ಫೆಡರರ್ ಮುನ್ನಡೆ, ಶರಪೋವಾಗೆ ಸೋಲು

ನ್ಯೂಯಾರ್ಕ್: ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಈ ವರ್ಷದ ಕೊನೆಯ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಭಾನುವಾರ ತಡರಾತ್ರಿ ನಡೆದ ಪುರುಷರ ವಿಭಾಗದ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್ಲೆಂಡ್ನ ಸ್ಟೇನಿನ ಮಾರ್ಸೆಲೊ ಗ್ರ್ಯಾನೊಲರ್ಸ್ ಅವರನ್ನು ಪರಾಭವಗೊಳಿಸಿದರು. ಎರಡನೇ ಶ್ರೇಯಾಂಕಿತ ಆಟಗಾರ ಫೆಡರರ್ ಮತ್ತು ಮಾರ್ಸೆಲೊ ನಡುವಿನ ಪಂದ್ಯಕ್ಕೆ ಮಳೆ ಕೂಡ ಅಡ್ಡಿಪಡಿಸಿತು. ಆದರೆ, ಅಂತಿಮವಾಗಿ ಸ್ವಿಸ್ ಆಟಾಗರ ಮಳೆಯ ನಡುವೆಯೇ ತಮ್ಮ ಅನುಭವವನ್ನು ಪೂರ್ಣ ಪ್ರಮಾಣದಲ್ಲಿ ಧಾರೆಯರೆಯುವ ಮೂಲಕ ಸುಮಾರು ಎರಡು ಗಂಟೆಗಳ ಆಟದಲ್ಲಿ ಗೆಲುವು ತಮ್ಮದಾಗಿಸಿಕೊಂಡರು.
40 ವರ್ಷಗಳ ಬಳಿಕ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಎನಿಸಿದ ಅತಿಹಿರಿಯ ಆಟಗಾರ ಎನಿಸಿಕೊಳ್ಳುವತ್ತ ಯಶಸ್ವಿ ದಾಪುಗಾಲಿಟ್ಟಿರುವ 33ರ ಫೆಡರರ್, ಟೂರ್ನಿಯಲ್ಲಿ ತಮ್ಮ 70ನೇ ಗೆಲುವು ದಾಖಲಿಸಿದ ಸಾಧನೆ ಮಾಡಿದಂತಾಗಿದೆ. ಪಂದ್ಯದಲ್ಲಿ ಒಟ್ಟು 13 ಏಸ್ಗಳನ್ನು ಸಿಡಿಸಿದ ಅವರು, ಒಂದೂ ಡಬಲ್ ಫಾಲ್ಟ್ ಮಾಡದೇ ಎದುರಾಳಿಗೆ ನಿರೀಕ್ಷೆಯಂತೆ ಸೋಲುಣಿಸುವಲ್ಲಿ ಯಶಸ್ವಿಯಾದರು.
ಕ್ವಾರ್ಟರ್ಫೈನಲ್ ಸುತ್ತು ಪ್ರವೇಶಿಸಬೇಕಾದರೆ, ಸ್ವಿಸ್ ಆಟಗಾರ ತಮ್ಮ ಮುಂದಿನ ಪಂದ್ಯದಲ್ಲಿ ಎದುರಾಗಲಿರುವ ಸ್ಪೇನಿನ ರಾಬರ್ಟೊ ಆಗುಟ್ ಅವರನ್ನು ಮಣಿಸಬೇಕಾಗಿದೆ.
ಈ ಮಧ್ಯೆ ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲೇ ಸ್ಪೇನಿನ ಡೇವಿಡ್ ಪೆರರ್ ಸೋಲು ಕಾಣುವುದರೊಂದಿಗೆ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ನಾಲ್ಕನೇ ಶ್ರೇಯಾಂಕಿತ ಡೇವಿಡ್ ಫೆರರ್, 3-6, 3-1, 1-6, 3-6 ಸೆಟ್ಗಳಿಂದ ಫ್ರಾನ್ಸ್ನ 26ನೇ ಶ್ರೇಯಾಂಕಿತ ಗಿಲ್ಸ್ ಸಿಮೋನ್ ಎದುರು ತಲೆಬಾಗಿಸಿದರು.
ಚೆಕ್ ಗಣರಾಜ್ಯದ 6ನೇ ಶ್ರೇಯಾಂಕಿತ ಟೊಮಾಸ್ ಬೆರ್ಡಿಚ್ ಮತ್ತು ಫ್ರಾನ್ಸ್ನ 20ನೇ ಶ್ರೇಯಾಂಕಿತ ಗೇಲ್ ಮೊನ್ಫಿಲ್ಸ್ ಕೂಡ ಹದಿನಾರರಘಟ್ಟಕ್ಕೆ ಹೆಜ್ಜೆ ಹಾಕಿದ್ದಾರೆ.
ಮಾರಿಯಾಗೆ ಆಘಾತ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ರಷ್ಯಾದ ಮಾರಿಯಾ ಶರಪೋವಾ ನಾಲ್ಕನೇ ಸುತ್ತಿನಲ್ಲೇ ಸೋಲಿನ ಕಹಿ ಅನುಭವಿಸುವುದರೊಂದಿಗೆ ಬಹುಬೇಗನೆ ತಮ್ಮ ಹೋರಾಟಕ್ಕೆ ತೆರೆ ಎಳೆದುಕೊಂಡಂತಾಗಿದೆ.
ಡೆನ್ಮಾರ್ಕ್ 10ನೇ ಶ್ರೇಯಾಂಕಿತ ಆಟಗಾರ್ತಿ ಕರೊಲಿನೆ ವೋಜ್ನಿಯಾಕಿ 6-4, 2-6, 6-2 ಸೆಟ್ಗಳಿಂದ 5ನೇ ಶ್ರೇಯಾಂಕಿತೆ ಶರಪೋವಾಗೆ ಸೋಲುಣಿಸಿ ಹೊರದಾರಿ ತೋರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


