ಪಂಜಾಬ್, ಕೆಕೆಆರ್ ಚಿತ್ತ ಫೈನಲ್ನತ್ತ

ಕೋಲ್ಕತಾ: ಅತ್ಯಂತ ಹೆಚ್ಚು ಸ್ಥಿರ ಪ್ರದರ್ಶನ ನೀಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಒಂದೆಡೆಯಾದರೆ, ಆರಂಭದ ದಯನೀಯ ವೈಫಲ್ಯದಿಂದ ಮೈಕೊಡವಿ ಮೇಲೆದ್ದು ಬರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಮತ್ತೊಂದೆಡೆ.
ಈ ಎರಡು ತಂಡಗಳ ನಡುವೆ ಮಂಗಳವಾರ ನಡೆಯಲಿರುವ ಐಪಿಎಲ್ ಟಿ-20 ಟೂರ್ನಿಯ ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಬಲ್ಲಳು ಎಂದು ಊಹಿಸುವುದೂ ಸದ್ಯ ಕಷ್ಟವಾಗಿದೆ.
ಈ ಮುನ್ನ ಕಳೆದ ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ದುರ್ಬಲವಾಗಿಯೇ ಕಂಡಿತ್ತು. ಆದರೆ ಈ ಬಾರಿ ಎಲ್ಲರಿಗೂ ಅಚ್ಚರಿ ಮೂಡಿಸುವಂತಹ ಪ್ರದರ್ಶನ ನೀಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ 14 ಪಂದ್ಯಗಳಲ್ಲಿ 11 ಗೆಲವು ಮತ್ತು 3 ಸೋಲುಗಳೊಂದಿಗೆ ಒಟ್ಟು 22 ಅಂಕಗಳ ಸಂಪಾದನೆಯೊಂದಿಗೆ ಅಗ್ರಸ್ಥಾನದ ಗೌರವದೊಂದಿಗೆ ಪ್ಲೇಆಫ್ ಸುತ್ತು ಪ್ರವೇಶಿಸಿದೆ. ಜಾರ್ಜ್ ಬೇಯ್ಲಿ ನಾಯಕತ್ವದ ಕಿಂಗ್ಸ್ ಪಂಜಾಬ್ನ ದೊಡ್ಡ ಶಕ್ತಿ ಎಂದರೆ ಅದರ ಬ್ಯಾಟಿಂಗ್ ವಿಭಾಗ. ಅದರಲ್ಲೂ ದಿಗ್ಗಜ ಬೌಲರ್ಗಳು ಮನಸೋಇಚ್ಚೆ ದಂಡಿಸುತ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ ಇಲ್ಲಿ ಕೇಂದ್ರಬಿಂದು. ಉಳಿದಂತೆ, ಮತ್ತೊಬ್ಬ ಮಧ್ಯಮ ಕ್ರಮಾಂಕದ ಅಪಾಯಕಾರಿ ದಾಂಡಿಗ ಡೇವಿಡ್ ಮಿಲ್ಲರ್, ಆರಂಭಿಕ ವೀರೇಂದ್ರ ಸೆಹವಾಗ್, ಜಾರ್ಜ್ ಬೇಯ್ಲಿ ಹಾಗೂ ಮನನ್ ವೋಹ್ರಾ ಮತ್ತು ವೃದ್ಧಿಮಾನ್ ಸಹಾ ಕೂಡ ಪಂಜಾಬ್ ಪಾಲಿಗೆ ನಂಬಿಕಸ್ತ ಬ್ಯಾಟ್ಸ್ಮನ್ಗಳಾಗಿದ್ದಾರೆ.ಇನ್ನು ಪಂಜಾಬ್ ಬೌಲಿಂಗ್ನಲ್ಲಿ ಜಾನ್ಸನ್, ಅವಾನ, ಅಕ್ಷರ, ಕರಣವೀರ್, ರಿಶಿ, ಬಾಲಾಜಿ ಮತ್ತು ಹೆಂಡ್ರಿಕ್ಸ್ರಂತಹ ಉತ್ತಮ ಆಯ್ಕೆಗಳಿರುವುದು ಪಂಜಾಬ್ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.
ಕೆಕೆಆರ್ ಬಗ್ಗೆ ಪಂಜಾಬ್ ಲಘು ಧೋರಣೆ ಹೊಂದಿಲ್ಲ. ಮೊದಲ ಏಳು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲವು ಮತ್ತು 5ರಲ್ಲಿ ಸೋಲಿನ ಕಹಿ ಉಂಡಿದ್ದ ಕೋಲ್ಕತಾ ನಂತರದಲ್ಲಿ ಸತತ ಏಳು ಗೆಲವುಗಳನ್ನು ದಾಖಲಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದಿದೆ. ಸದ್ಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿರುವ ರಾಬಿನ್ ಉತ್ತಪ್ಪ ಅಲ್ಲದೆ, ನಾಯಕ ಗೌತಮ್ ಗಂಭೀರ್, ಮನೀಷ್ ಪಾಂಡೆ, ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಜಾಕ್ ಕಾಲಿಸ್, ಸುನೀಲ್ ನಾರಾಯಣ್, ಮೊರ್ನ್ ಮಾರ್ಕೆಲ್, ಡಾಶ್ಕೇಟ್, ಕ್ರಿಸ್ ಲೀನ್, ವಿನಯ್ಕುಮಾರ್ ಮತ್ತು ರಸೆಲ್ ಕೋಲ್ಕತಾ ಪಡೆಯಲ್ಲಿನ ಪ್ರಮುಖ ಆಟಗಾರರಾಗಿದ್ದಾರೆ. ಮೇಲಾಗಿ ಪಂದ್ಯ ತವರು ನೆಲದಲ್ಲಿಯೇ ನಡೆಯುತ್ತಿರುವುದರಿಂದ ಕೋಲ್ಕತಾ ಆತ್ಮವಿಶ್ವಾಸ ದುಪ್ಪಟ್ಟು ಹೆಚ್ಚಿದೆ.ಈ ಪಂದ್ಯದಲ್ಲಿ ಗೆಲವು ದಾಖಲಿಸಿದವರು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದ್ದಾರೆ. ಸೋತವರಿಗೆ ಇನ್ನೂ ಒಂದು ಅವಕಾಶ ದೊರೆಯಲಿದ್ದು, ಎರಡನೇ ಕ್ವಾಲಿಫೈರ್ ಪಂದ್ಯದಲ್ಲಿ ಆಡಿ ಗೆಲವು ದಾಖಲಿಸಿದರೆ, ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


