ಬ್ರೆಜಿಲ್ಗೆ ಕಾಲಿಟ್ಟ ಕಾಂಗರೂ ಪಡೆ
ಕ್ಯುರಿಟಿಬಾ (ಬ್ರೆಜಿಲ್): ಮುಂದಿನ ತಿಂಗಳು ನಡೆಯಲಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೊಂದಿಗೆ ಆಸ್ಟ್ರೇಲಿಯಾ ತಂಡ ಬುಧವಾರ ಬ್ರೆಜಿಲ್ ನೆಲಕ್ಕೆ ಕಾಲಿಟ್ಟಿದೆ.
ಈ ಮೂಲಕ ಆಸ್ಟ್ರೇಲಿಯಾ ಬ್ರೆಜಿಲ್ಗೆ ಆಗಮಿಸಿದ ಮೊದಲ ತಂಡವಾಗಿದ್ದು, ಆಸೀಸ್ ತಂಡದ ಆಟಗಾರರಿಗೆ ಬಿಗಿ ಭದ್ರತೆಯೊಂದಿಗೆ ವಿಮಾನ ನಿಲ್ದಾಣದಿಂದ ಹೊಟೇಲ್ವರೆಗೆ ಕರೆದೊಯ್ಯಲಾಯಿತು.
ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಆಟಗಾರರ ನೋಡಲು ಪ್ರಯತ್ನಿಸಿದಾದರೂ, ಭದ್ರತೆ ಹೆಚ್ಚಿದ್ದ ಕಾರಣ ನಿರಾಸೆಗೊಂಡರು.
ಆಸ್ಟ್ರೇಲಿಯಾ ಸತತ ಮೂರನೇ ಬಾರಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಜೂ.13ರಂದು ಚಿಲೆ ವಿರುದ್ಧ ಸೆಣೆಸಾಟ ನಡೆಸಲಿದೆ. ನಂತರ ಎ ಗುಂಪಿನಲ್ಲಿ ಪ್ರಬಲ ತಂಡಗಳಾದ ಸ್ಪೇನ್ ಹಾಗೂ ನೆದರ್ಲೆಂಡ್ ತಂಡಗಳನ್ನು ಎದುರಿಸಲಿದೆ.
ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಲ್ಲಿ ಆಸ್ಟ್ರೇಲಿಯಾ (59) ಕಡಿಮೆ ರ್ಯಾಂಕಿಂಗ್ ಹೊಂದಿದ್ದು, ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.
ಪಂದ್ಯಾವಳಿಯಲ್ಲಿ ನಾವು ದುರ್ಬಲ ತಂಡ. ಅಚ್ಚರಿಯ ಪ್ರದರ್ಶನ ನೀಡಲು ಆಸ್ಟ್ರೇಲಿಯಾ ತಂಡಕ್ಕೆ ಅತ್ಯುತ್ತಮ ಅವಕಾಶವಾಗಿದೆ. ಫುಟ್ಬಾಲ್ ರಾಷ್ಟ್ರದಲ್ಲಿ ಈ ಬಾರಿಯ ಕದನದಲ್ಲಿ ಭಾಗವಹಿಸುತ್ತಿರುವುದು ಮತ್ತಷ್ಟು ಉತ್ಸಾಹ ಹೆಚ್ಚಿದೆ ಎಂದು ಆಸೀಸ್ನ ಮಿಡ್ಫೀಲ್ಡರ್ ಟಾಮಿ ಓರ್ ತಿಳಿಸಿದ್ದಾರೆ.
ನಟಾಲಾ ಕ್ರೀಡಾಂಗಣದ ಚಿಂತೆ: ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿರುವ ಕ್ರೀಡಾಂಗಣದಲ್ಲಿ ಒಂದಾದ ನಟಾಲಾ ಕ್ರೀಡಾಂಗಣದಲ್ಲಿ ಇನ್ನು ಪ್ರೇಕ್ಷಕರು ಕೂರುವ ಸಾವಿರಾರು ಆಸನಗಳನ್ನು ಅಳವಡಿಸಬೇಕಿದ್ದು, ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳ್ಳಲಿದೆಯೇ ಎಂಬುದು ಫಿಫಾಗೆ ಚಿಂತೆಯಾಗಿದೆ.
ಬುಧವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಫಿಫಾ ಪ್ರಧಾನ ಕಾರ್ಯದರ್ಶಿ ಜೆರೊಮ್ ವ್ಯಾಲ್ಕೆ, ಕ್ರೀಡಾಂಗಣದ ಕಾಮಗಾರಿಯ ಫೋಟೊವನ್ನು ಟ್ವಿಟರ್ನಲ್ಲಿ ಹಾಕಿದ್ದಾರೆ.
ಗಡಿಯಾರದ ಜತೆಗೆ ನಾವು ಸ್ಪರ್ಧೆಗಿಳಿದಿದ್ದೇವೆ. ವಿಶ್ವಕಪ್ ಅಭಿಮಾನಿಗಳು ಹಾಗೂ ಮಾಧ್ಯಮದವರಿಗಾಗಿ ಸಾಕಷ್ಟು ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ ಜೂ.13ರಂದು ಮೆಕ್ಸಿಕೊ ಹಾಗೂ ಕ್ಯಾಮೆರೂನ್ ನಡುವೆ ಎ ಗುಂಪಿನ ಕಾದಾಟ ನಡೆಯಲಿದ್ದು, ಈ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕ್ರೀಡಾಂಗಣವನ್ನು ಸಿದ್ಧಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಘಾನಾ ಸಿದ್ಧತೆಗೆ ಕೋಚ್ ತೃಪ್ತಿ: ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾತುರಗೊಂಡಿರುವ ಘಾನಾ, ಉತ್ತಮ ತಯಾರಿ ನಡೆಸುತ್ತಿದ್ದು, ತಂಡದ ಸಿದ್ಧತೆಯ ಬಗ್ಗೆ ತಂಡದ ಕೋಚ್ ಜೇಮ್ಸ್ ಕ್ವಾಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಮೇ 31ರಂದು ಘಾನಾ ತಂಡ ಹಾಲೆಂಡ್ ವಿರುದ್ಧ ರೊಟೆರ್ಡ್ಹ್ಯಾಮ್ನಲ್ಲಿ ಅಭ್ಯಾಸ ಪಂದ್ಯವನ್ನಾಡಲಿದೆ. ಪಂದ್ಯಾವಳಿಯಲ್ಲಿ ಪ್ರಬಲ ಪೈಪೋಟಿ ಇದೆ. ಹಾಗಾಗಿ ಪ್ರತಿಯೊಬ್ಬ ಆಟಗಾರನು ಅಭ್ಯಾಸದ ವೇಳೆ ಹೆಚ್ಚಿನ ಪರಿಶ್ರಮ ಹಾಕುತ್ತಿದ್ದಾರೆ. ಇದು ತಂಡಕ್ಕೆ ನೆರವಾಗಲಿದ್ದು, ನನಗೆ ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ. ವಿಶ್ವಕಪ್ ಮುನ್ನದ ಅಭ್ಯಾಸ ಮಹತ್ವದ ಪಾತ್ರ ವಹಿಸಲಿದ್ದು, ಆಟಗಾರರು ಶಿಸ್ತಿನ ಪ್ರದರ್ಶನ ತೋರುತ್ತಿದ್ದಾರೆ. ಹಾಗಾಗಿ ವಿಶ್ವಕಪ್ನಲ್ಲಿ ಇದೇ ಪ್ರದರ್ಶನ ಮುಂದುವರಿಸಿ ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

