ಟೆನ್ನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ತನ್ನ ಅಕ್ಕ ವೀನಸ್ ಅವರ ವಿರುದ್ಧ ಗೆಲ್ಲುವ ಮೂಲಕ ದಾಖಲೆಯ 23ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ಹಳೆ ಸುದ್ದಿ. ಈಗ ಹೊಸ ವಿಚಾರ ಏನೆಂದರೆ ಈ ವೇಳೆ ಸೆರೆನಾ ಎರಡು ತಿಂಗಳ ಗರ್ಭಿಣಿಯಾಗಿದ್ದರು.
ಸೆರೆನಾ ವಿಲಿಯಮ್ಸ್ ಅವರು ತಾವು ತಾಯಿಯಾಗುತ್ತಿರುವುದನ್ನು ಖಚಿತಪಡಿಸಿದ್ದು, ಬುಧವಾರ ಸ್ನ್ಯಾಪ್‌ಚಾಟ್‌ನಲ್ಲಿ ತನ್ನ ಫೋಟೋ ಪ್ರಕಟಿಸಿ, ಅದರ ಮೇಲೆ ‘20 ವಾರಗಳು’ ಎನ್ನುವ ಅಡಿ ಬರಹದೊಂದಿಗೆ ಗರ್ಭಿಣಿಯಾಗಿರುವ ವಿಷಯ ಬಹಿರಂಗಗೊಳಿಸಿದ್ದಾರೆ.
35 ವರ್ಷದ ಸೆರೆನಾ ಮುಂದಿನ ವಾರದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಲಿದ್ದು, ಈ ವರ್ಷ ಯಾವುದೇ ಪಂದ್ಯಗಳಲ್ಲಿ ಆಡುತ್ತಿಲ್ಲ. 2018ರಲ್ಲಿ ಪುನಃ ಟೆನ್ನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೆರೆನಾ ಅವರ ವಕ್ತಾರರೊಬ್ಬರು ತಿಳಿಸಿರುವುದಾಗಿ ರಾಯ್‌ಟರ್ಸ್ ವರದಿ ಮಾಡಿದೆ.
ಸದ್ಯ 20 ವಾರಗಳ ಗರ್ಭಿಣಿ ಎಂದರೆ, ಇದೇ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡುವಾಗ 2 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.
ಅಂಥ ಸ್ಥಿತಿಯಲ್ಲಿಯೂ ಅತ್ಯುತ್ತಮ ಆಟವಾಡಿದ್ದರ ಕುರಿತು ಸೆರೆನಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.