
ಮುಂಬೈ: ಹಾಲಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಸಲಹೆಗಾರ ಹುದ್ದೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ರಾಜೀನಾಮೆ ಸೋಮವಾರ ನೀಡಿದ್ದಾರೆ.
2013ರ ಜನವರಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ನಲ್ಲಿನ ಇತರೆ ಜವಾಬ್ದಾರಿಗಳನ್ನು ಮುಂದುವರೆಸಲು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
"ಕಳೆದ 3 ವರ್ಷದಿಂದ ಮುಂಬೈ ಇಂಡಿಯನ್ಸ್ ತಂಡದೊಂದಿಗಿದ್ದೇನೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಅಭೂತಪೂರ್ವ ಪ್ರದರ್ಶನ ನೀಡಿದೆ. ಪ್ರಸ್ತುತ ನಾನು ಕ್ರಿಕೆಟ್ನ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನಹರಿಸಲು ನಿರ್ಧರಿಸಿದ್ದೇನೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುತ್ತಿದ್ದೇನೆ. ನನಗೆ ಬೆಂಬಲ ನೀಡಿದ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ಹಾಗೂ ಆಟಗಾರರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬಿಸಿಸಿಐನ ವಾರ್ಷಿಕ ಮಹಾಸಭೆ ಮುಂಬೈನಲ್ಲಿ ನಡೆದಿತ್ತು. ಈ ವೇಳೆ ಹಿತಾಸಕ್ತಿ ಸಂಘರ್ಷದ ಕಾರಣ ನೀಡಿ ಬಿಸಿಸಐನಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಅಲಂಕರಿಸಿದ್ದ ಮಾಜಿ ಆಟಗಾರರನ್ನು ಅವರ ಹೆಚ್ಚುವರಿ ಹುದ್ದೆಗಳಿಂದ ತೆಗೆದುಹಾಕಲಾಗಿತ್ತು. ಟೀಂ ಇಂಡಿಯಾದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರನ್ನು ಕೂಡ ಇದೇ ಕಾರಣ ನೀಡಿ ಐಪಿಎಲ್ ಆಡಳಿತ ಮಂಡಳಿಯಿಂದ ತೆಗೆದುಹಾಕಲಾಗಿತ್ತು. ಅಂತೆಯೇ ಆಯ್ಕೆದಾರರ ಮಂಡಳಿಯಿಂದ ರೋಜರ್ ಬಿನ್ನಿ ಅವರನ್ನು, ಬಿಬಿಸಿಐ ತಾಂತ್ರಿಕ ಸಮಿತಿಯಿಂದ ಕುಂಬ್ಳೆ ಅವರನ್ನು ತೆಗೆದು ಹಾಕಲಾಗಿತ್ತು. ಕುಂಬ್ಳೆ ಅವರ ಜಾಗಕ್ಕೆ ಪ್ರಸ್ತುತ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಕೂಡ ಆಗಿರುವ ಸೌರವ್ ಗಂಗೂಲಿ ಅವರು ನೇಮಕವಾಗಿದ್ದಾರೆ.
ಐಪಿಎಲ್ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡ ಒಂದು. ಇಂತಹ ತಂಡವನ್ನು ಕಟ್ಟುವಲ್ಲಿ ಅನಿಲ್ ಕುಂಬ್ಳೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ 2013ರಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ನಲ್ಲಿ ಚಾಂಪಿಯನ್ ಆಗಿತ್ತು. ನಂತರ 2015ರಲ್ಲೂ ಸಹ ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ ಪ್ರಶಸ್ತಿ ಎತ್ತಿ ಹಿಡಿದಿತ್ತು ಎಂದು ಮುಂಬೈ ಇಂಡಿಯನ್ಸ್ ತಂಡ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement