ಮುಂಬೈ ಬಲಾಬಲ ತಿಳಿದಿದೆ: ವಿನಯ್

ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಎದುರಾಳಿ ತಂಡದ..
ಆರ್.ವಿನಯ್ ಕುಮಾರ್
ಆರ್.ವಿನಯ್ ಕುಮಾರ್

ಬೆಂಗಳೂರು: ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಎದುರಾಳಿ ತಂಡದ ಬಲಾಬಲವನ್ನು ಅರಿತಿದ್ದು, ಆತ್ಮ ವಿಶ್ವಾಸದಿಂದ ಆಡುವುದಾಗಿ ನಾಯಕ ಆರ್.ವಿನಯ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್, ಗುಂಪು ಹಂತದಲ್ಲಿ ಮುಂಬೈ ವಿರುದ್ಧ ಆಡಿದ್ದು, ಅವರ ಸಾಮರ್ಥ್ಯ ಅರಿತಿದ್ದೇವೆ. ಆ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದರೂ ಉತ್ತಮ ಪ್ರದರ್ಶನ ನೀಡಿದ್ದೆವು. ಆ ಪಂದ್ಯದಲ್ಲಿನ ಪ್ರದರ್ಶನದಿಂದ ತಂಡದಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ ಎಂದರು. ಚಿನ್ನಸ್ವಾಮಿ ಅಂಗಣದ ಕುರಿತು ಮಾತನಾಡಿ, ಪಿಚ್ 50-50ಯಷ್ಟು ಬ್ಯಾಟಿಂಗ್ ಹಾಗೂ ಬೌಲಿಂಗ್‍ಗೆ ನೆರವಾಗಲಿದೆ.

ಇದರ ಉಪಯೋಗವನ್ನು ಯಾವ ತಂಡ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದರು. ಕಳೆದ ಪಂದ್ಯದಲ್ಲಿ ಸಿ.ಎಂ ಗೌತಮ್  ಭುಜದ ನೋವಿಗೆ ಒಳಗಾಗಿದ್ದರು. ಈಗ ಅವರು ಫಿಟ್ ಆಗಿದ್ದು, ಕ್ವಾರ್ಟರ್ ಫೈನಲ್ ನಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿ ಸುವ ಸಾಧ್ಯತೆಗಳಿವೆ. ಇನ್ನು ಮುಂಬೈ ತಂಡ ಬಲಿಷ್ಠವಾಗಿದ್ದು, ಪ್ರಮುಖ ಪಂದ್ಯಗಳಲ್ಲಿ ಆಡುವ ಸಾಮರ್ಥ್ಯ ಹೊಂದಿದೆ. ಎದುರಾಳಿ ತಂಡದ ಬಗ್ಗೆ ಹೆಚ್ಚು ಗಮನ ಹರಿಸದೇ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಇಚ್ಛಿಸುತ್ತೇವೆ ಎಂದರು.

ಕರ್ನಾಟಕದ ಮೇಲೆ ಒತ್ತಡ
ತಾರೆ ಅದೃಷ್ಟವನ್ನು ಬೆನ್ನಿಗೆ ಕಟ್ಟಿಕೊಂಡು ನಾಕೌಟ್ ಹಂತಕ್ಕೆ ಪ್ರವೇಶಿಸಿ, ಈಗ ಉಂಪಾತ್ಯದ ಸುತ್ತಿಗೆ ಕಾಲಿಟ್ಟಿರುವ ಮುಂಬೈ ತಂಡದ ನಾಯಕ ಆದಿತ್ಯ ತಾರೆ, ಆತಿಥೇಯ ಕರ್ನಾಟಕ ತಂಡ ಒತ್ತಡದಲ್ಲಿದೆ ಎಂದು ಹೇಳಿದ್ದಾರೆ. ಗುಂಪು ಹಂತದಲ್ಲಿ ಕರ್ನಾಟಕ ವಿರುದ್ಧ ತವರಿನಲ್ಲಿ ಆಡಿದ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದೆವು. ಅಲ್ಲದೆ ಹಾಲಿ ಚಾಂಪಿಯನ್ ಆಗಿರುವ ಕರ್ನಾಟಕ ತಂಡ ಈಗ ಒತ್ತಡದಲ್ಲಿ ಕಣಕ್ಕಿಳಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬರೋಡಾ ವಿರುದ್ಧದ ಗೆಲವು ಆತ್ಮವಿಶ್ವಾಸ ಹೆಚ್ಚಿಸಿದೆ. ಸಕಾರಾತ್ಮಕವಾಗಿ ಆಡುವತ್ತ ಗಮನ ಹರಿಸಿದ್ದೇವೆ. ಟೂರ್ನಿಯ ಆರಂಭದಲ್ಲಿ ನಿರಾಸೆ ಅನುಭವಿಸಿದ್ದರೂ, ನಂತರ ಉತ್ತಮ  ರೀತಿಯಲ್ಲಿ ಪ್ರದರ್ಶನ ನೀಡಿದ್ದೇವೆ. ರಹಾನೆ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ತಂಡ ಚೆನ್ನಾಗಿ ಆಡುತ್ತಿದೆ. ಈ ಹಿಡಿತವನ್ನು ಬಿಡಬಾರದು. ಈವರೆಗಿನ ಆಟಗಾರರ ಪ್ರದರ್ಶನ ನೋಡಿದರೆ, ತಂಡ ಗೆಲ್ಲುವ ವಿಶ್ವಾಸವಿದೆ. ತಂಡದಲ್ಲಿ ಕೆ.ಎಲ್ ರಾಹುಲ್, ರಾಬಿನ್ ಉತ್ತಪ್ಪರಂತ ಉತ್ತಮ ಬ್ಯಾಟ್ಸಮನ್‍ಗಳಿದ್ದಾರೆ. ಬೌಲಿಂಗ್ ಸಹ ಅತ್ಯುತ್ತಮವಾಗಿದೆ. ಮುಂಬೈ ವಿರುದ್ಧದ ಪಂದ್ಯ ದೊಡ್ಡ ಫೈಟ್. ಆಟಗಾರರು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ.
-ಜಾವಗಲ್ ಶ್ರೀನಾಥ್,
ಭಾರತ ತಂಡದ ಮಾಜಿ ವೇಗದ ಬೌಲರ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com