ಗೆದ್ದ ಆರ್ಸಿಬಿ ಆಸೆ ಜೀವಂತ

ರಾಂಚಿ: ಕೊನೆಯಲ್ಲಿ ಸರಾಸರಿ ರನ್ ಗಳಿಕೆ 12ರ ಆಸುಪಾಸಿನಲ್ಲಿದ್ದಾಗ ಕ್ರೀಸ್ಗೆ ಆಗಮಿಸಿದ ಎಬಿ ಡಿವಿಲಿಯರ್ಸ್ ತಮ್ಮ ಅಲ್ಪ ಆರ್ಭಟದಲ್ಲೇ ರನ್ ವೇಗ ಹೆಚ್ಚಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲವಿನಲ್ಲಿ ಪ್ರಧಾನ ಪಾತ್ರವಹಿಸುವುದರೊಂದಿಗೆ ಏಳನೇ ಆವೃತ್ತಿಯ ಐಪಿಎಲ್ನಲ್ಲಿ ತಮ್ಮ ತಂಡದ ಪ್ಲೇಆಫ್ ಸುತ್ತಿನ ಆಸೆ ಜೀವಂತವಾಗಿರಿಸಿದ್ದಾರೆ.
ರಾಂಚಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ಗಳಿಂದ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿಯಿತು. ಒಂದು ವೇಳೆ ಈ ಪಂದ್ಯವನ್ನು ಆರ್ಸಿಬಿ ಸೋತಿದ್ದರೆ, ಪ್ಲೇಆಫ್ ಸುತ್ತಿನ ಆಸೆ ಕೈಬಿಡಬೇಕಾಗುತ್ತಿತ್ತು. ಗೆಲ್ಲಲು 139 ರನ್ಗಳ ಗುರಿ ಪಡೆದಿದ್ದ ರಾಯಲ್ ಚಾಲೆಂಜರ್ಸ್ 19.5 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 142 ರನ್ಗಳಿಸಿ ಗೆಲವಿನ ಕೇಕೆ ಹಾಕಿತು. ಡಿವಿಲಿಯರ್ಸ್ ಕೇವಲ 14 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 28 ರನ್ ಚಚ್ಚಿ ನಿರ್ಗಮಿಸುವ ಮೂಲಕ ಆರ್ಸಿಬಿಯನ್ನು ಗೆಲವಿನ ಹಾದಿಯತ್ತ ಮುಖಮಾಡಿ ನಿಲ್ಲಿಸಿದರು. ಆದರೂ ಸಹ ಕೊನೆಯ ಎರಡುಓವರುಗಳಲ್ಲಿ 14 ರನ್ಗಳಷ್ಟೇ ಬೇಕಿದ್ದಾಗ ಆರ್ಸಿಬಿಗೆ ಸುಲಭ ಗೆಲವು ದಕ್ಕುವುದೆಂದೇ ಭಾವಿಸಲಾಗಿತ್ತು. ಆದರೆ, 19ನೇ ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾ ಕೇವಲ 4 ರನ್ ನೀಡಿ ಪಂದ್ಯ ಮತ್ತಷ್ಟು ರೋಚಕವಾಗಿಸಿದರು. ಜಡೇಜಾಗೆ ದಂಡಿಸಲು ಮುಂದಾದ ಯುವರಾಜ್ಗೆ ಫಲವೇ ದಕ್ಕಲಿಲ್ಲ. ಸತತ ಮೂರು ಎಸೆತಗಳಲ್ಲಿ ರನ್ಗಳಿಸಲಾಗದೇ ಸಾಕಷ್ಟು ಪರದಾಡಿದರು.
ಇನ್ನು ಕೊನೆಯ ಓವರಿನಲ್ಲಿ ಸಾಮುಯೆಲ್ ಬದ್ರಿಯಂತಹ ತಜ್ನ ಸ್ಪಿನ್ನರ್ ಇದ್ದಾಗಲೂ ಡೇವಿಡ್ ಹಸ್ಸಿಗೆ ಧೋನಿ ಬೌಲಿಂಗ್ ಅವಕಾಶ ನೀಡಿದ್ದು ಅಚ್ಚರಿಯಾಯಿತು. ಯುವರಾಜ್ ಮೊದಲ ಮೂರು ಎಸೆತಗಳಲ್ಲಿ 1 ಸಿಕ್ಸರ್ ಸೇರಿದಂತೆ 9 ರನ್ಗಳಿಸಿದರು. ನಾಲ್ಕನೇ ಎಸೆತದಲ್ಲಿ ಸಚಿನ್ ರಾಣಾ ಔಟಾದರೂ, ಐದನೇ ಎಸೆತದಲ್ಲಿ ಅಬು ನೆಚಿಮ್ ಅಹ್ಮದ್ ಬೌಂಡರಿ ಬಾರಿಸಿ ಆರ್ಸಿಬಿ ಗೆಲವು ಖಾತ್ರಿಪಡಿಸಿದರು.
ಇದಕ್ಕೂ ಮುನ್ನ ಆರಂಭಿಕ ಕ್ರಿಸ್ ಗೇಯ್ಲ್ 50 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಒಳಗೊಂಡ 46 ರನ್ಗಳಿಸಿ ಆರ್ಸಿಬಿ ಗೆಲವಿಗೆ ನೆರವಾದರು. ಚೆನ್ನೈ ಬೌಲರ್ಗಳೂ ಸಹ ಉತ್ತಮ ದಾಳಿಯನ್ನೇ ಸಂಘಟಿಸಿದರು. ಅಶ್ವಿನ್ ಮತ್ತು ಡೇವಿಡ್ ತಲಾ 2 ವಿಕೆಟ್ ಉರುಳಿಸಿದರು. ಮುಖ್ಯವಾಗಿ ಅಶ್ವಿನ್ ದಾಳಿಯನ್ನು ಎದುರಿಸುವಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಪರದಾಡಿದರು. ಅವರು ಮೊದಲ ಮೂರು ಓವರುಗಳಲ್ಲಿ 1 ಮೇಡನ್ ಒಳಗೊಂಡಂತೆ ಕೇವಲ 3 ರನ್ ನೀಡಿದ್ದರು. ಆದರೆ, ತಮ್ಮ ನಾಲ್ಕನೇ ಓವರಿನಲ್ಲಿ ಅಶ್ವಿನ್ ಅವರು ಗೇಯ್ಲ್ ಮತ್ತು ಡಿವಿಲಿಯರ್ಸ್ರಿಂದ 14 ರನ್ ಚಚ್ಚಿಸಿಕೊಂಡರು.
ಚೆನ್ನೈ ಸಾಧಾರಣ ಮೊತ್ತ: ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ದುಕೊಂಡರು. ಪಿಚ್ ನಿಧಾನಗತಿಯಿಂದ ಕೂಡಿದ್ದು ಹಾಗೂ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡುವುದು ಕಷ್ಟ ಎಂಬುದನ್ನು ತಿಳಿದು ಧೋನಿ ಈ ನಿರ್ಧಾರ ಕೈಗೊಂಡರು.
ಆದರೆ, ಚೆನ್ನೈ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ರಾಯಲ್ ಚಾಲೆಂಜರ್ಸ್ ಬೌಲರ್ಗಳ ಶಿಸ್ತುಬದ್ಧ ದಾಳಿಯ ಮುಂದೆ ರನ್ಗಳಿಸಲು ಪರದಾಡಿದ ಚೆನ್ನೈ 20 ಓವರುಗಳಲ್ಲಿ 4 ವಿಕೆಟ್ಗೆ
138 ರನ್ಗಳಿಸಲಷ್ಟೇ ಶಕ್ತವಾಯಿತು.
ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (ಅಜೇಯ 62, 48 ರನ್, 6 ಬೌಂಡರಿ, 1 ಸಿಕ್ಸರ್) ಉಪಯುಕ್ತ ಅರ್ಧಶತಕ ಬಾರಿಸಿದ್ದು ಬಿಟ್ಟರೆ, ಉಳಿದ ದಾಂಡಿಗರಿಗೆ ನಿರೀಕ್ಷಿತ ಮಟ್ಟದಲ್ಲಿ ಗರ್ಜಿಸಲು ಸಾಧ್ಯವಾಗಲಿಲ್ಲ.
ಆರ್ಸಿಬಿ ಪರ ಉತ್ತಮ ದಾಳಿ ಸಂಘಟಿಸಿದ ವರುಣ್ ಆರುಣ್ 2 ಹಾಗೂ ಮುತ್ತಯ್ಯ ಮುರಳೀಧರನ್ ಮತ್ತು ಅಬು ನೆಚಿಮ್ ಅಹ್ಮದ್ ತಲಾ 1 ವಿಕೆಟ್ ಉರುಳಿಸಿದರು.
ಈ ಪಿಚ್ ಮೇಲೆ ಎರಡೂ ತಂಡಗಳಿಗೆ ಬ್ಯಾಟ್ ಮಾಡುವುದು ಕಷ್ಟವಾಗಿತ್ತು. ಚೆಂಡು ಕೆಳಹಂತದಲ್ಲಿ ತೇಲಿ ಬರುವುದರ ಜೊತೆಗೆ ಹೆಚ್ಚು ತಿರುವು ಪಡೆದುಕೊಳ್ಳುತ್ತಿದ್ದರಿಂದ ಬ್ಯಾಟಿಂಗ್ ಆರ್ಭಟ ಕಂಡುಬರಲಿಲ್ಲ. ಮೊದಲ 10 ಓವರುಗಳಲ್ಲಿ ಚೆನ್ನೈ 2 ವಿಕೆಟ್ಗೆ 55 ರನ್ಗಳಿಸಿದ್ದರೆ, ಆರ್ಸಿಬಿ 1 ವಿಕೆಟ್ಗೆ 45 ರನ್ಗಳನ್ನಷ್ಟೇ ಮಾಡಿತ್ತು. ಅಂತಿಮವಾಗಿ ಡಿವಿಲಿಯರ್ಸ್ ಮತ್ತು ಗೇಯ್ಲ್ರ ಕೆಲ ಭರ್ಜರಿ ಹೊಡೆತಗಳಿಂದಾಗಿ ವಿಜಯಲಕ್ಷ್ಮಿ ಆರ್ಸಿಬಿಗೆ ಒಲಿದರೆ, ಚೆನ್ನೈ ಉತ್ತಮ ಹೋರಾಟದ ಹೊರತಾಗಿಯೂ ಗೌರವಯುತ ಸೋಲಕ್ಕೆ ತೃಪ್ತಿ ಹೊಂದಿತು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 4 ವಿಕೆಟ್ಗೆ 138
ಡ್ವೈನ್ ಸ್ಮಿತ್ ಸಿ ಡಿವಿಲಿಯರ್ಸ್ ಬಿ ಆರುಣ್ 9, ಬ್ರೆಂಡನ್ ಮೆಕಲಂ ಸಿ ಸ್ಟಾರ್ಕ್ ಬಿ ಆರುಣ್ 19, ಸುರೇಶ್ ರೈನಾ ಅಜೇಯ 62, ಡೇವಿಡ್ ಹಸ್ಸಿ ಸಿ ಸ್ಟಾರ್ಕ್ ಬಿ ಮುರಳೀಧರನ್ 25, ಮಹೇಂದ್ರ ಸಿಂಗ್ ಧೋನಿ ಸಿ ಗೇಯ್ಲ್ ಬಿ ಅಹ್ಮದ್ 7, ರವೀಂದ್ರ ಜಡೇಜಾ ಅಜೇಯ 10. ಇತರೆ: (ಲೆಗ್ಬೈ-3, ವೈ-3) 6.
ವಿಕೆಟ್ ಪತನ: 1-29, 2-29, 3-104, 4-115.
ಬೌಲಿಂಗ್ ವಿವರ: ಮುರಳೀಧರನ್ 4-0-29-1, ಸ್ಟಾರ್ಕ್ 4-0-23-0, ಆರುಣ್ 3-0-29-2, ಅಹ್ಮದ್ 4-0-18-1, ಚಾಹಲ್ 4-0-27-0, ರಾಣಾ 1-0-9-0.
ರಾಯಲ್ ಚಾಲೆಂಜರ್ಸ್ ಬೆಂಗಳೂರು 19.5 ಓವರುಗಳಲ್ಲಿ 5 ವಿಕೆಟ್ಗೆ 142
ಕ್ರಿಸ್ ಗೇಯ್ಲ್ ಬಿ ಅಶ್ವಿನ್ 46, ಪಾರ್ಥಿವ್ ಪಟೇಲ್ ಸಿ ರೈನಾ ಬಿ ಅಶ್ವಿನ್ 10, ವಿರಾಟ್ ಕೊಹ್ಲಿ ಸ್ಟಂಪ್ ಧೋನಿ ಬಿ ಜಡೇಜಾ 27, ಎಬಿ ಡಿವಿಲಿಯರ್ಸ್ ಸಿ ಜಡೇಜಾ ಬಿ ಹಸ್ಸಿ 28, ಯುವರಾಜ್ ಸಿಂಗ್ ಅಜೇಯ 13, ಸಚಿನ್ ರಾಣಾ ಸಿ ಮೆಕಲಂ ಬಿ ಹಸ್ಸಿ 1, ಅಬು ನೆಚಿಮ್ ಅಹ್ಮದ್ ಅಜೇಯ 4. ಇತರೆ: (ಬೈ-1, ಲೆಗ್ಬೈ-8, ವೈ-4) 13.
ವಿಕೆಟ್ ಪತನ: 1-14, 2-75, 3-110, 4-125, 5-138.
ಬೌಲಿಂಗ್ ವಿವರ: ಮೋಹಿತ್ ಶರ್ಮಾ 2-0-13-0, ಆರ್. ಅಶ್ವಿನ್ 4-1-16-2, ಸ್ಯಾಮುಯೆಲ್ ಬದ್ರಿ 3-0-15-0, ಸುರೇಶ್ ರೈನಾ 4-0-20-0, ರವೀಂದ್ರ ಜಡೇಜಾ 4-0-31-1,
ಡೇವಿಡ್ ಹಸ್ಸಿ 2.5-0-38-2.
ಪಂದ್ಯಶ್ರೇಷ್ಠ- ಎಬಿ ಡಿವಿಲಿಯರ್ಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


