ಐಪಿಎಲ್ 2015: ರಾಜಸ್ಥಾನ ರಾಯಲ್ಸ್ ಗೆ ಮಣಿದ ಧೋನಿ ಪಡೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್)ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ರಾಜಸ್ತಾನ ರಾಯಲ್ಸ್‌ ವಿರುದ್ಧ ಸೋತು ಸುಣ್ಣವಾಗಿದೆ.
ರಾಜಸ್ಥಾನ ರಾಯಲ್ಸ್ ಗೆ ಜಯ
ರಾಜಸ್ಥಾನ ರಾಯಲ್ಸ್ ಗೆ ಜಯ
Updated on: 

ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್)ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ರಾಜಸ್ತಾನ ರಾಯಲ್ಸ್‌ ವಿರುದ್ಧ ಸೋತು ಸುಣ್ಣವಾಗಿದೆ.

ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ನಾಲ್ಕು ವಿಕೆಟ್‌ ನಷ್ಟಕ್ಕೆ 156 ರನ್‌ ಗಳಿಸಿತ್ತು. ಸಿಎಸ್ ಕೆ ನೀಡಿದ 157 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ರಾಯಲ್ಸ್ ಆಟಗಾರರು ರಾಯಲ್ ಆಟ ಪ್ರದರ್ಶಿಸಿ, ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿದ್ದಾರೆ. ಇದರೊಂದಿಗೆ ರಾಯಲ್ಸ್ 8 ವಿಕೆಟ್ ಗಳಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ರಾಜಸ್ತಾನ ರಾಯಲ್ಸ್‌ ಪರ ಆರಂಭಿಕರಾದ ಅಜಿಂಕ್ಯ ರಹಾನೆ ಅಜೇಯ 76 ಹಾಗೂ ಶೇನ್‌ ವಾಟ್ಸನ್‌ 73 ರನ್ ಗಳಿಸಿದ್ದು ತಂಡ ಪಂದ್ಯ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದರು.

73 ರನ್ ಗಳಿಸಿದ್ದಾಗ ಶೇನಾ ವಾಟ್ಸನ್ ಔಟಾದರು. ಬಳಿಕ ಬಂದ ಸ್ಮಿತ್ ಕೇವಲ 6 ರನ್ ಗಳಿಸಿ ಔಟಾದರು. ನಂತರ ಬಂದ ನಾಯರ್ ಅಜೇಯ 1 ರನ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ಜಡೇಜಾ, ಬ್ರಾವೋ ತಲಾ 1 ವಿಕೆಟ್ ಪಡೆದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆರಂಭಿಕರಾದ ಸ್ಮಿತ್‌ ಅತ್ಯುತ್ತಮವಾಗಿ ಬ್ಯಾಟ್  ಬಿಸಿದ್ದು 29 ಎಸೆತಗಳಲ್ಲಿ 40 ಗಳಿಸಿ ಔಟಾದರು. ಆದರೆ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್‌ ಮೆಕ್ಲಮ್‌ ಕೇವಲ 12 ಸಿಡಿಸಿ ಅಭಿಮಾನಿಗಳಿಗೆ ನಿರಾಸೆ ಮಾಡಿದರು. ನಂತರ ಬಂದ ಸುರೇಶ್‌ ರೈನಾ 4 ರನ್ ಗಳಿಸಿ ಔಟಾದರೆ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಫಾಫ್‌ ಡು ಪ್ಲೆಸಿಸ್‌ 1 ರನ್  ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು.

ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಡ್ವೇನ್‌ ಬ್ರಾವೊ ಅಜೇಯ ಹಾಗೂ ನಾಯಕ ಮಹೇಂದ್ರ ಸಿಂಗ್‌ ಧೋನಿ ಚೇತರಿಕೆ ನೀಡಿದರು. ಬ್ರಾವೋ ಅಜೇಯ 62 ರನ್ ಹಾಗೂ ಧೋನಿಯ 31 ಗಳಿಸಿದ್ದು, ಈ ಇಬ್ಬರ ಜತೆಯಾಟ 91 ರನ್ ಸಿಡಿಸಿದ್ದು, ರಾಜಸ್ಥಾನ ರಾಯಲ್ಸ್ ಗೆ ಗೆಲ್ಲಲು 157 ರನ್ ಗಳ ಗುರಿ ನೀಡಲು ಸಾಧ್ಯವಾಯಿತು.

ರಾಜಸ್ಥಾನ ರಾಯಲ್ಸ್ ಪರ ಅಂಕಿತ್ ಶರ್ಮಾ, ಮೋರಿಸ್, ತಂಬೇ ಹಾಗೂ ಜೇಮ್ಸ್ ಫಾಕ್ನರ್ ತಲಾ 1 ವಿಕೆಟ್ ಪಡೆದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com