ್ವದ ನಂಬರ್ ಒನ್ ವೇಗದ ಬೌಲರ್ ಡೇಲ್ ಸ್ಟೇಯ್ನ್ರ ಓವರ್ವೊಂದರಲ್ಲಿ 24 ರನ್ ಸಿಡಿಸುವ ಮೂಲಕ ಸೋಲಿನ ಹಾದಿ ಹಿಡಿದಿದ್ದ ರಾಯಲ್ ಚಾಲೆಂಜರ್ಸ್ಗೆ ಅಂತಿಮವಾಗಿ ಗೆಲವು ತಂದುಕೊಟ್ಟಿದ್ದರು. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲನುಭವಿಸಿದ್ದ ಆರ್ಸಿಬಿ ಈಗ ತವರಿನ ಲಾಭ ಪಡೆಯುವ ಮೂಲಕ ಮತ್ತೆ ಗೆಲವಿನ ಲಹರಿಗೆ ಮರಳುವ ವಿಶ್ವಾಸದಲ್ಲಿದೆ.
ಆದರೂ ಆರ್ಸಿಬಿ ಬ್ಯಾಟ್ಸ್ಮನ್ಗಳ ಪೈಕಿ ನಾಯಕ ವಿರಾಟ್ ಕೊಹ್ಲಿ, ಗೇಯ್ಲ್ ಮತ್ತು ಯುವರಾಜ್ ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸುತ್ತಿಲ್ಲ. ಕೆಲವೊಮ್ಮೆ ತಂಡವನ್ನು ಗೆಲವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿ ಕೊನೆಗೆ ಕೈಕೊಟ್ಟು ಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ಎನಿಸಿದೆ. ತಂಡದ ಮಾಲೀಕ ವಿಜಯ್ ಮಲ್ಲ ಅತಿ ಹೆಚ್ಚು ಮುಖಬೆಲೆ ನೀಡಿ ಯುವರಾಜ್ರನ್ನು (14 ಕೋಟಿ ರೂ. ಮೊತ್ತಕ್ಕೆ) ಖರೀದಿಸಿದ್ದರು. ಆದರೆ, ಯುವಿ ಅದಕ್ಕೆ ಅದಕ್ಕೆ ತಕ್ಕಂತೆ ಗುಡುಗುವಲ್ಲಿ ವಿಫಲರಾಗಿದ್ದಾರೆ.
ಇನ್ನು ಆರ್ಸಿಬಿ ಬೌಲಿಂಗ್ ವಿಭಾಗ ಸಮತೋಲನದಿಂದ ಕೂಡಿದೆ. ವರುಣ್ ಅರುಣ್ (ಈಗಾಗಲೇ 11 ವಿಕೆಟ್), ಮಿಚೆಲ್ ಸ್ಟಾರ್ಕ್ (9 ವಿಕೆಟ್) ಮತ್ತು ಲೆಗ್ಸ್ಪಿನ್ನರ್ ಯುಜವೇಂದ್ರ ಚಾಹಲ್ (8 ವಿಕೆಟ್) ತಂಡದ ಭರವಸೆಯ ಬೌಲರ್ಗಳಾಗಿದ್ದಾರೆ.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಎದುರು ಸೋಲನುಭವಿಸಿದ್ದು ಬಿಟ್ಟರೆ, ಉಳಿದ ಆರೂ ಪಂದ್ಯಗಳಲ್ಲಿ ರೋಚಕ ಗೆಲವು ಸಂಪಾದಿಸಿರುವ ಪಂಜಾಬ್ ತಂಡ ಆರ್ಸಿಬಿಯನ್ನು ಪುಡಿಗಟ್ಟಲು ನಿರ್ಧರಿಸಿದೆ. ಬ್ಯಾಟಿಂಗ್ ವಿಭಾಗವೇ ಅದರ ದೊಡ್ಡ ಶಕ್ತಿಯಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ನ ಬೌಲಿಂಗ್ ವಿಭಾಗ ಕೂಡ ಗುಣಮಟ್ಟದಿಂದ ಕೂಡಿದೆ. ಮಿಚೆಲ್ ಜಾನ್ಸನ್, ಬೆನ್ಹಿಲ್ಫೆನ್ಹಾಸ್, ಸಂದೀಪ್ ಶರ್ಮಾ, ರಿಶಿ ಧವನ್, ಅಕ್ಷರ್ ಪಟೇಲ್ ಶಿಸ್ತಿನ ದಾಳಿ ನಡೆಸಬಲ್ಲರು.
ಮಳೆ ಬಿಟ್ಟರೆ ರನ್ ಹೊಳೆ ನಿರೀಕ್ಷೆ
ಚಿನ್ನಸ್ವಾಮಿ ಕ್ರೀಡಾಂಗಣ ರನ್ ಹೊಳೆ ಹರಿಸುವುದರಲ್ಲಿ ಹೆಸರುವಾಸಿ. ಈ ಅಂಕಣದಲ್ಲಿ ಬ್ಯಾಟ್ಸ್ಮನ್ಗಳು ಮನಸೋಇಚ್ಛೆಯಾಗಿ ಗರ್ಜಿಸಬಲ್ಲರು. ಆದರೆ, ಆರ್ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯಕ್ಕೆ ಇರುವ ಒಂದು ಅತಂಕವೆಂದರೆ ಮಳೆ. ಮೂಲಗಳ ಪ್ರಕಾರ ಪಂದ್ಯದ ದಿನ ಮಳೆಯಾಗುವ ಸಾಧ್ಯತೆಯಿದೆ. ಇದು ಯಾವ ಪ್ರಮಾಣದಲ್ಲಿರುತ್ತದೆ ಎಂಬುದರ ಮೇಲೆ ಆಟ ನಡೆಯುವುದು ಅಥವಾ ರದ್ದಾಗುವುದು ಅವಲಂಬಿಸಿದೆ. ಪಂದ್ಯಕ್ಕೆ ಮುನ್ನ ಮಳೆ ಸುರಿದು ನಿಂತರೂ ಬೇಗನೆ ಮೈದಾನವನ್ನು ಒಣಗಿಸಿ ಆಟಕ್ಕೆ ಅನುಕೂತ ಮಾಡಿಕೊಡುವ ಉತ್ತಮ ವ್ಯವಸ್ಥೆಯಂತೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಹಾಗಾಗಿ, ಸಂಘಟನಾಕಾರರು ಪಂದ್ಯ ನಡೆಯುವ ವಿಶ್ವಾಸವನ್ನು ಹೊಂದಿದ್ದಾರೆ. ಆದರೆ, ಪಂದ್ಯದ ವೇಳೆ ಧಾರಾಕರ ಮಳೆ ಸುರಿಯಲಾರಂಭಿಸಿದರೆ ಮಾತ್ರ ಆಟ ಕಷ್ಟವಾಗಬಹುದು.
ಪಂದ್ಯದ ಸಮಯ: ರಾತ್ರಿ 8ಕ್ಕೆ
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 7 6 1 12 1.214
ಚೆನ್ನೈ ಸೂಪರ್ ಕಿಂಗ್ಸ್ 8 6 2 12 0.640
ರಾಜಸ್ಥಾನ ರಾಯಲ್ಸ್ 7 5 2 10 0.483
ಕೋಲ್ಕತಾ ನೈಟ್ ರೈಡರ್ಸ್ 8 3 5 6 -0.097
ರಾಯಲ್ ಚಾಲೆಂಜರ್ಸ್ ಬೆಂಗಳೂರು 7 3 4 6 -0.266
ಮುಂಬೈ ಇಂಡಿಯನ್ಸ್ 7 2 5 4 -0.488
ಸನ್ರೈಸರ್ಸ್ ಹೈದರಾಬಾದ್ 6 2 4 4 -0.571
ಡೆಲ್ಲಿ ಡೇರ್ಡೆವಿಲ್ಸ್ 8 2 6 4 -0.933
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

