ಫುಟ್‌ಬಾಲ್ ವಿಶ್ವಕಪ್ ಫೈನಲ್ ಗಲಾಟೆ: ಅರ್ಜೆಂಟೀನಾ ಆಟಗಾರರ ವರ್ತನೆಗೆ ಆಕ್ರೋಶ, ತನಿಖೆಗೆ ಮುಂದಾದ FIFA

ಫೈನಲ್ ಬಳಿಕ ನಡೆದ ಈ ಬೆಳವಣಿಗೆಗಳು ವಿಶ್ವ ಫುಟ್‌ಬಾಲ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಫಿಫಾ ತನಿಖೆಯ ಫಲಿತಾಂಶದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
Post World Cup 2026 Final Fight
ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಟಗಾರರ ಗಲಾಟೆ
Updated on

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತ ಬಳಿಕ ಅರ್ಜೆಂಟೀನಾ ಆಟಗಾರರು ಮೈದಾನದಲ್ಲಿ ನಡೆಸಿದ ಗಲಾಟೆ ಮತ್ತು ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಫಿಫಾ (FIFA) ತನಿಖೆ ಆರಂಭಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಹೌದು.. ನಿನ್ನೆ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 1-0 ಅಂತರದಲ್ಲಿ ಸ್ಪೇನ್ ತಂಡ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಮಣಿಸಿ 2ನೇ ಬಾರಿಗೆ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. 106ನೇ ನಿಮಿಷದಲ್ಲಿ ಫೆರ್ರಾನ್ ಟೊರೆಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ 1-0 ಅಂತರದಲ್ಲಿ ಅರ್ಜೆಂಟೀನಾವನ್ನು ಮಣಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು.

ಪಂದ್ಯದುದ್ದಕ್ಕೂ ಸ್ಪೇನ್ ಚೆಂಡಿನ ಮೇಲಿನ ಹಿಡಿತ ಮತ್ತು ಪಂದ್ಯದ ವೇಗವನ್ನು ಸಂಪೂರ್ಣ ನಿಯಂತ್ರಿಸಿತ್ತು. ಹಲವು ಅವಕಾಶಗಳನ್ನು ಕೈಚೆಲ್ಲಿದ ಬಳಿಕ ಹೆಚ್ಚುವರಿ ವೇಳೆಯಲ್ಲಿ ಟೊರೆಸ್ ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಎರಡನೇ ವಿಶ್ವಕಪ್ ಕಿರೀಟ ತಂದುಕೊಟ್ಟರು.

Post World Cup 2026 Final Fight
FIFA World Cup 2026: ಫೈನಲ್ ಪಂದ್ಯ ಮುಗಿಯುತ್ತಿದ್ದಂತೆಯೇ ಕೈಕೈ ಮಿಲಾಯಿಸಿದ ಆಟಗಾರರು; 2 ರೆಡ್ ಕಾರ್ಡ್, ಮೂಕ ಪ್ರೇಕ್ಷಕನಾದ Messi

ಅಂತಿಮ ಸೀಟಿ ಬಳಿಕ ಮೈದಾನದಲ್ಲಿ ಗಲಾಟೆ

ಆದರೆ ಪಂದ್ಯ ಮುಗಿದ ಕೂಡಲೇ ಸಂಭ್ರಮದ ಬದಲು ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಎರಡೂ ತಂಡಗಳ ಆಟಗಾರರ ನಡುವೆ ತಳ್ಳಾಟ, ನೂಕಾಟ ಮತ್ತು ವಾಗ್ವಾದ ನಡೆದಿದ್ದು, ಅರ್ಜೆಂಟೀನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೆಡೆಸ್, ಸ್ಪೇನ್ ಆಟಗಾರ ಎರಿಕ್ ಗಾರ್ಸಿಯಾ ಅವರ ಕುತ್ತಿಗೆಯನ್ನು ಹಿಡಿದ ದೃಶ್ಯಗಳು ವೈರಲ್ ಆಗಿವೆ.

ಇದಲ್ಲದೆ, ಅರ್ಜೆಂಟೀನಾ ರಕ್ಷಣಾ ಆಟಗಾರ ನಹುಯೆಲ್ ಮೊಲಿನಾ, ಸ್ಪೇನ್ ಆಟಗಾರನ ಹೊಟ್ಟೆಗೆ ಹೊಡೆಯಲು ಯತ್ನಿಸಿದರೆಂದು ಆರೋಪಿಸಲಾಗಿದೆ.

ಪರೆಡೆಸ್ ಕೇವಲ ಎರಿಕ್ ಗಾರ್ಸಿಯಾ ಅವರೊಂದಿಗಷ್ಟೇ ಅಲ್ಲದೆ, ಸ್ಪೇನ್‌ನ ಯುವ ಆಟಗಾರ ಗಾವಿ ಅವರನ್ನು ನೆಲಕ್ಕುರುಳಿಸಿ, ಮುಖಕ್ಕೆ ಹೊಡೆದು, ಅವರತ್ತ ಬೂಟನ್ನೂ ಒದೆಯಲು ಯತ್ನಿಸಿದಂತೆ ವಿಡಿಯೊಗಳಲ್ಲಿ ಕಂಡುಬಂದಿದೆ.

ಇದೇ ವೇಳೆ, ಮೊಲಿನಾ ಸ್ಪೇನ್ ನಾಯಕ ರೊಡ್ರಿ ಅವರತ್ತ ಮುಷ್ಟಿ ಬಿಗಿಮಾಡಿ ಬೀಸಲು ಯತ್ನಿಸಿದ್ದು, ಇದರಿಂದ ರೊಡ್ರಿ ಆಕ್ರೋಶ ವ್ಯಕ್ತಪಡಿಸಿ ಅರ್ಜೆಂಟೀನಾ ಆಟಗಾರನೊಂದಿಗೆ ವಾಗ್ವಾದ ನಡೆಸಿದರು ಎನ್ನಲಾಗಿದೆ.

'ಇಂತಹ ವರ್ತನೆಗೆ ಫುಟ್‌ಬಾಲ್‌ನಲ್ಲಿ ಸ್ಥಾನವಿಲ್ಲ'

ಇಂಗ್ಲೆಂಡ್‌ನ ಮಾಜಿ ನಾಯಕ ಅಲನ್ ಶಿಯರರ್, ಬಿಬಿಸಿಯೊಂದಿಗೆ ಮಾತನಾಡುತ್ತಾ ಅರ್ಜೆಂಟೀನಾ ಆಟಗಾರರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.

"ಪರೆಡೆಸ್ ಎದುರಾಳಿಯ ಮುಖದತ್ತ ಎರಡು-ಮೂರು ಬಾರಿ ಮುಷ್ಟಿ ಬೀಸಿದರು. ಇಂತಹ ವರ್ತನೆಗೆ ಫುಟ್‌ಬಾಲ್‌ನಲ್ಲಿ ಯಾವುದೇ ಸ್ಥಾನವಿಲ್ಲ. ಸೋಲು ಎಷ್ಟು ನೋವುಂಟು ಮಾಡುತ್ತದೆ ಎಂಬುದು ನಮಗೆ ಗೊತ್ತು. ಆದರೆ ಸೋಲನ್ನೂ ಒಪ್ಪಿಕೊಳ್ಳುವ ಒಂದು ರೀತಿಯಿದೆ. ಅರ್ಜೆಂಟೀನಾದಿಂದ ಇಂತಹ ಘಟನೆಗಳನ್ನು ನಾವು ಹಲವು ಬಾರಿ ನೋಡಿದ್ದೇವೆ. ಅಂತಿಮ ಸೀಟಿ ಬಳಿಕ ಅವರ ಪ್ರತಿಕ್ರಿಯೆ ಅತ್ಯಂತ ಬೇಸರದ ಸಂಗತಿ" ಎಂದು ಶಿಯರರ್ ಹೇಳಿದರು.

ಟ್ರೋಫಿ ಪ್ರದಾನದ ವೇಳೆ ಬೆನ್ನು ತಿರುಗಿಸಿದ ಆರೋಪ

ಇದೊಂದೇ ಅಲ್ಲದೆ, ಸ್ಪೇನ್ ಆಟಗಾರರು ವಿಶ್ವಕಪ್ ಟ್ರೋಫಿ ಸ್ವೀಕರಿಸುತ್ತಿದ್ದ ವೇಳೆ ಅರ್ಜೆಂಟೀನಾ ತಂಡ ಟ್ರೋಫಿ ಪ್ರದಾನ ಸಮಾರಂಭದತ್ತ ಬೆನ್ನು ತಿರುಗಿಸಿ ನಿಂತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಟಾಕ್‌ಸ್ಪೋರ್ಟ್ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಟ್ರೋಫಿ ಪ್ರದಾನ ಸಮಾರಂಭ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಇಂಗ್ಲೆಂಡ್‌ನ ಮಾಜಿ ಆಟಗಾರ ಸ್ಟುವರ್ಟ್ ಪಿಯರ್ಸ್ ಈ ಕುರಿತು ಪ್ರತಿಕ್ರಿಯಿಸಿ, "ಸ್ಪೇನ್ ತಂಡ ಟ್ರೋಫಿ ಎತ್ತಲು ಸಿದ್ಧವಾಗಿದ್ದಾಗ, ಅರ್ಜೆಂಟೀನಾ ತಂಡದ ಎಲ್ಲಾ ಆಟಗಾರರು ಟ್ರೋಫಿಯತ್ತ ಬೆನ್ನು ತಿರುಗಿಸಿ ನಿಂತಿದ್ದರು" ಎಂದು ಹೇಳಿದ್ದಾರೆ.

Post World Cup 2026 Final Fight
FIFA World Cup 2026 Final: ಸೋಲಿನಿಂದ ಕಂಗೆಟ್ಟು, ಗಳಗಳನೇ ಅತ್ತ ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ! Video

ಫಿಫಾ ತನಿಖೆ

ಸ್ಕೈ ನ್ಯೂಸ್ ವರದಿಯ ಪ್ರಕಾರ, ಫೈನಲ್ ಬಳಿಕ ಅರ್ಜೆಂಟೀನಾ ಆಟಗಾರರ ವರ್ತನೆ ಮತ್ತು ಶಿಸ್ತು ಉಲ್ಲಂಘನೆ ಕುರಿತು ಫಿಫಾ ತನಿಖೆ ನಡೆಸಲು ಸಜ್ಜಾಗಿದೆ. ಹೀಗಾಗಿ ಫೈನಲ್ ಬಳಿಕ ನಡೆದ ಈ ಬೆಳವಣಿಗೆಗಳು ವಿಶ್ವ ಫುಟ್‌ಬಾಲ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಫಿಫಾ ತನಿಖೆಯ ಫಲಿತಾಂಶದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com