

ವಡೋದರಾ: ಭಾರತದ ಯುವ ಆಲ್ರೌಂಡ್ ಪ್ರತಿಭೆ ಹಾರ್ದಿಕ್ ಪಾಂಡ್ಯಾ(ಅಜೇಯ 81) ಸೈಯದ್ ಮುಷ್ತಾಕ್ ಅಲಿ ಟಿ20 ಸರಣಿಯ ದೆಹಲಿ ವಿರುದ್ಧ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ ಭರ್ಜರಿ 5 ಸಿಕ್ಸರ್ ಹಾಗೂ 1 ಬೌಂಡರಿ ಸೇರಿದಂತೆ ಒಟ್ಟು 39 ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಇನಿಂಗ್ಸ್ ನ 19ನೇ ಓವರ್‍ನಲ್ಲಿ ಮಧ್ಯಮ ವೇಗಿ ಆಕಾಶ್ ಸುದನ್ ಬೌಲಿಂಗ್ ವೇಳೆ ಹಾರ್ದಿಕ್, ಈ ಸಾಧನೆ ಮಾಡಿದ್ದಾರೆ. 4 ರನ್ ಬೈ ಮತ್ತು 1 ನೋಬಾಲ್ ಒಳಗೊಂಡಿದ್ದರಿಂದ 39 ರನ್ ದಾಖಲಾಯಿತು. ಆ ಮೂಲಕ ಬರೋಡಾ ತಂಡ 20 ಓವರ್ ಗಳಲ್ಲಿ 153ಕ್ಕೆ 6 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ದೆಹಲಿ ತಂಡ 5 ವಿಕೆಟ್ ಗೆ 156 ಸಂಪಾದಿಸಿ, 5 ವಿಕೆಟ್ ಜಯ ದಾಖಲಿಸಿತು. ಆ ಮೂಲಕ ಪಾಂಡ್ಯಾ ಅವರ ರೋಚಕ ಇನಿಂಗ್ಸ್ ವ್ಯರ್ಥವಾಯಿತು.