

ಆಕ್ಲೆಂಡ್: ರೋಚಕ ತಿರುವು ಪಡೆದಿದ್ದ ಭಾರತ-ಜಿಂಬಾಬ್ವೆ ಪಂದ್ಯವನ್ನು ಕೊನೆಯ ಕ್ಷಣದಲ್ಲಿ ಸುರೇಶ್ ರೈನಾ ಮತ್ತು ನಾಯಕ ಧೋನಿ ಪಂದ್ಯದ ಗತಿಯನ್ನೇ ಬದಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದರೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಸತತ ಆರನೇ ಗೆಲುವು ಸಾಧಿಸಿದೆ.
ಜಿಂಬಾಬ್ವೆ ನೀಡಿದ 288 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲಿ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ಆಸರೆಯಾಗಿದ್ದು ಸುರೇಶ್ ರೈನಾ ಮತ್ತು ಮಹೇಂದ್ರ ಸಿಂಗ್ ಧೋನಿ ಈ ಇಬ್ಬರ ಜತೆಯಾಟ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿತ್ತು. ರೈನಾ 104 ಎಸೆತಗಳಲ್ಲಿ 110 ರನ್ ಗಳಿಸಿದರೆ ಧೋನಿ 76 ಎಸೆತಗಳಲ್ಲಿ 85 ರನ್ ಗಳಿಸಿದರು.
ಆರಂಭಿಕರಾದ ಶಿಖರ್ ಧವನ್ ಕೇವಲ 4 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 16 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಅಜಿಂಕ್ಯಾ ರಹಾನೆ 19 ರನ್ ಗಳಿಸಿದ್ದಾಗ ಸಿಂಗಲ್ ರನ್ ಕದಿಯಲು ಹೋಗಿ ರನ್ ಔಟಾದರು. ಬಳಿಕ ವಿರಾಟ್ ಕೊಹ್ಲಿ 38 ರನ್ ಗಳಿಸಿ ಔಟಾದರು.
ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದಾಗಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾಗಿ ಬಂದ ಚಮ್ಮು ಚಿಬಾಬಾ 7 ಗಳಿಸಿದರೆ, ಹಮಿಲ್ಟನ್ 2 ರನ್ ಗಳಿಸಿ ಔಟಾದರು. ನಂತರ ಬಂದ ಸೋಲೊಮನ್ ಮೀರೆ ಸಹ 9 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಔಟಾದರು.
ಈ ವೇಳೆ ಜತೆಯಾದ ಸಿನ್ ವಿಲಿಯಮ್ಸ್ ಹಾಗೂ ಟೇಲರ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಸುಸ್ಥಿತಿಯತ್ತ ಮುನ್ನಡಿಸಿದರು. ಸಿನ್ ವಿಲಿಯಮ್ಸ್ 50 ರನ್ ಗಳಿಸಿದರೆ ಸ್ಫೋಟಕ ಆಟವಾಡಿದ ಟೇಲರ್ ಶತಕ ಸಿಡಿಸಿದರು. 110 ಎಸೆತಗಳನ್ನು ಎದುರಿಸಿದ ಟೇಲರ್ ಭರ್ಜರಿ 138 ರನ್ ಗಳಿಸಿದರು. ಇರ್ವಿನ್ 27, ರಾಝ 28, ಚಕಾಬ್ವೆ 10, ಪನ್ಯಾಂಗರ 6, ಚಾಟರ ಶೂನ್ಯ ಗಳಿಸಿದರೆ ಮುಪರೀವ ಅಜೇಯ 1 ರನ್ ಗಳಿಸಿದ್ದಾರೆ.
ಭಾರತ ಪರ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮಾ ತಲಾ 3 ವಿಕೆಟ್ ಗಳಿಸಿದರೆ, ಆರ್. ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.