ಕ್ರೀಡೆ

ಭಾರತ ಮಡಿಲಿಗೆ ಸರಣಿ

ಭಾರತ ಮಡಿಲಿಗೆ ಸರಣಿ
Published On :

ಬರ್ಮಿಂಗ್‌ಹ್ಯಾಮ್: ಬೌಲರ್‌ಗಳ ಕರಾರುವಾಕ್ ಪ್ರದರ್ಶನ ಹಾಗೂ ಆರಂಭಿಕ ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್‌ರ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಭಾರತ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಇಂಗ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಬಗ್ಗು ಬಡಿದಿದೆ. ಆ ಮೂಲಕ ಟೀಂ ಇಂಡಿಯಾ ಇನ್ನು ಒಂದು ಪಂದ್ಯ ಇರುವಂತೆಯೇ, ಐದು ಪಂದ್ಯಗಳ ಏಕದಿನ ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

ಏಜ್ ಬಾಸ್ಟ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಆತಿಥೇಯ ಪಡೆಯನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿದರು. ತಮ್ಮ ನಾಯಕನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತೆ ಪ್ರಾರಂಭದಿಂದಲೇ ತೀಕ್ಷ್ಮ ದಾಳಿಗೆ ಮುಂದಾದ ಭಾರತೀಯ ಬೌಲರ್‌ಗಳ ಮುಂದೆ ರನ್‌ಗಳಿಸಲು ಪರದಾಡಿದ ಇಂಗ್ಲೆಂಡ್ ತಂಡ 49.3 ಓವರುಗಳಲ್ಲಿ 206ರನ್‌ಗಳಿಗೆ ಪತನಗೊಂಡಿತು.

ಇಂಗ್ಲೆಂಡ್ ಒಡ್ಡಿದ ಸಾಧಾರಣ ಗುರಿ ಬೆಂಬತ್ತಿದ ಭಾರತ, ಕೇವಲ 30.3 ಓವರುಗಳಲ್ಲಿಯೇ 1 ವಿಕೆಟ್ ನಷ್ಟಕ್ಕೆ 212ರನ್ ದಾಖಲಿಸಿ ವಿಜಯೋತ್ಸವ ಆಚರಿಸಿತು. ಶತಕ ವೀರ ಅಜಿಂಕ್ಯ ರಹಾನೆ (106 ರನ್, 100 ಎಸೆತ, 10 ಬೌಂಡರಿ, 4 ಸಿಕ್ಸರ್) ಮತ್ತು ಶಿಖರ್ ಧವನ್ (ಆಜೇಯ 97 ರನ್, 81 ಎಸೆತ, 11 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್‌ಗೆ 28.4 ಓವರ್‌ಗಳಲ್ಲಿ 183ರನ್ ಪೇರಿಸಿ ಭಾರತವನ್ನು ಗೆಲುವಿನ ಹೊಸ್ತಿಲಿಗೆ ನಿಲ್ಲಿಸಿದರು.

ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಶಿಕ್ಷಿಸಿದ ರಹಾನೆ ಮತ್ತು ಧವನ್, ಮೈದಾನದ ಪ್ರತಿ ಮೂಲೆಗೂ ಚೆಂಡನ್ನು ದಂಡಿಸಿ ಸುಲಭವಾಗಿ ರನ್ ಕಲೆ ಹಾಕಿದರು. ರಹಾನೆ ಔಟಾದ ನಂತರ ಜತೆಯಾದ ಧವನ್ ಮತ್ತು ಕೊಹ್ಲಿ ಉಳಿದ ಔಪಚಾರಿಕತೆ ಪೂರೈಸಿದರು.

ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಸತತ ಸೋಲುಂಡು ತೀರಾ ಅವಮಾನಕ್ಕೆ ಒಳಗಾಗಿದ್ದ ಧೋನಿ ಪಡೆ, ಈಗ ಏಕದಿನ ಸರಣಿಯಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ತನ್ನ ಘನತೆಯನ್ನು ಮತ್ತೆ ಹೆಚ್ಚಿಸಿಕೊಂಡಂತಾಗಿದೆ. ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಇದು 91ನೇ ಗೆಲವಾಗಿದ್ದು, ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕ ಎಂಬ ಖ್ಯಾತಿ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.