

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟ್ಸ್‍ಮನ್ ವಿರೇಂದ್ರ ಸೆಹ್ವಾಗ್, ಆಟಗಾರರ ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ್ದಾರೆ.
ಅಲ್ಲದೆ, ತಂಡದ ಆಯ್ಕೆ ಪ್ರಕ್ರಿಯೆ ವೇಳೆ ಪ್ರಭಾವಿ ವ್ಯಕ್ತಿಗಳ ಮಾತಿಗೆ ಮಣೆಹಾಕಿ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿರುವುದು ಇತ್ತೀಚೆಗಷ್ಟೇ ಬಿಸಿಸಿಐ ಸುಧಾರಣೆಗೆ ನ್ಯಾ. ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಸಮಿತಿ ಶಿಫಾರಸಿಗೆ ಮೊದಲ ಬಾರಿಗೆ ಕ್ರಿಕೆಟಿಗನೊಬ್ಬನಿಂದ ಬೆಂಬಲ ಸಿಕ್ಕಂತಾಗಿದೆ. ಆಟಗಾರರ ಆಯ್ಕೆ ವಿಚಾರದಲ್ಲಿನ ತಾರತಮ್ಯ ಭಾವ ಕೇವಲ ದೆಹಲಿಯಲ್ಲಿ ಮಾತ್ರವಲ್ಲ ಇತರ ಕಡೆಯೂ ಇದೆ ಎಂದು ಕಳೆದ ರಣಜಿ ಆವೃತ್ತಿಯಲ್ಲಿ ದೆಹಲಿ ತಂಡದಿಂದ ಹರ್ಯಾಣ ತಂಡಕ್ಕೆ ವಲಸೆ ಹೋಗಿದ್ದ ಸೆಹ್ವಾಗ್ 'ಕ್ರಿಕ್‍ಇನ್ಫೋ'ಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
16 ಮತ್ತು 19 ವರ್ಷದೊಳಗಿನ ಮಟ್ಟದಲ್ಲಿ ಹೆಚ್ಚಿನ ಸಮಸ್ಯೆ ಇದೆ. ಈ ಹಂತದಲ್ಲಿ ವಯೋಮಿತಿ ಮೀರಿರುವ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಸಮಸ್ಯೆಗಳನ್ನು ಗುರುತಿಸಿ
ಬದಲಾವಣೆ ತರಬೇಕಿದೆ. ಆಯ್ಕೆ ಸಮಿತಿಯಲ್ಲಿ ಉತ್ತಮ ಹಾಗೂ ಪ್ರಮುಖ ಆಟಗಾರರಿದ್ದರೆ, ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದಿದ್ದಾರೆ. ಪ್ರಭಾವಿ ವ್ಯಕ್ತಿಗಳು ತಮಗೆ ಬೇಕಾದ ಆಟಗಾರರ ಹೆಸರನ್ನು ಆಯ್ಕೆ ಸಮಿತಿಗೆ ಸೂಚಿಸುತ್ತಾರೆ. ನಂತರ ಅವರ ಆಣತಿಯಂತೆ ನಡೆದುಕೊಳ್ಳಲಾಗುತ್ತದೆ ಎಂದೂ ಎಂದು ಸೆಹ್ವಾಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯ ಸಂಸ್ಥೆಯಲ್ಲಿ ಸ್ಥಾನ ಪಡೆಯುವ ಬಗ್ಗೆ, 'ನಾನು ಈ ರೀತಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ. ಹರ್ಯಾಣದಲ್ಲಿ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ, ನಾನು ಈ ಸ್ಥಾನ ಅಲಂಕರಿಸಿದರೆ, ಸ್ವಹಿತಾಸಕ್ತಿ ಸಂಘರ್ಷಕ್ಕೆ ದಾರಿಯಾಗುತ್ತದೆ. ಆದರೆ, ಇತರೆ ಸಂಸ್ಥೆಗಳು ಆಯ್ಕೆ ಸಮಿತಿಗೆ ನನ್ನನ್ನು ಪರಿಗಣಿಸಿದರೆ ಆ ಜವಾಬ್ದಾರಿ ವಹಿಸಿಕೊಳ್ಳಲು ಇಚ್ಛಿಸುತ್ತೇನೆ. ಇಷ್ಟಾದರೂ, ಈ ಸ್ಥಾನದಲ್ಲಿ ಕೂರಲು ನಮ್ಮಲ್ಲಿ ಸಾಕಷ್ಟು ಅರ್ಹ ಆಟಗಾರರಿದ್ದು, ಅವರನ್ನು ಗುರುತಿಸಿ ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು'' ಎಂದಿದ್ದಾರೆ.
ಒಬ್ಬನೇ ಸಚಿನ್!
'ಚಿಕ್ಕ ವಯಸ್ಸಿನಲ್ಲಿದ್ದಾಗ ಹೆಚ್ಚು 10 ಮತ್ತು 12 ಓವರ್‍ಗಳ ಪಂದ್ಯವನ್ನಾಡುತ್ತಿದ್ದೆ. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದುದರಿಂದ ಹೆಚ್ಚೆಂದರೆ 10 ಎಸೆತಗಳನ್ನಷ್ಟೇ ಎದುರಿಸುತ್ತಿದ್ದೆ. ಹಾಗಾಗಿ ಆ ಎಸೆತಗಳಲ್ಲಿ ಹೆಚ್ಚಿನ ರನ್ ಗಳಿಸಲು ಪ್ರಯತ್ನಿಸುತ್ತಿದ್ದೆ. ಪ್ರಥಮ ದರ್ಜೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಅದೇ ತಂತ್ರಗಾರಿಕೆ ಪ್ರಯೋಗಿಸಿದೆ. ಆರಂಭದಲ್ಲಿ ನಾನು ಸಚಿನ್ ಅವರಂತೆ ಬ್ಯಾಟಿಂಗ್ ಮಾಡಬೇಕೆಂದು ಅವರನ್ನು ಅನುಕರಿಸಲು ಹೋದೆ. ಆದರೆ ಕೆಲವೇ ಸಮಯದಲ್ಲಿ ಸಚಿನ್‍ಗೆ ಸಚಿನ್ ಅಷ್ಟೇ ಸಾಟಿ ಎಂಬುದನ್ನು ಮನಗಂಡೆ. ಅಲ್ಲಿಂದಾಚೆಗೆ ನಾನು ನನ್ನ ಬ್ಯಾಟಿಂಗ್ ಶೈಲಿ ಬದಲಿಸಿಕೊಂಡೆ'' ಎಂದಿರುವ ಸೆಹ್ವಾಗ್, 2009ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮುಂಬೈ ಟೆಸ್ಟ್ ನಲ್ಲಿ ಗಳಿಸಿದ 293 ರನ್‍ಗಳು ತನ್ನ ಟೆಸ್ಟ್ ಬದುಕಿನ ಶ್ರೇಷ್ಠ ಇನ್ನಿಂಗ್ಸ್ ಎಂದು ತಿಳಿಸಿದ್ದಾರೆ.