ವಿಶ್ವಕಪ್ ಹಾಕಿಗೆ ಸರ್ದಾರ್ ಸಾರಥಿ
ನವದೆಹಲಿ: ಅನುಭವಿ ಆಟಗಾರ ಗುರ್ಬಾಜ್ ಸಿಂಗ್ ಮುಂಬರುವ ವಿಶ್ವಕಪ್ ಹಾಕಿ ಚಾಂಪಿಯನ್ಶಿಪ್ಗಾಗಿ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ.
ನೆದರ್ಲ್ಯಾಂಡ್ಸ್ನ ಹಾಗ್ನಲ್ಲಿ ಮೇ 31ರಿಂದ ಆರಂಭವಾಗಲಿರುವ ಪ್ರತಿಷ್ಠಿತ ವಿಶ್ವಕಪ್ ಹಾಕಿ ಸಮರಕ್ಕಾಗಿ ಬುಧವಾರ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಖ್ಯಾತ ಸಂಪರ್ಕ ಆಟಗಾರ ಸರ್ದಾರ್ ಸಿಂಗ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದೆ. ಮತ್ತೊಬ್ಬ ಅನುಭವಿ, ಫುಲ್ಬ್ಯಾಕ್ ಆಟಗಾರ ರೂಪಿಂದರ್ ಪಾಲ್ ಸಿಂಗ್ ಉಪನಾಯಕರಾಗಿದ್ದಾರೆ.
25ರ ಗುರ್ಬಾಜ್ ಸಿಂಗ್ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದರು. ಬಳಿಕ ಅವರನ್ನು ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಇದೀಗ ಸುಮಾರು ಎರಡು ವರ್ಷಗಳ ನಂತರ ಹಾಕಿ ಇಂಡಿಯಾ, ಗುರ್ಬಾಜ್ಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಲ್ಪಿಸಿದೆ.
ಚೆನ್ನೈನಲ್ಲಿ ನಡೆದ 2007 ಏಷ್ಯಾ ಕಪ್ ಗೆದ್ದುಕೊಂಡ ಭಾರತ ತಂಡದ ಸದಸ್ಯರೂ ಆಗಿರುವ ಗುರ್ಬಾಜ್ರ ಅನುಭವಕ್ಕೆ ಮತ್ತೆ ಮಣೆ ಹಾಕಲಾಗಿದೆ. ಅಲ್ಲದೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಮೊದಲ ಛಾಪು ಮೂಡಿಸಲು ಯುವ ಪ್ರತಿಭಾನ್ವಿತ ಸಂಪರ್ಕ ಆಟಗಾರ ಜಸ್ಜೀತ್ ಸಿಂಗ್ಗೂ ಸ್ಥಾನ ಒದಗಿಸಲಾಗಿದೆ. ಇದರೊಂದಿಗೆ ಅವರು ವಿಶ್ವಕಪ್ನಲ್ಲಿ ಪದಾರ್ಪಣೆ ಮಾಡುವ ಉತ್ತಮ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಭಾರತ 'ಎ' ಗುಂಪಿನಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ಇಂಗ್ಲೆಂಡ್, ಸ್ಪೇನ್ ಮತ್ತು ಬೆಲ್ಜಿಯಂ ತಂಡಗಳ ಜೊತೆ ಸ್ಥಾನ ಹೊಂದಿದೆ. ಮೇ 31ರಂದು ಆಡಲಾಗುವ ತನ್ನ ಮೊದಲ ಪಂದ್ಯದಲ್ಲಿ ಭಾರತದ ಆಟಗಾರರು ಬೆಲ್ಜಿಯಂ ತಂಡದ ವಿರುದ್ಧ ಸೆಣಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ವಿಶ್ವಕಪ್ಗಾಗಿ ಭಾರತದ ಆಟಗಾರರು ಉತ್ತಮ ಸಿದ್ಧತೆ ಮಾಡಿಕೊಂಡಿದ್ದು, ಎರಡನೇ ವಿಶ್ವಕಪ್ನಲ್ಲಿ ಆಡುತ್ತಿರುವ ನಾನು ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಸರ್ದಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ಗಾಗಿ ತಂಡವನ್ನು ಆಯ್ಕೆ ಮಾಡಲು 33 ಸದಸ್ಯರ ಸಂಭಾವ್ಯರ ಪಟ್ಟಿ ಸಿದ್ಧಪಡಿಸಲಾಗಿತ್ತು. ಕೋಚ್ ಟೆರ್ರಿ ವಾಲ್ಶ್ ಗರಡಿಯಲ್ಲಿ ಈ ಆಟಗಾರರ ಪೈಕಿ ಅಂತಿಮವಾಗಿ 18 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದ ನಾಲ್ವರಿಗೆ ಸ್ಥಾನ
ಭಾರತ ವಿಶ್ವಕಪ್ ಹಾಕಿ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರಿಗೆ ಸ್ಥಾನ ಲಭಿಸಿದೆ. ರಕ್ಷಣೆಯಲ್ಲಿ ರಘುನಾಥ್ ಒಕ್ಕಲಿಗ, ಸಂಪರ್ಕದಲ್ಲಿ ಎಸ್.ಕೆ. ಉತ್ತಪ್ಪ ಹಾಗೂ ಮುನ್ಪಡೆಯಲ್ಲಿ ಎಸ್.ವಿ. ಸುನೀಲ್ ಮತ್ತು ನಿಕ್ಕಿನ್ ತಿಮ್ಮಯ್ಯ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

