ಫೈನಲ್ ಆಡುವ ಗೊಂದಲದಲ್ಲಿ ನಾರಾಯಣ್
ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಸುನೀಲ್ ನಾರಾಯಣ್ ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮ್ಮ ತಂಡದ ಪರ ಆಡಬೇಕೇ-ಬೇಡವೇ ಎಂಬ ಗೊಂದಲದಲ್ಲಿ ಮುಳುಗಿದ್ದಾರೆ.
ಏಕೆಂದರೆ, ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಜಮೈಕಾದ ಕಿಂಗ್ಸ್ಟನ್ನಲ್ಲಿ ಜೂನ್ 8ರಿಂದ ಆರಂಭವಾಗಲಿದೆ. ಹಾಗಾಗಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಐಪಿಎಲ್ನಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ ಜೂನ್ 1ರೊಳಗೆ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕೆಂದು ಗಡುವು ನೀಡಿದೆ. ಒಂದು ವೇಳೆ ತಂಡ ಕೂಡಿಕೊಳ್ಳದಿದ್ದರೆ, ಅವರನ್ನು ಟೆಸ್ಟ್ ತಂಡದಿಂದ ಕೈಬಿಡುವುದಾಗಿಯೂ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜೂನ್ 2ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಆಡಬೇಕೇ ಅಥವಾ ರಾಷ್ಟ್ರೀಯ ತಂಡ ಪ್ರತಿನಿಧಿಸಲು ಫೈನಲ್ ಪಂದ್ಯ ಬಿಟ್ಟು ತವರಿಗೆ ಹಿಂತಿರುಗಬೇಕೇ ಎಂದು ನಾರಾಯಣ ಚಿಂತಿತರಾಗಿದ್ದಾರೆ. ಈ ಮೊದಲು ವೆಸ್ಟ್ ಇಂಡೀಸ್ ಮಂಡಳಿ, ತಂಡ ಸೇರಿಕೊಳ್ಳಲು ಆಟಗಾರರಿಗೆ ನೀಡಲಾಗಿದ್ದ ಅವಧಿಯನ್ನು ಮೇ 22ರಿಂದ ಜೂ.1ಕ್ಕೆ ವಿಸ್ತರಿಸಿತ್ತು. ಹಾಗಾಗಿ, ಇದೀಗ ತನ್ನ ನಿಲುವಿಗೆ ಅಂಟಿಕೊಂಡಿರುವ ಮಂಡಳಿಯು ಆಟಗಾರರು ಬರಲೇಬೇಕೆಂದು ಪಟ್ಟು ಹಿಡಿದಿದೆ.
ಈ ಮಧ್ಯೆ ಕೊಲ್ಕತಾ ನೈಟ್ ರೈಡರ್ಸ್ ತಂಡದ ಸಿಇಒ ವೆಂಕಿ ಮೈಸೂರು ಅವರು, ನಾರಾಯಣ್ಗೆ ಫೈನಲ್ನಲ್ಲಿ ಆಡುವ ಅವಕಾಶ ನೀಡಬೇಕೆಂದು ವಿಂಡೀಸ್ ಮಂಡಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಜೂನ್ 3ರೊಳಗೆ ನಾರಾಯಣ್ ಜಮೈಕಾ ತಲುಪಲಿದ್ದಾರೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

