

ನ್ಯೂಯಾರ್ಕ್: ಇದೇ ತಿಂಗಳು 31ರಿಂದ ಆರಂಭವಾಗಲಿರುವ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ ಅಮೆರಿಕದ ಸೆರೆನಾ ವಿಲಿಯಮ್ಸ್ ಅಗ್ರಶ್ರೇಯಾಂಕ ಪಡೆದಿದ್ದಾರೆ. ಟೂರ್ನಿಯ ಪಂದ್ಯಗಳ ಡ್ರಾ ಗುರುವಾರ ಬಿಡುಗಡೆಯಾಗಲಿವೆ.
ಬುಧವಾರ ಪಂದ್ಯಾವಳಿಯ ಶ್ರೇಯಾಂಕ ಪಟ್ಟಿ ಬಿಡುಗಡೆಗೊಂಡಿದ್ದು, ಯುಎಸ್ ಓಪನ್‍ನ ಕಳೆದ ಮೂರು ಆವೃತ್ತಿಗಳಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸೆರೆನಾ ವಿಲಿಯಮ್ಸ್ ಅವರ ನಂತರ ಸ್ಥಾನದಲ್ಲಿ, ಕಳೆದ ಬಾರಿಯ ಫ್ರೆಂಚ್ ಓಪನ್ ಫೈನಲಿಸ್ಟ್ ಸಿಮೊನಾ ಹಾಲೆಪ್ ಇದ್ದಾರೆ.ಇನ್ನು 2006ರ ಚಾಂಪಿಯನ್ ರಷ್ಯಾದ ಮರಿಯಾ ಶರಫೋವಾ 3ನೇ ಸ್ಥಾನದಲ್ಲಿದ್ದು, ಕಳೆದ ವರ್ಷ ಯುಎಸ್ ಓಪನ್ ಫೈನಲ್ ತಲುಪಿದ್ದ ಡೆನ್ಮಾರ್ಕ್ ನ ಕೆರೋಲಿನ್ ವೋಜ್ನಿಯಾಕಿಗೆ 4ನೇ ಶ್ರೇಯಾಂಕ ಸಿಕ್ಕಿದೆ.
ನೂತನ ದಾಖಲೆಯತ್ತ ಸೆರೆನಾ
ಈ ಬಾರಿಯ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಜಯ ಸಾಧಿಸಿದರೆ, ನಿರ್ಧಿಷ್ಟ ಟೆನ್ನಿಸ್ ಋತುವಿನಲ್ಲಿ ನಡೆದ ಎಲ್ಲಾ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ನಾಲ್ಕನೇ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ, ಮರಿನ್ ಕೆನೊಲಿ (1953), ಮಾರ್ಗರೇಟ್ ಕೋರ್ಟ್ (1970) ಹಾಗೂ ಸ್ಟೆಫಿ ಗ್ರಾಫ್ (1988) ಈ ಸಾಧನೆ ಮಾಡಿದ್ದರು.