

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯ ನಡೆದ ನಾಗಪುರದ ವಿಸಿಎ ಸ್ಟೇಡಿಯಂನ ಪಿಚ್ ಅತ್ಯಂತ ಕೆಟ್ಟ ಪಿಚ್ ಎಂದು ಐಸಿಸಿ ಪರಿಗಣಿಸಿದ್ದು, ಈ ಸಂಬಂಧ ಉತ್ತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚಿಸಿದೆ.
ಈ ಸಂಬಂಧ 3ನೇ ಟೆಸ್ಟ್ ಪಂದ್ಯದ ರೆಫರಿಯಾಗಿದ್ದ ಜೆಫ್ ಕ್ರೋವ್ ಅವರು ಐಸಿಸಿಗೆ ತಮ್ಮ ವರದಿಯನ್ನು ನೀಡಿದ್ದು, ವರದಿಯಲ್ಲಿ ನಾಗಪುರ ಪಿಚ್ ಅತ್ಯಂತ ಕೆಟ್ಟ ಪಿಚ್ ಆಗಿತ್ತು ಎಂದು ವರದಿ ನೀಡಿದ್ದಾರೆ. ಹೀಗಾಗಿ ಬಿಸಿಸಿಐ ಮೇಲೆ ದುಬಾರಿ ದಂಡದ ತೂಗುಕತ್ತಿ ನೇತಾಡುತ್ತಿದ್ದು, ಬರೊಬ್ಬರಿ 9,950 ಪೌಂಡ್ (9,98,094.49ರು.) ನಷ್ಟು ದಂಡ ಬೀಳುವ ಸಾಧ್ಯತೆ ಇದೆ.
ಕಳೆದ ನವೆಂಬರ್ 25ರಂದು ಆರಂಭವಾಗಿದ್ದ 3ನೇ ಟೆಸ್ಟ್ ಪಂದ್ಯ ಕಳಪೆ ಪಿಚ್ ನಿಂದಾಗಿ ಕೇವಲ ಮೂರೇ ದಿನದಲ್ಲಿ ಅಂತ್ಯವಾಗಿತ್ತು. ಪಂದ್ಯದಲ್ಲಿ ಎರಡೂ ತಂಡದ ಘಟಾನುಘಟಿ ಬ್ಯಾಟ್ಸ್ ಮನ್ ಗಳು ಪಿಚ್ ವೈಫಲ್ಯದಿಂದಾಗಿ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಅಂತಿಮವಾಗಿ ಭಾರತ ತಂಡ ಈ ಪಂದ್ಯವನ್ನು 124ರನ್ ಗಳ ಅಂತರದಿಂದ ಜಯಗಳಿಸಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಹಶೀಂ ಆಮ್ಲಾ ಅವರು ತಮ್ಮ ವೃತ್ತಿ ಜೀವನದಲ್ಲಿಯೇ ಇಂತಹ ಕಠಿಣ ಪಿಚ್ ಅನ್ನು ನೋಡಿರಲಿಲ್ಲ ಎಂದು ಹೇಳಿದ್ದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 70 ರನ್ ಗಳ ಅಂತರದಲ್ಲಿ ತನ್ನ 15 ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಇದೀಗ ಪಿಚ್ ಕುರಿತ ವರದಿಯನ್ನು ಪಂದ್ಯದ ಮುಖ್ಯ ರೆಫರಿ ರಂಜನ್ ಮದುಗಲೆ ಅವರು ಐಸಿಸಿ ಕ್ರಿಕೆಟ್ ಮ್ಯಾನೇಜರ್ ಜೆಫ್ ಅಲ್ಲಾರ್ಡೈಸ್ ಅವರಿಗೆ ಸಲ್ಲಿಕೆ ಮಾಡಿದ್ದು, ಪಿಚ್ ನಲ್ಲಿ ಲೋಪವಿರುವುದು ಕಂಡುಬಂದರೆ ಬಿಸಿಸಿಐಗೆ ಬರೊಬ್ಬರಿ 9,950 ಪೌಂಡ್ (9,98,094.49ರು.) ನಷ್ಟು ದಂಡ ಬೀಳುವ ಸಾಧ್ಯತೆ ಇದೆ.