ಕ್ರೀಡೆ

ವ್ಯರ್ಥವಾಯ್ತು ಯುವರಾಜನ ಆಟ

ವ್ಯರ್ಥವಾಯ್ತು ಯುವರಾಜನ ಆಟ
Published On :

ಬೆಂಗಳೂರು: ಅಂತಿಮ ಕ್ಷಣದಲ್ಲಿ ಸ್ಟೀವನ್ ಸ್ಮಿತ್ (48) ಹಾಗೂ ಜೇಮ್ಸ್ ಫಾಕ್ನರ್ (41) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ರೋಚಕ ಗೆಲವು ದಾಖಲಿಸಿದೆ.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆತಿಥೇಯ ಆರ್‌ಸಿಬಿ ವಿರುದ್ಧ ಇನ್ನು 7 ಎಸೆತಗಳು ಬಾಕಿ ಇರುವಂತೆ 5 ವಿಕೆಟ್‌ಗಳ ರೋಚಕ ಗೆಲವು ದಾಖಲಿಸಿದೆ.  ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಂತರ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ತಂಡ 190 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್ ಕಲೆ ಹಾಕಿ ರೋಚಕ ಗೆಲವು ದಾಖಲಿಸಿತು. ಈ ಸೋಲಿನಿಂದ ಆರ್‌ಸಿಬಿ ತಂಡದ  ಪ್ಲೇ ಆಫ್ ಹಾದಿ ಕಠಿಣವಾಗಿದೆ.
ಆರಂಭಿಕ ಹಿನ್ನಡೆ: ಆರ್‌ಸಿಬಿ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡದ ಪರ ಹೋರಾಟ ನಡೆಸಿದ್ದು, ಕರ್ನಾಟಕದ ಆಟಗಾರ ಕರುಣ್ ನಾಯರ್ (56 ರನ್, 39 ಎಸೆತ, 8 ಬೌಂಡರಿ).
ಆರಂಭಿಕರಾಗಿ ಕಣಕ್ಕಿಳಿದ ರಹಾನೆ (24), ನಂತರ ಬಂದ ವ್ಯಾಟ್ಸನ್ (1), ಸಂಜು ಸ್ಯಾಮ್ಸನ್ (13), ಸ್ಟುವರ್ಟ್ ಬಿನ್ನಿ (1) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಸ್ಮಿತ್, ಫಾಕ್ನರ್ ಮೋಡಿ: ತಂಡ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಜತೆಯಾದ ಸ್ಟೀವ್ ಸ್ಮಿತ್ ಹಾಗೂ ಜೇಮ್ಸ್ ಫಾಕ್ನರ್ ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬದಲಿಸಿದರು.
ಈ ಜೋಡಿ 5ನೇ ವಿಕೆಟ್‌ಗೆ 32 ಎಸೆತಗಳಲ್ಲಿ 85 ರನ್‌ಗಳ ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಗೆಲವಿನ ದಡ ಸೇರಿಸಿದರು.
ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ಕಾಡಿದ ಸ್ಟೀವನ್ ಸ್ಮಿತ್ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ ಅಜೇಯ 48 ರನ್ ದಾಖಲಿಸಿದರು. ಇನ್ನು ಜೇಮ್ಸ್ ಫಾಕ್ನರ್ 17 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 41 ರನ್ ದಾಖಲಿಸಿದರು.
ಜೀವ ತುಂಬಿದ ಯುವಿ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಆರ್‌ಸಿಬಿ 40 ರನ್‌ಗಳಿಗೆ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡ ಆರಂಭಿಕ ಆಘಾತ ಎದುರಿಸಿದ್ದ ತಂಡದ ಇನಿಂಗ್ಸ್‌ಗೆ ಜೀವ ತುಂಬಿದ್ದು ಯುವರಾಜ್ ಸಿಂಗ್ (83 ರನ್, 38 ಎಸೆತ, 7 ಬೌಂಡರಿ, 7 ಸಿಕ್ಸರ್). ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಎಬಿ ಡಿವಿಲಿಯರ್ ಹಾಗೂ ಯುವರಾಡ್ 4ನೇ ವಿಕೆಟ್‌ಗೆ ಅಬ್ಬರದ 132 ರನ್‌ಗಳ ಜತೆಯಾಟ ನೀಡಿದರು. ಇನ್ನು ಯುವಿಗೆ ಬೆಂಬಲವಾಗಿ ನಿಂತ ಎಬಿ ಡಿವಿಲಿಯರ್ಸ್ (58 ರನ್, 32 ಎಸೆತ, 1 ಬೌಂಡರಿ, 5 ಸಿಕ್ಸರ್ ಸ್ಫೋಟಿಸುವ ಮೂಲಕ ತಂಡ ಸುಸ್ಥಿತಿಗೆ ತಲುಪಲು ನೆರವಾದರು. ಸತತ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದ ಯುವರಾಜ್ ಈ ಪಂದ್ಯದಲ್ಲಿ ಉತ್ತರ ನೀಡಿದರು.
ಹೆಚ್ಚಿದ ರನ್ ವೇಗ: ಆರಂಭಿಕ 10 ಓವರ್‌ಗಳಲ್ಲಿ ಕೇವಲ 57 ರನ್ ದಾಖಲಿಸಿದ್ದ ಆರ್‌ಸಿಬಿ, ನಂತರ ತನ್ನ ರನ್ ವೇಗವನ್ನು ಹೆಚ್ಚಿಸಿಕೊಂಡಿತು. 11ನೇ ಓವರ್‌ನಿಂದ 15ನೇ ಓವರ್‌ವರೆಗೆ ವಿಕೆಟ್ ಕಳೆದುಕೊಳ್ಳದೇ 49 ರನ್ ದಾಖಲಿಸಿ ತಂಡದ ಮೊತ್ತ 100ರ ಗಡಿ ದಾಟಿತು. ಇನ್ನು ಅಂತಿಮ 5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 84 ರನ್ ಕಲೆ ಹಾಕಿ 190 ರನ್ ಗಡಿ ಮುಟ್ಟುವಂತಾಯಿತು.
ಅಲ್ಲದೆ ಬೌಲಿಂಗ್‌ನಲ್ಲೂ ಮಿಂಚಿದ ಯುವರಾಜ್ ಸಿಂಗ್ 4 ಓವರ್‌ಗಳಲ್ಲಿ 35 ರನ್‌ಗಳಿಗೆ 4 ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ತಂಡ ನಿಯಂತ್ರಣ ಸಾಧಿಸುವಂತೆ ಮಾಡಿದರು. ಆದರೆ ಅಂತಿಮ ಓವರ್‌ಗಲಲ್ಲಿ ಇತರೆ ಬೌಲರ್‌ಗಳು ದುಬಾರಿಯಾಗಿದ್ದು, ತಂಡದ ಸೋಲಿಗೆ ಕಾರಣವಾಯಿತು.



ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 190
ವಿರಾಟ್ ಕೊಹ್ಲಿ ಸಿ ಭಾಟಿಯಾ ಬಿ ರಿಚರ್ಡ್ಸನ್ 4, ಕ್ರಿಸ್ ಗೇಯ್ಲ್ ಸಿ ಸ್ಯಾಮ್ಸನ್ ಬಿ ತಾಂಬೆ 19, ವಿಜಯ್ ಜೋಲ್ ಸಿ ವ್ಯಾಟ್ಸನ್ ಬಿ ಟೆವಾಟಿಯಾ 16, ಡಿವಿಲಿಯರ್ಸ್ ಸಿ ರಹಾನೆ ಬಿ ಫಾಕ್ನರ್ 58, ಯುವರಾಜ್ ಸಿಂಗ್ ಎಲ್‌ಬಿ ರಿಚರ್ಡ್ಸನ್ 83, ಅಲ್ಬೀ ಮಾರ್ಕೆಲ್ ಅಜೇಯ 1, ಪಾರ್ಥೀವ್ ಪಟೇಲ್ 2
ಇತರೆ (ಲೆಗ್ ಬೈಸ್-1, ವೈಡ್-5) 7
ವಿಕೆಟ್ ಪತನ: 1-6, 2-38, 3-40, 4-172, 5-186.
ಬೌಲಿಂಗ್ ವಿವರ: ಕೇನ್ ರಿಚರ್ಡ್ಸ್‌ನ್ 4-0-43-2, ಶೇನ್ ವ್ಯಾಟ್ಸನ್ 4-0-35-0, ಜೇಮ್ಸ್ ಫಾಕ್ನರ್ 4-0-42-1, ಪ್ರವೀಣ್ ತಾಂಬೆ 4-0-38-1, ರಾಹುಲ್ ಟೆವಾಟಿಯಾ 3-0-17-1, ರಜತ್ ಭಾಟಿಯಾ 1-0-13-0



ರಾಜಸ್ಥಾನ ರಾಯಲ್ಸ್ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 191
ಅಜಿಂಕ್ಯ ರಹಾನೆ ಸಿ ಪಟೇಲ್ ಬಿ ಚಾಹಲ್ 24, ಕರುಣ್ ನಾಯರ್ ಬಿ ಯುವರಾಜ್ 56, ಶೇನ್ ವ್ಯಾಟ್ಸನ್ ಬಿ ಯುವರಾಜ್ 1, ಸ್ಟುವರ್ಟ್ ಬಿನ್ನಿ ಸಿ ರೊಸೊ ಬಿ ಯುವರಾಜ್ 1, ಸಂಜು ಸ್ಯಾಮ್ಸನ್ ಸಿ ಮತ್ತು ಬಿ ಯುವರಾಜ್ 13, ಸ್ಟೀವನ್ ಸ್ಮಿತ್ ಅಜೇಯ 48, ಜೇಮ್ಸ್ ಫಾಕ್ನರ್ ಅಜೇಯ 41,
ಇತರೆ: (ಲೆಗ್ ಬೈ 1, ವೈಡ್ 5, ನೊಬಾಲ್ 1) ಒಟ್ಟು 7
ವಿಕೆಟ್ ಪತನ: 1-54, 2-61, 3-63, 4-82, 5-106
ಬೌಲಿಂಗ್ ವಿವರ: ಆಲ್ಬಿ ಮಾರ್ಕೆಲ್ 2-0-20-0, ಮಿಚೆಲ್ ಸ್ಟಾರ್ಕ್ 3-0-33-0, ಅಶೋಕ್ ದಿಂಡಾ 3-0-37-0, ವರುಣ್ ಅರುಣ್ 2.5-0-41-0, ಯುವರಾಜ್ ಸಿಂಗ್ 4-0-35-4, ಯುಜ್ವೆಂದ್ರ ಚಾಹಲ್ 4-0-24-1

ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.