ಫೈನಲ್ಗೆ ನೈಟ್ ರೈಡ್

ಕೋಲ್ಕತಾ: ತಂಡದ ಯಶಸ್ಸಿನ ಬೆನ್ನೆಲುಬಾಗಿ ನಿಂತಿರುವ ರಾಬಿನ್ ಉತ್ತಪ್ಪ (42) ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ವೇಗಿ ಉಮೇಶ್ ಯಾದವ್ ಮಾರಕ ದಾಳಿಗೆ ಪ್ರತ್ಯುತ್ತರ ನೀಡಲು ವಿಫಲರಾದ ಕಿಂಗ್ಸ್ ಇಲೆವೆನ್ ಪಂಜಾಬ್, ಐಪಿಎಲ್ 7ನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.
ಬುಧವಾರ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ಸ್ ತಂಡ 28 ರನ್ಗಳ ಅರ್ಹ ಗೆಲವು ದಾಖಲಿಸಿದ್ದು, ಈ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆಕೆಆರ್ ಬ್ಯಾಟ್ಸ್ಮನ್ಗಳಿಗೆ ಮೂಗುದಾರ ಹಾಕುವಲ್ಲಿ ವಿಫಲವಾಯಿತು. ಪರಿಣಾಮ ಕೆಕೆಆರ್ 20 ಓವರ್ಗಳಲ್ಲಿ 8 ವಿಕೆಟ್ಗೆ 163 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 135 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಮಂಗಳವಾರ ನಡೆಯಬೇಕಿದ್ದ ಪಂದ್ಯ, ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಬುಧವಾರಕ್ಕೆ ಮುಂದೂಡಲ್ಪಟ್ಟಿತ್ತು. ಇಂದೂ ಕೂಡ ಮಳೆ ಆಟಕ್ಕೆ ಕೊಂಚ ಅಡ್ಡಿಪಡಿಸಿತು. ಕೋಲ್ಕತಾ 15.4 ಓವರುಗಳಲ್ಲಿ 5 ವಿಕೆಟ್ಗೆ 113 ರನ್ಗಳಿಸಿದಾಗ ಮಳೆ ಆಟವನ್ನು ನಿಲ್ಲಿಸಿತು. ಆದರೆ, ಬೇಗನೆ ಮಳೆ ನಿಂತು ಆಟ ಮುಂದುವರಿಯಲುಅನುಕೂಲವಾಗುವುದರೊಂದಿಗೆ ಮತ್ತೆ ಯಾವುದೇ ಆಪತ್ತು, ಅಡಚಣೆ ಎದುರಾಗದೇ ಆಟ ಸುಗಮವಾಗಿ ಸಾಗಿತು.
ಮತ್ತೆ ಉತ್ತಪ್ಪ ಆಸರೆ: ಕೆಕೆಆರ್ ತಂಡ ಈ ಟೂರ್ನಿಯಲ್ಲಿ ಇದುವರೆಗೂ ಸಾಧಿಸಿರುವ ಯಶಸ್ಸಿನ ಬೆನ್ನೆಲುಬು ಕರ್ನಾಟಕದ ರಾಬಿನ್ ಉತ್ತಪ್ಪ. ಟೂರ್ನಿಯ ಮಹತ್ವದ ಪಂದ್ಯದಲ್ಲೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಬಿನ್ ಉತ್ತಪ್ಪ (20) ತಂಡವನ್ನು ಆರಂಭಿಕ ಕುಸಿತದಿಂದ ಮೇಲೆತ್ತಿದರು.
ಉತ್ತಪ್ಪ ಜತೆ ಆರಂಭಿಕರಾಗಿ ಕಣಕ್ಕಿಳಿದ ಗೌತಮ್ ಗಂಭೀರ್ (1) ಎರಡನೇ ಓವರ್ನಲ್ಲೇ ಪೆವಿಲಿಯನ್ ಸೇರಿದರು. ನಂತರ ಬಂದ ಮನೀಷ್ ಪಾಂಡೆ (21) ಜತೆಗೂಡಿದ ಉತ್ತಪ್ಪ ತಂಡಕ್ಕೆ 65 ರನ್ಗಳ ಅಮೂಲ್ಯ ಜತೆಯಾಟ ನೀಡಿದರು. ಈ ವೇಳೆ 30 ಎಸೆತಗಳನ್ನು ಎದುರಿಸಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 42 ರನ್ ದಾಖಲಿಸಿದ ಉತ್ತಪ್ಪ, ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ತಂಡದ ಇನಿಂಗ್ಸ್ ಕಟ್ಟಬೇಕಾದ ಹಂತದಲ್ಲಿ ಮನೀಷ್ ಪಾಂಡೆ ಸಹ ವಿಕೆಟ್ ಒಪ್ಪಿಸಿದ್ದು, ಮತ್ತೆ ತಂಡ ಹಳಿ ತಪ್ಪಿದಂತಾಯಿತು. ಈ ವೇಳೆ ಬಂದ ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಪಡೆದರಾದರೂ, ಅಂತಿಮ ಹಂತದವರೆಗೂ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೂ, ಶಕೀಬ್ ಅಲ್ ಹಸನ್ (18), ಯೂಸುಫ್ ಪಠಾಣ್ (20), ರಯಾನ್ ಟೆನ್ ಡಾಶ್ಕೆಟ್ (17), ಸೂರ್ಯ ಕುಮಾರ್ ಯಾದವ್ (20) ಅಲ್ಪ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟುವಂತೆ ನೋಡಿಕೊಂಡರು.
ಕಿಂಗ್ಸ್ಗೆ ಮುಳ್ಳಾದ ಯಾದವ್: ಸ್ಪರ್ಧಾತ್ಮಕ ಮೊತ್ತವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ ಕೆಕೆಆರ್ ತಂಡದ ಬೌಲರ್ಗಳು, ಟೂರ್ನಿಯ ಬಲಿಷ್ಠ ಬ್ಯಾಟಿಂಗ್ ವಿಭಾಗ ಎಂದೇ ಪರಿಗಣಿಸಲ್ಪಟ್ಟ ಪಂಜಾಬ್ ಬ್ಯಾಟ್ಸ್ಮನ್ಗಳಿಗೆ ಮೂಗುದಾರ ಹಾಕುವಲ್ಲಿ ಯಶಸ್ವಿಯಾದರು. ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಡೇವಿಡ್ ಮಿಲ್ಲರ್ಗೆ ಬೇಗನೆ ಪೆವಿಲಿಯನ್ ದಾರಿ ತೋರಿದ್ದು, ಪಂದ್ಯದ ಮಹತ್ವದ ತಿರುವು. ಆರಂಭದಲ್ಲಿ ಸೆಹ್ವಾಗ್ (2), ಮಧ್ಯಮ ಹಂತದಲ್ಲಿ ಮ್ಯಾಕ್ಸ್ವೆಲ್ (6) ಹಾಗೂ ಕಡೇಯ ಓವರ್ನಲ್ಲಿ ಬೇಯ್ಲಿ ವಿಕೆಟ್ ಕಬಳಿಸಿದ ಉಮೇಶ್ ಯಾದವ್ ತಂಡಕ್ಕೆ ಮಹತ್ವದ ಕಾಣಿಕೆ ನೀಡಿದರು. 4 ಓವರ್ ಮಾಡಿ ಕೇವಲ 13 ರನ್ಗಳಿಗೆ 3 ವಿಕೆಟ್ ಪಡೆದ ಉಮೇಶ್ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್
ಕೋಲ್ಕತಾ ನೈಟ್ರೈಡರ್ಸ್
20ಓವರ್ಗಳಲ್ಲಿ 8 ವಿಕೆಟ್ಗೆ 163
ರಾಬಿನ್ ಉತ್ತಪ್ಪ ಸಿ ಮಿಲ್ಲರ್ ಬಿ ಪಟೇಲ್ 42, ಗೌತಮ್ ಗಂಭೀರ್ ಸಿ ಬೇಯ್ಲಿ ಬಿ ಜಾನ್ಸನ್ 1, ಮನೀಷ್ ಪಾಂಡೆ ಬಿ ಪಟೇಲ್ 21, ಶಕೀಬ್ ಅಲ್ ಹಸನ್ ಸಿ ಮಿಲ್ಲರ್ ಬಿ ಕರಣ್ವೀರ್ 18, ಯೂಸುಫ್ ಪಠಾಣ್ ಸಿ ಮಿಲ್ಲರ್ ಬಿ ಕರಣ್ವೀರ್ 20, ಟೆನ್ ಡಾಶ್ಕೆಟ್ ಸಿ ವೊಹ್ರಾ ಬಿ ಜಾನ್ಸನ್ 17, ಸೂರ್ಯಕುಮಾರ್ ಬಿ ಕರಣ್ವೀರ್ 20, ಪಿಯೂಶ್ ಚಾವ್ಲಾ ಅಜೇಯ 17, ಸುನಿಲ್ ನಾರಾಯಣ್ ರನೌಟ್ (ಜಾನ್ಸನ್) 0, ಮಾರ್ನ್ ಮಾರ್ಕೆಲ್ ಅಜೇಯ 0. ಇತರೆ: (ಲೆಗ್ ಬೈ 4, ವೈಡ್ 3) ಒಟ್ಟು 7.
ವಿಕೆಟ್ ಪತನ: 1-2, 2-67, 3-67, 4-108, 5-108, 6-145, 7-147, 8-159
ಬೌಲಿಂಗ್ ವಿವರ: ಪರ್ವಿಂದರ್ ಅವಾನ 4-0-33-0, ಮಿಚೆಲ್ ಜಾನ್ಸನ್ 4-0-31-2, ಅಕ್ಷರ್ ಪಟೇಲ್ 4-1-11-2, ರಿಶಿ ಧವನ್ 4-0-44-0, ಕರಣ್ವೀರ್ ಸಿಂಗ್ 4-0-40-3.
ಕಿಂಗ್ಸ್ ಇಲೆವೆನ್ ಪಂಜಾಬ್ 20
ಓವರ್ಗಳಲ್ಲಿ 8 ವಿಕೆಟ್ಗೆ 135
ವಿರೇಂದ್ರ ಸೆಹ್ವಾಗ್ ಸಿ ಶಕೀಬ್ ಬಿ ಉಮೇಶ್ 2, ಮನನ್ ವೊಹ್ರಾ ಸಿ ಉಮೇಶ್ ಬಿ ಮಾರ್ಕೆಲ್ 26, ಸಾಹಾ ಸಿ ಉಮೇಶ್ ಬಿ ಮಾರ್ಕೆಲ್ 35, ಮ್ಯಾಕ್ಸ್ವೇಲ್ ಎಲ್ಬಿ ಉಮೇಶ್ 6, ಮಿಲ್ಲರ್ ಬಿ ಚಾವ್ಲಾ 8, ಅಕ್ಷರ್ ಪಟೇಲ್ ರನೌಟ್ 2, ಜಾರ್ಜ್ ಬೇಯ್ಲಿ ಸಿ ಪಾಂಡೆ ಬಿ ಉಮೇಶ್ 26, ರಿಶಿ ಧವನ್ ಸ್ಟಂಪ್ ಉತ್ತಪ್ಪ ಬಿ ಶಕೀಬ್ 14, ಜಾನ್ಸನ್ ಅಜೇಯ 10, ಕರಣ್ವೀರ್ ಅಜೇಯ 1. ಇತರೆ: (ಲೆಗ್ ಬೈ 3, ವೈಡ್ 2) ಒಟ್ಟು 5.
ವಿಕೆಟ್ ಪತನ: 1-5, 2-45, 3-55, 4-80, 5-82, 6-87, 7-117, 8-134
ಬೌಲಿಂಗ್ ವಿವರ: ಮಾರ್ಕೆಲ್ 4-0-23-2, ಉಮೇಶ್ ಯಾದವ್ 4-0-13-3, ಸುನಿಲ್ ನಾರಾಯಣ್ 4-0-30-0, ಶಕೀಬ್ ಅಲ್ ಹಸನ್ 4-0-43-1, ಪಿಯೂಶ್ ಚಾವ್ಲಾ 4-0-23-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


