ಸೋಲಿನೊಂದಿಗೆ ಚಾಂಪಿಯನ್ನರ ವಿದಾಯ!

ಕರ್ನಾಟಕದ ಪ್ರಮುಖ ಬ್ಯಾಟ್ಸ್‍ಮನ್ ಗಳೆಸಿಕೊಂಡವರ ವೈಫಲ್ಯ ಒಂದೆಡೆಯಾದರೆ, ಆತಿಥೇಯ ತಂಡದ ಸಂಘಟಿತ ದಾಳಿಯಿಂದಾಗಿ ಈ ಸಾಲಿನ ರಣಜಿ ಟ್ರೋಫಿ ಟೂರ್ನಿಯಿಂದ ಹಾಲಿ ಚಾಂಪಿಯನ್ ಕರ್ನಾಟಕ ಹೊರಬಿದ್ದಿದೆ...
ಕರ್ನಾಟಕ ಆಟಗಾರ ರಾಬಿನ್ ಉತ್ತಪ್ಪ (ಸಂಗ್ರಹ ಚಿತ್ರ)
ಕರ್ನಾಟಕ ಆಟಗಾರ ರಾಬಿನ್ ಉತ್ತಪ್ಪ (ಸಂಗ್ರಹ ಚಿತ್ರ)
Updated on: 

ಪುಣೆ: ಕರ್ನಾಟಕದ ಪ್ರಮುಖ ಬ್ಯಾಟ್ಸ್‍ಮನ್ ಗಳೆಸಿಕೊಂಡವರ ವೈಫಲ್ಯ ಒಂದೆಡೆಯಾದರೆ, ಆತಿಥೇಯ ತಂಡದ ಸಂಘಟಿತ ದಾಳಿಯಿಂದಾಗಿ ಈ ಸಾಲಿನ ರಣಜಿ ಟ್ರೋಫಿ ಟೂರ್ನಿಯಿಂದ ಹಾಲಿ ಚಾಂಪಿಯನ್ ಕರ್ನಾಟಕ ಹೊರಬಿದ್ದಿದೆ.

ಇಲ್ಲಿನ ಎಂಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯ ಕಂಡ ಪಂದ್ಯದಲ್ಲಿ ಗೆಲ್ಲಲು 293 ರನ್ ಗುರಿ ಪಡೆದಿದ್ದ ಕರ್ನಾಟಕ ತೀವ್ರತರ ಹೋರಾಟ ನಡೆಸಿದ ಹೊರತಾಗಿಯೂ, ವೇಗಿ ಎನ್.ಆರ್. ಧುಮಲ್ (78/5) ಮತ್ತು ಅನುಪಮ್ ಸಂಕ್ಲೇಚಾ (65/4) ನಡೆಸಿದ ಮಾರಕ ದಾಳಿಗೆ ನಲುಗಿ 72 ಓವರ್ ಗಳಲ್ಲಿ 239 ರನ್ ಗಳಿಗೆ ತನ್ನ ದ್ವಿತೀಯ ಇನ್ನಿಂಗ್ಸ್ ಗೆ ತೆರೆ ಎಳೆಯಿತು.

ಪರಿಣಾಮ ಸತತ ಎರಡು ಬಾರಿ ರಣಜಿ ಟ್ರೋಫಿ ಎತ್ತಿಹಿಡಿದಿದ್ದ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ, ಈ ಬಾರಿ ನಾಕೌಟ್ ಹಂತಕ್ಕೆ ಪ್ರವೇಶಿಸುವಲ್ಲೇ ವಿಫಲವಾಗಿ ನಿರಾಸೆಯೊಂದಿಗೆ ಅದೂ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದಂತಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಈ ಸಾಲಿನಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಸೋಲನುಭವಿಸಿದ ಕರ್ನಾಟಕ, ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಮಾತ್ರ ಎಡವಿದ್ದು ವಿಚಿತ್ರವೆನಿಸಿತ್ತು.

ಕರ್ನಾಟಕದ ಬ್ಯಾಟಿಂಗ್ ಬೆನ್ನೆಲುಬಿನಂತಿದ್ದ ಮನೀಶ್ ಪಾಂಡೆ (0), ಕರುಣ್ ನಾಯರ್ (4)ರಂಥವರ ವೈಫಲ್ಯ ರಾಜ್ಯದ ಪಾಲಿಗೆ ದುಬಾರಿಯಾಗಿ ಪರಿಣಮಿಸಲಾಗಿ ಆತಿಥೇಯ ಮಹಾರಾಷ್ಟ್ರ 53 ರನ್ ಗಳ ಅಮೋಗ ಜಯ ಪಡೆದು ಆರು ಅಂಕಗಳನ್ನು ತನ್ನದಾಗಿಸಿಕೊಂಡರೆ, ಪ್ರವಾಸಿ ಕರ್ನಾಟಕ ಶೂನ್ಯ ಸಂಪಾದನೆಯೊಂದಿಗೆ ತಲೆತಗ್ಗಿಸಿತು. ಕಡೆಯವರೆಗೂ ತಂಡಕ್ಕೆ ಗೆಲವು ತಂದುಕೊಡಲು ಸೂಕ್ಷ್ಮಜ್ಞತೆಯಿಂದಲೇ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಸಿ.ಎಂ.ಗೌತಮ್ 65 ರನ್ ಗಳಿಸಿ ನಿರಾಸೆಯೊಂದಿಗೆ ಅಜೇಯರಾಗುಳಿದರು.

ಮಹಾರಾಷ್ಟ್ರದ ಮೊನಚಿನ ದಾಳಿ
ಇನ್ನು ಪಂದ್ಯದ ಮೂರನೇ ದಿದಾಂತ್ಯಕ್ಕೆ 1 ವಿಕೆಟ್ ಗೆ 31 ರನ್ ಗಳಿಸಿದ್ದ ಕರ್ನಾಟಕ, ಕೊನೆಯ ದಿನದಂದು ಸಹಜವಾಗಿಯೇ ಗೆಲುವಿನ ಕನಸು ಹೊಂದಿತ್ತು. ಆದರೆ ಅದರ ಲೆಕ್ಕಾಚಾರ ಮಾತ್ರ ಕೈಕೊಟ್ಟಿತು. ಮೊದಲೇ ಪಿಚ್ ವೇಗದ ಬೌಲಿಂಗ್ ಗೆ ಹೆಚ್ಚು ಆಪ್ತವಾಗಿದ್ದರಿಂದ ಕರ್ನಾಟಕದ ಜಯದ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ. ಹೀಗಾಗಿ  ಅದು ಎಚ್ಚರಿಕಿಯಿಂದಲೇ ದಿನದಾಟಕ್ಕೆ ಮುಂದಾಯಿತು. ಆದರೆ ಗುರುವಾರ 23 ರನ್ ಗಳಿಸಿ ಔಟಾಗದೆ ಉಳಿದಿದ್ದ ಆರಂಭಿಕ ಮಯಾಂಕ್ ಅಗರ್ವಾಲ್ (31) ಅವರನ್ನು ವೇಗಿ ಅನುಪಮ್ ಸಂಕ್ಲೇಜಾ ಕ್ರೀಸ್ ತೊರೆಯುವಂತೆ ಮಾಡುವುದರೊಂದಿಗೆ ಕರ್ನಾಟಕದ ಪತನಕ್ಕೆ ನಾಂದಿ ಹಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com