ಕ್ರೀಡೆ

ನಡಾಲ್, ಫೆರರ್‌ಗೆ ಗೆಲವಿನ ಸಿಹಿ

Published On :

ಪ್ಯಾರಿಸ್: ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ವಿರುದ್ಧ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸ್ಪೇನ್ ಟೆನಿಸ್ ತಾರೆ ರಾಫೆಲ್ ನಡಾಲ್, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲವು ದಾಖಲಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ರಾಫೆಲ್ ನಡಾಲ್ ತಮ್ಮ ಎದುರಾಳಿ ಆಸ್ಟ್ರೀಯಾದ ಡೊಮಿನಿಕ್ ಥೈಮ್ ವಿರುದ್ಧ 6-2, 6-2, 6-3 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ ರಾಫೆಲ್ ನಡಾಲ್ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಯಾವುದೇ ಹಂತದಲ್ಲೂ ಎದುರಾಳಿಗೆ ನಿಯಂತ್ರಣ ಸಾಧಿಸುವ ಅವಕಾಶ ನೀಡಲಿಲ್ಲ. ಮತ್ತೊಂದು ಪಂದ್ಯದಲ್ಲಿ ಸ್ಪೇನ್‌ನ ಆಟಗಾರ ಡೇವಿಡ್ ಫೆರರ್ ತಮ್ಮ ಎದುರಾಳಿ ಇಟಲಿಯ ಸಿಮನ್ ಬೊಲೆಲ್ಲಿ ವಿರುದ್ಧ 6-2, 6-3, 6-2 ನೇರ ಸೆಟ್‌ಗಳ ಗೆಲವು ದಾಖಲಿಸಿದರು. ಈ ಮೂಲಕ ಸ್ಪೇನ್‌ನ ಈ ಇಬ್ಬರೂ ಆಟಗಾರರು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೆರ್ಬಿಯಾದ ಎಲೆನಾ ಆ್ಯಂಕೊವಿಚ್ ಗೆಲವು ದಾಖಲಿಸಿದ್ದು, ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ. ಜಪಾನ್‌ನ ಕುರುಮಿ ನಾರ ವಿರುದ್ಧ ಕಾದಾಟ ನಡೆಸಿದ ಎಲೆನಾ, 7-5, 6-0 ನೇರ ಸೆಟ್‌ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಆರಂಭಿಕ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಪ್ರಬಲ ಪೈಪೋಟಿ ನಡೆಸಿದರಾದರೂ, ಎರಡನೇ ಸೆಟ್‌ನಲ್ಲಿ ಎಲೆನಾ ಸಂಪೂರ್ಣ ಪ್ರಾಬಲ್ಯ ಮೆರೆದು, ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಭಾರತಕ್ಕೆ ಮಿಶ್ರಫಲ: ಇನ್ನು ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಗೆಲವು ದಾಖಲಿಸಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಸ್ಲೊವಾಕಿಯಾದ ಡೇನಿಯಲ್ ಹಂಟುಚೊವಾ ಹಾಗೂ ಇಸ್ರೆಲ್‌ನ ಶಹರ್ ಪೀರ್ ಜೋಡಿ ವಿರುದ್ಧ ಸಾನಿಯಾ ಜೋಡಿ 6-3, 6-3 ನೇರ ಸೆಟ್‌ಗಳ ಗೆಲವು ದಾಖಲಿಸಿತು.  ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಐಸಾಮ್ ಉಲ್ ಹಕ್ ಖುರೇಷಿ ಜೋಡಿಯು ಸೋಲನುಭವಿಸಿದ್ದು, ನಿರಾಸೆ ಮೂಡಿಸಿದೆ.
ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಇಂಡೊ-ಪಾಕ್ ಜೋಡಿ ಇಸ್ರೆಲ್‌ನ ಜೊನಾಥನ್ ಎರ್ಲಿಚ್ ಹಾಗೂ ಬ್ರೆಜಿಲ್‌ನ ಮಾರ್ಸೆಲೊ ಮೆರ್ಲೊ ವಿರುದ್ಧ 3-6, 4-6 ಸೆಟ್‌ಗಳ ಅಂತರದಲ್ಲಿ ಪರಾಭವಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.