ಕರ್ನಾಟಕದ ಯುವ ಹಾಗೂ ಸ್ಫೋಟಕ ಆಟಗಾರ ಮಯಾಂಕ್ ಅಗರ್ವಾಲ್ (87 ರನ್, 49 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಮನನ್ ವೊಹ್ರಾ (56 ರನ್, 42 ಎಸೆತ, 8 ಬೌಂಡರಿ, 1 ಸಿಕ್ಸರ್) ಅವರುಗಳ ಅತ್ಯಾಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಏಕೈಕ ಚುಟುಕು ಅಭ್ಯಾಸ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಂಗಳವಾರ ಮಾಡೆಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡ 8 ವಿಕೆಟ್ಗಳ ಸುಲಭ ಜಯ ಪಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಎ ತಂಡ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಅಂದರೆ 19.4 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 193 ರನ್ ದಾಖಲಿಸುವ ಮೂಲಕ ಜಯಭೇರಿ ಬಾರಿಸಿತು. ದಕ್ಷಿಣ ಆಫ್ರಿಕಾ ತಂಡ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡಕ್ಕೆ ಆರಂಭಿಕರಾದ ಮನನ್ ವೊಹ್ರಾ ಹಾಗೂ ಮಾಯಾಂಕ್ ಅಗರ್ವಾಲ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು.
ಆರಂಭಿಕ 12.4 ಓವರ್ಗಳಲ್ಲಿ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದ ಈ ಜೋಡಿ, 119 ರನ್ಗಳ ಅಮೋಘ ಜತೆಯಾಟ ನೀಡಿ ತಂಡವನ್ನು ಜಯದ ಸನಿಹಕ್ಕೆ ತಂದು ನಿಲ್ಲಿಸಿದರು. ದಕ್ಷಿಣ ಆಫ್ರಿಕಾ ಪರ, ನಾಯಕ ಡುಪ್ಲೆಸಿಸ್ (42 ರನ್, 27 ಎಸೆತ, 7 ಬೌಂಡರಿ) ಹಾಗೂ ಜೆ.ಪಿ.ಡುಮಿನಿ (ಅಜೇಯ 68 ರನ್, 32 ಎಸೆತ, 2 ಬೌಂಡರಿ, 6 ಸಿಕ್ಸರ್) ಇನ್ನಿಂಗ್ಸ್ ನಲ್ಲಿ ರನ್ ಗತಿಯನ್ನು ಹೆಚ್ಚಿಸಿದರು. ಹಾಗಾಗಿ ಪ್ರವಾಸಿಗರು ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.