ಯುವಕನೊಬ್ಬ ಕಷ್ಟಪಟ್ಟು ಓದಿ- ಜಿಲ್ಲಾಧಿಕಾರಿಯಾದ. ಹಾಗೆಯೇ 50 ಲಕ್ಷ ವರದಕ್ಷಿಣೆ ಪಡೆದು ಮದುವೆಯೂ ಆದ.
ದಿನಕ್ಕೆ 200 ರುಪಾಯಿಗಿಂತ ಜಾಸ್ತಿ ಕುಡಿಯುವ ಕುಡುಕನು ಒಮ್ಮೆಯೂ 20 ರುಪಾಯಿಯ ಹಾಲನ್ನು ಮನೆಗೆ ಒಯ್ಯಲಿಲ್ಲ.
ಗೌಡನ ಸಾಲ ತಿರಿಸದೇ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆತನ 10 ವರುಷದ ಮಗ ಸಾಲ ತೀರಿಸಲು ಶಾಲೆ ಬಿಟ್ಟು ಜೀತಕ್ಕೆ ಸೇರಿದ.
ಅಮಾವಾಸ್ಯೆಯ ಕತ್ತಲಲ್ಲಿ ಕಣ್ಣುಕಾಣದ ಸ್ನೇಹಿತನೊಂದಿಗೆ ವಾಕಿಂಗ್ ಹೋದವನೊಬ್ಬ ಕಲ್ಲಿಗೆ ಎಡವಿ ಬಿದ್ದು ಕಾಲನ್ನು ಮುರಿದುಕೊಂಡ.
ಚುನಾವಣೆಯಲ್ಲಿ ಅವರಿವರ ಕಾಲು ಹಿಡಿದು ಸೀಟು ಪಡೆದು ಮನೆ ಮನೆಗೆ ಹೋಗಿ ಮತ ಗಿಟ್ಟಿಸಿಕೊಂಡು ಶಾಸಕನಾದನು. ಆತನ ಕಛೇರಿಗೆ ತಿರುಗಿದ ಜನರ ಚಪ್ಪಲಿಗಳು ಸವೆದು ಹೋಗಿವೆ.
ಜೀವನದ ಬಗ್ಗೆ ಬೇಸರಗೊಂಡು ಎಲ್ಲವನ್ನು ಬಿಟ್ಟು ಸನ್ಯಾಸಿಯಾದ. ಪರಿಚಯದವನೊಬ್ಬ ಸಿಕ್ಕಾಗ ತನ್ನ ಹೆಂಡತಿ- ಮಕ್ಕಳ ಬಗೆಗೆ ವಿಚಾರಿಸಿದ.
ಶಿವರಾತ್ರಿಯೆಂದು ಎಲ್ಲರೂ ಶಿವನಿಗಾಗಿ ಉಪವಾಸವಿದ್ದರೆ, ಆ ಶಿವಾಲಯದ ಎದುರಿನ ಕೆಲವು ಜನ ತಿನ್ನಲು ಏನೂ ಇಲ್ಲದೇ ಉಪವಾಸವಿದ್ದರು.
ಸತ್ತ ಮನೆಯಲ್ಲಿ ಎಲ್ಲರೂ ದುಃಖದಿಂದ ಅಳುತ್ತಿದ್ದರು. ಸತ್ತವಳ ಮಗು ಮಾತ್ರ ಹಸಿವೆಯಿಂದ ಅಳುತ್ತಿತ್ತು.
- ರಾಜಶೇಖರ್ ಎಸ್. ಗುಬ್ಬಿ ವಿಜಯಪುರ.