ಸೂರ್ಯನಂತೆ ಬರುವೆಯಾ ಗೆಳೆಯಾ ?

Updated on: 

ಪ್ರೀತಿಯ ಒಲವೇ, ಮೊದಲ ಬಾರಿ ನಿನ್ನ ಹೆಸರು ಕೇಳಿದಾಗ ಆ ಹೆಸರೇ ನನ್ನ ಪುಟ್ಟ ಹೃದಯದಲ್ಲಿ ಅನುರಾಗದ ಅಲೆಗಳನ್ನು ಎಬ್ಬಿಸಿತ್ತು. ಸಮುದ್ರದ ಕಪ್ಪೆಚಿಪ್ಪು ಸ್ವಾತಿ ಮಳೆಗಾಗಿ ಕಾದು ಸ್ವಾತಿ ಮುತ್ತಾಗುತ್ತಂತೆ. ನನ್ನ ಹೃದಯದ ಕಪ್ಪೆಚಿಪ್ಪು ನಿನ್ನ ಪ್ರೀತಿಯ ಸ್ವಾತಿ ಮಳೆಗಾಗಿ ಕಾಯ್ತಿತ್ತು ಅನಿಸುತ್ತೆ. ನಿನ್ನ ನಾ ಮೊದಲನೇ ಬಾರಿ ನೋಡಿದಾಗ ಅನುಭವಿಸಿದ ಆಪ್ತತೆ, ಆತ್ಮೀಯತೆ ನನಗೆಂದೂ ಆಗಿಲ್ಲ. ನಿನ್ನ ಮುಗ್ಧತೆ, ಸರಳತೆ, ಸಜ್ಜನಿಕೆಗೆ ನಾನು ಮಾರುಹೋದೆ. ಅದಕ್ಕಾಗಿಯೇ ನಾ ಹುಡುಗಿ ಆದರೂ ನನ್ನ ಸ್ವಾಭಿಮಾನ, ಲಜ್ಜೆ, ಬಿಗುಮಾನಗಳನ್ನೆಲ್ಲಾ ಬದಿಗಿಟ್ಟು, ನಿನ್ನಲ್ಲಿ ಪ್ರೇಮ ನಿವೇದನೆ ಮಾಡಿದೆ. ನಿನ್ನ ಪುಟ್ಟ ಹೃದಯದ ಪ್ರೇಮ ದೇವತೆ ನಾನೇ ಎಂದಾಗ ನಿಜಕ್ಕೂ ಭೂಮಿ ಮೇಲೆ ಸ್ವರ್ಗ ನನಗಾಗೇ ಸೃಷ್ಟಿ ಆಗಿದೆ ಅನ್ನಿಸಿತು. ನಿನ್ನ ಪ್ರೀತಿಯಲ್ಲಿ ನಿಜಕ್ಕೂ ನಾನು ತನ್ಮಯಳಾಗಿ ಹೋದೆ.
ನಿನ್ನ ಪ್ರೀತಿಯ ಅಮೃತ ಧಾರೆಯನ್ನೇ ಹರಿಸಿದೆ. ಆದರೆ ಇಂದೇಕೋ ಹುಡುಗಾ ನನ್ನ ಪವಿತ್ರ ಪ್ರೀತಿಗೆ ಬೆನ್ನು ಮಾಡಿ ನಿಂತಿದ್ದೀಯಾ ? ನಿನ್ನಿಂದ ಉಂಟಾದ ಈ ವಿರಹವೂ ತುಂಬಾ ಸುಂದರವಾಗಿಯೇ ಇದೆ. ನಿನ್ನಲ್ಲೇ ನನ್ನ ಜೀವ, ಜೀವನ ಎರಡನ್ನೂ ಅಡವಿಟ್ಟಿದ್ದೀನಿ ಕಣೋ. ತಂಗಾಳಿ ಆಗಿ ಆದರೂ ಇಲ್ಲಾ ಬಿರುಗಾಳಿ ಆಗಿ ಆದರೂ ನೀ ನನ್ನ ಸೋಕಿ ಹೋಗೋ ಒಮ್ಮೆ. ನಿದಿರೆ ಬರದ ಈ ಕಣ್ಣುಗಳಿಗೆ ದಯವಿಟ್ಟು ಹಗಲುಗನಸಾಗಿ ಬಾರೋ ಹುಡುಗಾ. ನಮ್ಮ ಪ್ರೀತಿಯ ಮಧುರ ನೆನಪುಗಳನ್ನು ರಾಶಿ ಹಾಕಿ ಎಣಿಸ್ತಾ ಇದಿನಿ ಕಣೋ. ನೀನಿಲ್ಲದೇ ನನ್ನ ನಗುವನ್ನ ನಾ ಮರೆತು ಕನ್ನಡಿಯಲ್ಲಿ ಹುಡುಕ್ತಾ ಇದೀನಿ.
ನಿನ್ನ ಪ್ರೀತಿಯ ಮಾತುಗಳಿಗೆ, ಪ್ರೀತಿ ತುಂಬಿದ ನಿನ್ನ ಕಣ್ಣುಗಳನ್ನ ನೋಡೋಕೆ ನನ್ನ ಮನ ಕಾತರಿಸ್ತಾ ಇದೆ. ನಿನ್ನ ನಿರ್ಲಿಪ್ತ ಭಾವ ನನ್ನ ಕಣ್ಣಂಚಲ್ಲಿ ನೀರಾಗಿ ಕೂತಿದೆ. ನಿನ್ನ ಮೌನ ಭಾವದ ಮೆರವಣಿಗೆ ಸಾಕು ಕಣೋ. "ಪ್ರೀತಿಯ ನಾವಿಕ ನೀನಿಲ್ಲದೇ ನನ್ನ ಬದುಕಿನ ದೋಣಿ ಸಾಗುವದೆಂತೋ ?" ನನ್ನ ಪುಟ್ಟ ಹೃದಯ ನಿನ್ನ ಜೀವನ ಪ್ರವೇಶಕ್ಕಾಗಿ ತುದಿಗಾಲಲ್ಲಿ ನಿಂತು ಕಾಯ್ತಿದೆ. ನಿನ್ನೆಲ್ಲ ಗೊಂದಲ - ಗೋಜಲುಗಳನ್ನೆಲ್ಲಾ ಬದಿಗಿಟ್ಟು ನನಗಾಗಿ ಒಮ್ಮೆ ಬಾರೋ. "ವಿರಹದ ಮಂಜಿನ ಪರದೆಯನ್ನು ಸರಿಸುವ ಸೂರ್ಯನಂತೆ" ನೀ ಬರುವೆಯಾ ಗೆಳೆಯಾ ?
ಇಂತಿ ನಿನ್ನ ಉಸಿರು
-ಸುಜಾತಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com