ಕ್ರೀಡೆ

ಟ್ರೋಫಿಗೆ ಯಾರ ಚುಂಬನ?

ಟ್ರೋಫಿಗೆ ಯಾರ ಚುಂಬನ?
Published On :

ಬೆಂಗಳೂರು: ಈ ಬಾರಿ ಟೂರ್ನಿಯಲ್ಲಿ ಹೆಚ್ಚು ಸ್ಥಿರ ಪ್ರದರ್ಶನ ನೀಡುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೊಲ್ಕತಾ ನೈಟ್ ರೈಡರ್ಸ್ ತಂಡಗಳೇ ಅಂತಿಮ ಸಮರದಲ್ಲಿ ಮುಖಾಮುಖಿಯಾಗುತ್ತಿರುವುದರಿಂದ ಏಳನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಹೆಚ್ಚು ಅಭಿಮಾನಿಗಳ ಕೇಂದ್ರೀಕೃತವಾಗಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ತಂಡಗಳು ಚಾಂಪಿಯನ್‌ಪಟ್ಟಕ್ಕಾಗಿ ಸೆಣಸಲಿವೆ.
ಕೊಲ್ಕತಾ ತಂಡ ಈಗಾಗಲೇ ಒಂದು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದು, ಎರಡನೇ ಬಾರಿಗೆ ಟ್ರೋಫಿಗೆ ಕಣ್ಣಿಟ್ಟಿದೆ. ಆದರೆ, ಕಿಂಗ್ಸ್ ಪಂಜಾಬ್ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವುದರ ಜೊತೆಗೆ ಚೊಚ್ಚಲ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ಕಾತರದಿಂದ ಕಾದುಕುಳಿತಿದೆ.
ಎರಡೂ ಪಡೆಗಳ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ತಮ್ಮ ಮಾಲೀಕರಾದ, ಬಾಲಿವುಡ್‌ನ ಖ್ಯಾತ ತಾರಾಮಣಿಗಳಾದ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾಗೆ ಟ್ರೋಫಿ ಗೆದ್ದುಕೊಡುವ ಆಶಾಭಾವನೆಯಲ್ಲಿದ್ದಾರೆ. ಶಾರುಖ್ ಮತ್ತು ಪ್ರಿತಾ, ವೀರ ಝರಾ ಚಿತ್ರದಲ್ಲಿ ಜೊತೆಜೊತೆಯಾಗಿ ನಟಿಸಿದ್ದು, ಐಪಿಎಲ್‌ನಲ್ಲಿ ಯಾರಿಗೆ ಅದೃಷ್ಟ ಖುಲಾಯಿಸತ್ತದೆ ಎಂಬುದೇ ಕುತೂಹಲದ ಅಂಶವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಕ್ವಾಲಿಫಾಯರ್ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಹೊರತಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ಮಿಲ್ಲರ್ ಅವರು ಕೆಕೆಆರ್ ಪಾಲಿಗೆ ಹೆಚ್ಚು ಅಪಾಯಕಾರಿಯಾಗಿದ್ದಾರೆ. ನಾಯಕ ಬೇಯ್ಲಿ, ಮನನ್ ವೋರ್ಹಾ ಮತ್ತು ವೃದ್ಧಿಮಾನ್ ಸಹಾ ಕೂಡ ಉತ್ತಮ ದಾಂಡಿಗರಾಗಿದ್ದಾರೆ.
ಆದರೆ, ಪಂಜಾಬ್ ತಂಡದಲ್ಲಿ ಬೌಲಿಂಗ್ ವಿಭಾಗ ಹೆಚ್ಚು ಸದೃಢವಾಗಿಲ್ಲ ಎಂಬುದೇ ಅದಕ್ಕೆ ಸ್ವಲ್ಪ ಚಿಂತೆ. ಮಿಚೆಲ್ ಜಾನ್ಸನ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೇ ಇರುವುದು ಪಂಜಾಬ್‌ಗೆ ಹಿನ್ನಡೆಯಾಗಿದೆ. ಉಳಿದಂತೆ, ಸಂದೀಪ್ ಶರ್ಮಾ, ಅವಾನ, ಕರಣವೀರ್ ಸಿಂಗ್, ಅಕ್ಷರ್ ಪಟೇಲ್ ಉತ್ತಮ ದಾಳಿಕಾರರಾಗಿದ್ದರೂ ಸಹ ಎದುರಾಳಿ ದಾಂಡಿಗರ ಮೇಲೆ ಹೆಚ್ಚು ಪ್ರಭಾವ ಬೀರಲು ವಿಫಲರಾಗಿದ್ದಾರೆ. ಬಹುತೇಕ ಪಂದ್ಯಗಳಲ್ಲಿ ತನ್ನ ಅಗಾಧ ಬ್ಯಾಟಿಂಗ್ ಶಕ್ತಿಯ ಮೂಲಕವೇ ಕಿಂಗ್ಸ್ ಪಂಜಾಬ್ ತಂಡ ಯಶಸ್ಸನ್ನು ಸಾಧಿಸಿದೆ.
ಮತ್ತೊಂದೆಡೆ ಗೌತಮ್ ಗಂಭೀರ್ ನಾಯಕತ್ವದಲ್ಲಿರುವ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪ್ರತಿಯೊಬ್ಬ ಆಟಗಾರ ಅತ್ಯುತ್ತಮ ಲಯದಲ್ಲಿರುವುದು ಅದರ ಶಕ್ತಿಯನ್ನು ದುಪ್ಪಟ್ಟು ಹೆಚ್ಚಿಸಿದೆ.
ಸದ್ಯ ಟೂರ್ನಿಯಲ್ಲೇ ಅತಿ ಹೆಚ್ಚು ರನ್‌ಗಳಿಸಿ ಕಿತ್ತಳೆ ಬಣ್ಣದ ಕ್ಯಾಪ್ ಧರಿಸಿರುವ ಆರಂಭಿಕ ರಾಬಿನ್ ಉತ್ತಮ ಕೆಕೆಆರ್ ಬ್ಯಾಟಿಂಗ್ ವಿಭಾಗದ ದೈತ್ಯ ಶಕ್ತಿ ಎಂಬಂತಾಗಿದ್ದಾರೆ. ಉಳಿದಂತೆ, ಗಂಭೀರ್, ಮನೀಷ್, ಶಕೀಬ್ ಅಲ್ ಹಸನ್, ಯೂಸುಫ್ ಹಾಗೂ ಡಾಶ್ಕೇಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಇನ್ನು ಬೌಲಿಂಗ್‌ನಲ್ಲಿ ಮಾರ್ನ್ ಮಾರ್ಕೆಲ್, ಉಮೇಶ್ ಯಾದವ್, ಶಕೀಬ್, ಸುನೀಲ್ ನಾರಾಯಣ್, ಪಿಯೂಶ್ ಚಾವ್ಲಾರಂತಹ ಅನುಭವಿಗಳಿಂದ ಕೂಡಿರುವ ಬೌಲಿಂಗ್ ವಿಭಾಗವನ್ನು ಕೆಕೆಆರ್ ಹೊಂದಿದೆ.
ಲೀಗ್ ಹಂತದಲ್ಲಿನ ಎರಡು ಬಾರಿಯ ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ 1 ಗೆಲವು-ಸೋಲಿನ ಫಲಿತಾಂಶ ಅನುಭವಿಸಿವೆ. ಆದರೆ, ಮೊದಲ ಕ್ವಾಲಿಫಾಯರ್ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್‌ನ್ನು ಮಣಿಸಿ ಕೊಲ್ಕತಾ ನೇರವಾಗಿ ಫೈನಲ್ ತಲುಪಿತು. ಈಗ ಫೈನಲ್‌ನಲ್ಲಿ ಅದಕ್ಕೆ ತಕ್ಕ ಸೇಡು ತೀರಿಸಿಕೊಳ್ಳಲು ಪಂಜಾಬ್ ಕಿಂಗ್ಸ್ ಹೊಂಚು ಹಾಕಿ ಕುಳಿತಿದೆ.
ಲೀಗ್ ಹಂತದಲ್ಲಿ ಕಿಂಗ್ಸ್ ಪಂಜಾಬ್ ಆಡಿದ 14 ಪಂದ್ಯಗಳ ಪೈಕಿ 11ರಲ್ಲಿ ಗೆಲವು ದಾಖಲಿಸಿ ಅಗ್ರಸ್ಥಾನದ ಗೌರವದೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡರೆ, ಕೊಲ್ಕತಾ ನೈಟ್ ರೈಡರ್ಸ್ 9ರಲ್ಲಿ ಗೆಲವು ಸಾಧಿಸಿ ಎರಡನೇ ತಂಡವಾಗಿ ಮುಂದಡಿ ಇಟ್ಟಿತ್ತು.
ಈ ಮಧ್ಯೆ ಬೆಂಗಳೂರು ಅಂಗಣದಲ್ಲಿ ರನ್ ಹೊಳೆ ಹರಿಯಬಹುದಾಗಿದೆ. ಬ್ಯಾಟಿಂಗ್‌ಗೆ ಯೋಗ್ಯವಾಗಿರುವ ಈ ಪಿಚ್‌ನಲ್ಲಿ ಬೌಲರ್‌ಗಳ ಪಾಲಿಗೆ ಅಗ್ನಿಪರೀಕ್ಷೆಗಳು ಕಾದಿವೆ.
ಈ ಮುನ್ನ ಫೈನಲ್ ಪಂದ್ಯವನ್ನು ಮುಂಬೈನಲ್ಲಿಯೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಂತಿಮ ಗಳಿಗೆಯಲ್ಲಿ ಬೆಂಗಳೂರಿಗೆ ವರ್ಗಾಯಿಸಲಾಯಿತು. ನಾಳಿನ ಪಂದ್ಯದಲ್ಲಿ ಇಡೀ ಕ್ರೀಡಾಂಗಣ ಅಭಿಮಾನಿಗಳಿಂದ ತುಂಬಿ ತುಳುಕುವುದು ಖಚಿತ.

ಪಂದ್ಯ ಆರಂಭ: ರಾತ್ರಿ 8 ಗಂಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.