ನೋಡಿ, ಪದಕ ಗೆದ್ದಿದ್ದೇನೆ

ಮಂಗಳೂರು: ಪೂವಮ್ಮ ಮಾಯವಾಗಿಲ್ಲ, ನೋಡಿ ನಾನು ಪದಕ ಗೆದ್ದಿದ್ದೇನೆ...
ಇದು ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಮತ್ತು ಕಂಚು ಗೆದ್ದು ತಾಯ್ನೆಲಕ್ಕೆ (ಬಜಪೆ ವಿಮಾನ ನಿಲ್ದಾಣ) ಕಾಲಿಟ್ಟ ಬಳಿಕ ಚಿನ್ನದ ಹುಡುಗಿ ಎಂ.ಆರ್ ಪೂವಮ್ಮ ಹೇಳಿದ ಬಿಚ್ಚು ನುಡಿ.
2012ರಲ್ಲಿ ಬೆನ್ನು ಹುರಿ ನೋವಿಗೆ ಒಳಗಾದ ಪರಿಣಾಮ ಸಾಧನೆಯ ಆಸೆಯನ್ನೇ ಬಿಟ್ಟಿದ್ದೆ. ಅಷ್ಟರಲ್ಲಿ ಪೂವಮ್ಮ ಅಥ್ಲೆಟಿಕ್ಸ್ನಿಂದ ದೂರವಾಗಿದ್ದಾಳೆ ಎಂಬ ಮಾತುಗಳು ಕೇಳಿಬಂದಿದ್ದವು.
ನಿಜ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಆದರೆ, ಎದೆಗುಂದಲಿಲ್ಲ. ಮೈಕೊಡವಿ ಮೇಲೇಳುವ ಪ್ರಯತ್ನ ಮಾಡುತ್ತ, ಸವಾಲಿಗೆ ಮೈಯೊಡ್ಡಿ ನಿಂತೆ. ನನ್ನಲ್ಲಿನ ಛಲ, ಆತ್ಮ ವಿಶ್ವಾಸ, ನಿರಂತರ ಕಠಿಣ ಪರಿಶ್ರಮದ ಫಲವಾಗಿ ಮತ್ತೆ ಟ್ರ್ಯಾಕ್ಗೆ ಮರಳಲು ಸಾಧ್ಯವಾಯಿತು.
ಇದಕ್ಕೆ ಕಾರಣರಾದ ಬಾಕ್ಸಿಂಗ್ ಕೋಚ್ ಹರಿಶಂಕರ್ ವರ್ಮ ಅವರ ಸಹಾಯ ನೆನೆದ ಪೂವಮ್ಮ, ಏಷ್ಯನ್ ಗೇಮ್ಸ್ನಲ್ಲಿ ಪದಕ ಪಡೆಯುವುದು ಸುಲಭ ಅಲ್ಲ. ಹೆತ್ತವರ ಪ್ರೋತ್ಸಾಹ, ಕೋಚ್ ಸಹಕಾರದಿಂದ ನಾನು ಈ ಮಟ್ಟ ತಲುಪಲು ಸಾಧ್ಯವಾಯಿತು ಎಂದರು.
ರಾಜ್ಯ ಸರ್ಕಾದಿಂದ ಇದುವರೆಗೆ ಯಾವುದೇ ಬೆಂಬಲ ಸಿಕ್ಕಿರಲಿಲ್ಲ. ಫೆಡರೇಶನ್ ಮತ್ತು ಸರ್ಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ. ಕ್ರೀಡಾ ಸಚಿವ ಅಭಯಚಂದ್ರ ಜೈನ್ ಪದಕ ತಂದವರಿಗೆ ವಸತಿ ಸೌಲಭ್ಯ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ನಾನು ವೈಯಕ್ತಿಕ ದಾಖಲೆ ಮಾಡದೇ ಇರಬಹುದು. ಆದರೆ ದೇಶದಲ್ಲಿನ ಸಾಧನೆಗೂ, ವಿದೇಶದಲ್ಲಿನ ಸಾಧನೆಗೂ ವ್ಯತ್ಯಾಸ ಇದೆ. ವಿದೇಶದಲ್ಲಿ ಹವಾಮಾನಕ್ಕೆ ಹೊಂದಿಕೊಳ್ಳಬೇಕು. ನೂರು, ಇನ್ನೂರು ಮೀಟರ್ ಓಟದಂತೆ 400 ಮೀಟರ್ನಲ್ಲಿ ಓಡುವುದು ಸುಲಭವಲ್ಲ. ಅಲ್ಲಿ ಪರಿಸ್ಥಿತಿ ಅಂಜಾಸಿ ಓಡಬೇಕಾಗುತ್ತದೆ.
ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸೂಕ್ತ ರೀತಿಯಲ್ಲಿ ತಯಾರಿ ಪಡೆಯಲು ನಮ್ಮಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಮಂಗಳೂರು, ಬೆಂಗಳೂರು, ಪಾಟಿಯಾಲದಲ್ಲಿ ತರಬೇತಿ ಪಡೆದರೂ ಒಂದೇ. ಅದೇ ಟ್ರ್ಯಾಕ್, ಅದೇ ಓಟ.
ನಾನು ಈಗ 51 ಸೆಂಕೆಂಡ್ (ಓಟದ ಅವಧಿ) ರೇಂಜ್ನಲ್ಲಿ ಇದ್ದೇನೆ. ಮುಖ್ಯವಾಗಿ ವಿದೇಶದಲ್ಲಿ ನಾವು ಹೆಚ್ಚಿನ ತರಬೇತಿ ಪಡೆದಲ್ಲಿ ನಮ್ಮ ಪ್ರದರ್ಶನ ಮಟ್ಟ ಮತ್ತಷ್ಟು ಉತ್ತಮಗೊಳ್ಳಲು ಅನುಕೂಲವಾಗುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆಯನ್ನು ಅಥ್ಲೀಟ್ಗಳಿಗೆ ನಿರ್ಮಿಸಿ ಕೊಡಬೇಕಾಗಿದೆ. ವಿಕಾಸಗೌಡ ವಿದೇಶದಲ್ಲೇ ತರಬೇತಿಗೆ ಅಣಿಯಾಗಿದ್ದು, ಅವರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದೆ ಎಂದ ಪೂವಮ್ಮ, ಪ್ರಮುಖವಾಗಿ ನಮಗೆ ಪ್ರಾಯೋಜಕರ ಅವಶ್ಯಕತೆಯಿದೆ ಎನ್ನುತ್ತಾರೆ.
ಚಿನ್ನ, ಬೆಳ್ಳಿ, ಕಂಚು ಎಲ್ಲ ಒಂದೇ: 400 ಮೀಟರ್ ಹರ್ಡಲ್ಸ್ನಲ್ಲಿ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಹೀಟ್ಸ್ನಲ್ಲಿ ಪ್ರಥಮವಾಗಿ ಬಂದೆ. ಇಲ್ಲಿ ಎರಡನೇ ಸ್ಥಾನ ಪಡೆದವರು ಫೈನಲ್ನಲ್ಲಿ ದ್ವಿತೀಯ ಸ್ಥಾನಗಳಿಸಿದರು. ನಾವು ಪ್ರತಿಸ್ಪರ್ಧಿ ಓಟಗಾರರನ್ನು ಅರಿಯಬೇಕಾಗುತ್ತದೆ. ರಿಲೇ ತಂಡದಲ್ಲಿ ಆರು ಓಟಗಾರರನ್ನು ಅರಿಯಬೇಕಾಗುತ್ತದೆ. ರೀಲೇ ತಂಡದಲ್ಲಿ ಆರು ಓಟಗಾರರನ್ನು ಮೊದಲೇ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಈ ಪೈಕಿ ನಾಲ್ಕು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ.
ಭಾರತೀಯ ರೀಲೆಯಲ್ಲಿ ತಜ್ಞರು. ಇಲ್ಲೂ ಚಿನ್ನದ ನಿರೀಕ್ಷೆ ಇತ್ತು. ಅದು ಹುಸಿಯಾಗಲಿಲ್ಲ. ದಾಖಲೆ ಉತ್ತಮ ಮಾಡಬೇಕು ಎಂದು ನಿರ್ಧರಿಸಿದ್ದೆವು. ಅಂತಿಮವಾಗಿ ಓಡಲು ಪ್ರಬಲ ಸಾಮರ್ಥ್ಯ ಹೊಂದಿರುವ ಅಥ್ಲೀಟ್ಗೆ ಅವಕಾಶ ನೀಡಲಾಗುತ್ತದೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿಯೂ ನಾನೇ ಓಡಿದ್ದು, ಅಲ್ಲಿಯೂ ಚಿನ್ನ ಸಿಕ್ಕಿತ್ತು. ಇಲ್ಲೂ ನಾನೇ ಓಟ ಮುಗಿಸಿದೆ. ನನಗೆ ಹೆಮ್ಮೆ ಎನಿಸುತ್ತದೆ.
ಪದಕ ಗೆದ್ದವರಿಗೆ ರು.10 ಲಕ್ಷ: ಪದಕ ಗೆದ್ದ ತಂಡದ ಎಲ್ಲ ಕ್ರೀಡಾಗಳುಗಳಿಗೂ ಸರ್ಕಾರದಿಂದ ತಲಾ ರು.10 ಲಕ್ಷ ರು. ಗಳ ಬಹುಮಾನ ನೀಡಲಿದೆ ಎಂದು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


