ಕ್ರೀಡೆ

ವೀರೂವೇಶಕ್ಕೆ, ಚೆನ್ನೈ ದಾಳಿ ಉಡೀಸ್

ವೀರೂವೇಶಕ್ಕೆ, ಚೆನ್ನೈ ದಾಳಿ ಉಡೀಸ್
Published On :

ರನ್     122
ಎಸೆತ     58
ಬೌಂಡರಿ    12
ಸಿಕ್ಸರ್    8
ಮುಂಬೈ:
ಪಂಜಾಬ್ ತಂಡದ ವಿರೇಂದ್ರ ಸೆಹ್ವಾಗ್ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಐಪಿಎಲ್ 7ನೇ ಆವೃತ್ತಿಯ ಎರಡನೇ ಕ್ವಾಲಿಫಾಯರ್ ಪಂದ್ಯ ಟೂರ್ನಿಯ ರೋಚಕ ಪಂದ್ಯವಾಗುವಂತೆಅಭಿಮಾನಿಗಳನ್ನು ರಂಜಿಸಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ಷೇತ್ರರಕ್ಷಣೆ ಆಯ್ದುಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 226 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202 ರನ್ ದಾಖಲಿಸಿತು. ತಮ್ಮ ತಂಡ ಬೌಲಿಂಗ್‌ಗಿಂತಲೂ ಹೆಚ್ಚಾಗಿ ಬ್ಯಾಟಿಂಗ್ ವಿಭಾಗದಲ್ಲಿ ಸ್ವಲ್ಪ ಸದೃಢವಾಗಿದೆ. ಹಾಗಾಗಿ, ಗುರಿ ಬೆಂಬತ್ತುವುದೇ ಸೂಕ್ತ ಎಂದು ಈ ನಿರ್ಧಾರ ಕೈಗೊಂಡಿದ್ದಾಗಿ ಧೋನಿ ಟಾಸ್ ವೇಳೆ ಹೇಳಿದ್ದರು. ಧೋನಿಯ ಈ ನಿರ್ಧಾರ ರೈನಾ ಕ್ರೀಸ್‌ನಲ್ಲಿರುವವರೆಗೂ ಸರಿಯಾಗಿತ್ತು. ಆದರೆ ರೈನಾ ವಿಕೆಟ್ ಬಿದ್ದ ನಂತರ ಚೆನ್ನೈನ ನಾಟಕೀಯ ಕುಸಿತ ತಂಡದ ಸೋಲಿಗೆ ಕಾರಣವಾಯಿತು.
ಆರಂಭದಲ್ಲಿ ವೀರೇಂದ್ರ ಸೆಹ್ವಾಗ್‌ರ ಬ್ಯಾಟಿಂಗ್ ಬಿರುಗಾಳಿಗೆ ಚೆನ್ನೈ ಬೌಲರ್‌ಗಳು ಸಿಕ್ಕು ನಲುಗಿದರು. ಸೆಹ್ವಾಗ್‌ರನ್ನು ಬಂಧಿಸಿಡಲು ಏನೆಲ್ಲ ಕಸರತ್ತು ನಡೆಸಿದರೂ ಯಾವುದೇ ಫಲ ದೊರೆಯದ ಕಾರಣ ದಿಕ್ಕು ತಪ್ಪಿದಂತಾದರು.
ಸೆಹ್ವಾಗ್ ಕೇವಲ 58 ಎಸೆತಗಳಲ್ಲಿ 12 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 122 ರನ್ ಸಿಡಿಸಿ ನಿರ್ಗಮಿಸಿದರು. ಸೆಹ್ವಾಗ್ ಮೂರನೇ ವಿಕೆಟ್ ಆಗಿ ನಿರ್ಗಮಿಸಿದಾಗ ಪಂಜಾಬ್ ಮೊತ್ತ 18.1 ಓವರುಗಳಲ್ಲಿ 211 ರನ್‌ಗಳಾಗಿತ್ತು. ಅವರು ಕೇವಲ 50 ಎಸೆತಗಳಲ್ಲಿ ಮೂರಂಕಿಯ ಗಡಿ ತಲುಪಿದರು. ಈ ಟೂರ್ನಿಯಲ್ಲಿ ಇದು ಸೆಹ್ವಾಗ್‌ರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಮೊದಲು ಕಟಕ್‌ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 72 ರನ್‌ಗಳಿಸಿದ್ದು ಉತ್ತಮ ಸಾಧನೆಯಾಗಿತ್ತು. ಜೊತೆಗೆ ಐಪಿಎಲ್ ಇತಿಹಾಸದಲ್ಲಿ ಸೆಹವಾಗ್ ಒಟ್ಟಾರೆ ಎರಡನೇ ಶತಕ ಬಾರಿಸಿದಂತಾಗಿದೆ. ಈ ಹಿಂದೆ 2011ರ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು (119) ತಮ್ಮ ಮೊದಲ ಶತಕ ಗಳಿಸಿದ್ದರು.  ಅಲ್ಲದೆ, ಈ ಟೂರ್ನಿಯಲ್ಲಿ ದಾಖಲಾದ ಕೇವಲ ಎರಡನೇ ಶತಕ ಇದಾಗಿದೆ. ಈ ಮುನ್ನ ಪಂಜಾಬ್ ವಿರುದ್ಧವೇ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ನ ಆರಂಭಿಕ ಲೆಂಡ್ಲ್ ಸಿಮನ್ಸ್ 61 ಎಸೆತಗಳಲ್ಲಿ ಅಜೇಯ 100 ರನ್‌ಗಳಿಸಿದ್ದರು.  ಮೊದಲ 5 ಓವರುಗಳಲ್ಲಿಯೇ 57 ರನ್ ಸಂಪಾದಿಸಿದ ಕಿಂಗ್ಸ್ ಪಂಜಾಬ್, 10 ಓವರುಗಳಾಗುವಷ್ಟರಲ್ಲಿ ವಿಕೆಟ್ ನಷ್ಟವಿಲ್ಲದೆ 109ರ ಮೊತ್ತಕ್ಕೆ ಬಂದು ನಿಂತಿತು.
ಸೆಹ್ವಾಗ್‌ಗೆ ಉತ್ತಮ ಬೆಂಬಲ ನೀಡಿದ ಮತ್ತೊಬ್ಬ ಆರಂಭಿಕ ಮನನ್ ವೋಹ್ರಾ ಕೂಡ ಎದುರಾಳಿ ಬೌಲರ್‌ಗಳಿಗೆ ಕೆಲ ತೀಕ್ಷ್ಣ ಉತ್ತರ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಸೆಹ್ವಾಗ್‌ರೊಂದಿಗೆ ಅವರು ಕೇವಲ 64 ಎಸೆತಗಳಲ್ಲಿ 110 ರನ್ ಪೇರಿಸಿದ ನಂತರ ಪೆವಿಲಿಯನ್ ಸೇರಿದರು. ವೋಹ್ರಾ 31 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸೇರಿದಂತೆ 34 ರನ್‌ಗಳಿಸಿದಾಗ ಈಶ್ವರ್ ಪಾಂಡೆಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಪಾಯಕಾರಿ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಮೇಲಿನ ನಂಬಿಕೆಯನ್ನು ಹುಸಿಗೊಳಿಸಿದರು. ಅವರು 6 ಎಸೆತಗಳನ್ನು ಎದುರಿಸುವಷ್ಟರಲ್ಲಿ ತಲಾ 1 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 13 ರನ್‌ಗಳಿಸಲಷ್ಟೇ ಶಕ್ತರಾಗಿ ಪೆವಿಲಿಯನ್ ಸೇರಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಸಹ ಗುಡುಗಿ 19 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಒಳಗೊಂಡ 38 ರನ್ ಕಲೆಹಾಕಿ ತಂಡಕ್ಕೆ ನೆರವಾದರು.
ವ್ಯರ್ಥವಾಯ್ತು ರೈನಾ ಅಬ್ಬರ: ಚೆನ್ನೈ ತಂಡ ಬೃಹತ್ ಗುರಿಯನ್ನು ಬೆನ್ನಟ್ಟಿ, ಮೊದಲ ಓವರ್‌ನಲ್ಲೇ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಗ ಕ್ರೀಸ್‌ಗಿಳಿದ ತಂಡದ ಬೆನ್ನೆಲುಬು ರೈನಾ ಆಟ, ಪ್ರತತಿಯೊಬ್ಬರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿತು. ಕೇವಲ 25 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ ರೈನಾ ಅಮೋಘ 87 ರನ್ ದಾಖಲಿಸಿ ತಂಡದ ಮೇಲಿನ ಸಂಪೂರ್ಣ ಒತ್ತಡವನ್ನು ತೆಗೆದು ಹಾಕಿದರು. ಆದರೆ ಚೆನ್ನೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ ಪರಿಣಾಮ ತಂಡ 24 ರನ್ ಅಂತರದಲ್ಲಿ ಸೋಲನುಭವಿಸಿತು.

ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರುಗಳಲ್ಲಿ 6 ವಿಕೆಟ್‌ಗೆ 226
ವೀರೇಂದ್ರ ಸೆಹ್ವಾಗ್ ಸಿ ಪ್ಲೆಸಿಸ್ ಬಿ ನೆಹ್ರಾ 122, ಮನನ್ ವೋಹ್ರಾ ಸಿ ರೈನಾ ಬಿ ಪಾಂಡೆ 34, ಗ್ಲೆನ್ ಮ್ಯಾಕ್ಸ್‌ವೆಲ್, ಸಿ ರೈನಾ ಬಿ ಅಶ್ವಿನ್ 13, ಡೇವಿಡ್ ಮಿಲ್ಲರ್ ರನೌಟ್ ಧೋನಿ 38 , ಜಾರ್ಜ್ ಬೇಯ್ಲಿ ಬಿ ನೆಹ್ರಾ 1, ವೃದ್ಧಿಮಾನ್ ಸಹಾ ಸಿ ಸ್ಮಿತ್ ಬಿ ಶರ್ಮಾ 6, ಮಿಚೆಲ್ ಜಾನ್ಸನ್ ಅಜೇಯ 1. ಇತರೆ: (ಬೈ-1, ಲೆಗ್‌ಬೈ-1, ವೈ-8, ನೋಬಾಲ್-1) 11.
ವಿಕೆಟ್ ಪತನ: 1-110, 2-148, 3-211, 4-218, 5-225, 6-226.
ಬೌಲಿಂಗ್ ವಿವರ: ಆಶಿಶ್ ನೆಹ್ರಾ 4-0-51-2, ಈಶ್ವರ್ ಪಾಂಡೆ 4-0-35-1, ಮೋಹಿತ್ ಶರ್ಮಾ 4-0-46-1, ರವಿಚಂದ್ರನ್ ಅಶ್ವಿನ್ 4-0-44-1, ರವೀಂದ್ರ ಜಡೇಜಾ 4-0-48-0.
ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 7ವಿಕೆಟ್‌ಗೆ 202
ಸ್ಮಿತ್ ಬಿ ಸಂದೀಪ್ 7, ಪ್ಲೆಸಿಸ್ ಸಿ ಬೇಯ್ಲಿ ಬಿ ಜಾನ್ಸನ್ 0, ರೈನಾ ರನೌಟ್ (ಬೇಯ್ಲಿ) 87, ಮೆಕಲಂ ರನೌಟ್ (ಮ್ಯಾಕ್ಸ್‌ವೆಲ್/ಸಾಹ) 11, ಜಡೇಜಾ ಸಿ ಜಾನ್ಸನ್ ಬಿ ಅವಾನ 27, ಹಸ್ಸಿ ಸಿ ಸೆಹ್ವಾಗ್ ಬಿ ಅವಾನ 1, ಧೋನಿ ಅಜೇಯ 42, ಅಶ್ವಿನ್ ಸ್ಟಂಪ್ ಸಾಹ ಬಿ ಪಟೇಲ್ 10, ಮೊಹಿತ್ ಅಜೇಯ 1, ಇತರೆ: (ಬ್ಛೈ4, ಲೆಗ್‌ಬೈ-4, ವೈಡ್-6, ನೋಬಾಲ್-2) 11.
ವಿಕೆಟ್ ಪತನ: 1-1, 2-67, 3-100, 4-140, 5-140, 6-142, 7-167.
ಬೌಲಿಂಗ್ ವಿವರ: ಜಾನ್ಸನ್ 4-0-44-1, ಸಂದೀಪ್ 3-0-32-1, ಅವಾನ , ಕರಣ್‌ವೀರ್ 4-0-32, ಮ್ಯಾಕ್ಸ್‌ವೆಲ್ 1-0-4-0, ಅಕ್ಷರ್ 4-0-23-1

ಪ್ರಸಕ್ತ ಸಾಲಿನಲ್ಲಿ 200ರ ಗಡಿ ದಾಟಿದ ಮೊತ್ತ
ತಂಡ    ರನ್    ಓವರ್    ಇನಿಂಗ್ಸ್    ವಿರುದ್ಧ    ಸ್ಥಳ
ಪಂಜಾಬ್    231/4    20    1    ಚೆನ್ನೈ    ಕಟಕ್
ಪಂಜಾಬ್    226/6    20    1    ಚೆನ್ನೈ    ಮುಂಬೈ
ಪಂಜಾಬ್    211/4    18.4    2    ಸನ್‌ರೈಸರ್ಸ್     ಹೈದರಾಬಾದ್
ಪಂಜಾಬ್    206/4    18.5    2    ಚೆನ್ನೈ    ಅಬುಧಾಬಿ
ಚೆನ್ನೈ    205/4    20    1    ಪಂಜಾಬ್    ಅಬುಧಾಬಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.