ಅನುಮಾನಂ ಪೆದ್ದ ರೋಗಂ...

ಅನುಮಾನಂ ಪೆದ್ದ ರೋಗಂ...
Updated on: 

ರಾತ್ರಿ ಪಕ್ಕದಲ್ಲಿ ಮಲಗಿದ್ದ ಗಂಡ ಐಪ್ಯಾಡ್‌ನಲ್ಲಿ ಫೇಸ್ ಬುಕ್ ಓಪನ್ ಮಾಡಿ ಕೂತಿದ್ದ. ಪಕ್ಕದಲ್ಲಿ ಮಲಗಿದ್ದ ಹೆಂಡ್ತಿ ಸಣ್ಣಗೆ ತಿವಿದು ಹೇಳಿದ್ಲು. ಮುಗಿದಿಲ್ವಾ ನಿಮ್ದು. ಥೂ...
ಅವನು ಆ ಕಡೆ ತಲೆ ಕೆಡಿಸಿಕೊಳ್ಳದೇ ಮತ್ತೆ ಮುಂದುವರೆಸಿದ. ಸ್ಪೇಟಸ್, ಫೋಟೋ, ಲೈಕ್, ಕಮೆಂಟ್ ಹೀಗೇ... ಅಷ್ಟರಲ್ಲಿ ಒಂದು ಮೆಸೇಜ್ ಬಂತು. 'ಹಾಯ್ ಇನ್ ಸಮ್ ಪ್ರಿಂಟಿಂಗ್ ಮಿಸ್ಟಿಕ್ಸ್ ದಟ್‌' ಎಂಬುದು ಆ ಮೆಸೇಜ್‌ನ ಸಾರಾಂಶ. ಹೆಂಡತಿ ನೋಡಿದ್ರೆ ಅನುಮಾನ ಪಡ್ತಾಳೆ. ಮೊದಲೇ ಸ್ವಲ್ಪ ಅನುಮಾನದ ಪ್ರಾಣಿ ಅಂದುಕೊಂಡ ಗಂಡ, ಆ ಮೆಸೇಜನ್ನು ನೋಡಿದ ಮರುಕ್ಷಣವೇ ಡಿಲೀಟ್ ಮಾಡಿಬಿಟ್ಟ. ಸ್ವಲ್ಪ ಹೊತ್ತಾದ ಮೇಲೆ ಅದಕ್ಕೆ ರಿಪ್ಲೆ ಮಾಡ್ದ. 'ಡು ಯು ವಾಂಟ್ ಮಿ ಟು ಆರ್ ನಾಟ್?' ಆದರೆ ಫಾಸ್ಟ್ ಟೈಪಿಂಗ್ ಭರದಲ್ಲಿ ಅವನು ಒಂದು ಪದ ಬಿಟ್ಟುಬಿಟ್ಟಿದ್ದ. 'ಡು ಯು ವಾಂಟ್ ಮಿ ಆರ್ ನಾಟ್...' ಅಂತ ಟೈಪ್ ಮಾಡಿ ಕಳಿಸಿಬಿಟ್ಟ.
 ಬೆಳಿಗ್ಗೆ ಎದ್ದು ಅವನು ಸ್ನಾನಕ್ಕೆ ಹೊರಟ. ಇವಳು ಐಪ್ಯಾಡ್ ಚೆಕ್ ಮಾಡೋಕೆ ಶುರು ಮಾಡಿದ್ಲು. ರಾತ್ರಿ ಗಂಡ ಕಳಿಸಿದ್ದ ಮೆಸೇಜ್ ಡಿಲೀಟ್ ಆಗಿರ್ಲಿಲ್ಲ. ಡು ಯು ವಾಂಟ್ ಆರ್ ನಾಟ್... ಇವಳ ಮನಸ್ಸಿನಲ್ಲಿ ನೂರು ಡೌಟುಗಳು. ಇದರ ಅರಿವಿಲ್ಲದ ಗಂಡ ಬಾತ್ ರೂಂ ಸಿಂಗರ್... 'ಪ್ರೀತಿ ನೀನಿಲ್ಲದೇ ನಾನು ಹೇಗಿರಲಿ...' ಇವಳ ಮನಸ್ಸಿನಲ್ಲಿ ಅದೇ ಹುಳ. ಈ ಹಾಡನ್ನು ಅವಳನ್ನು ನೆನೆದೇ ಹಾಡ್ತಿರಬೇಕು ಅಂತ. ಅವನು ಬಾತ್ ರೂಮಿನಿಂದ ಹೊರಬಂದಾಗ ಇವಳ ಉಗ್ರಪ್ರತಾಪ ಶುರುವಾಗಿತ್ತು. ರಾತ್ರಿ 1 ಗಂಟೆ ತನಕ ಫೇಸ್ ಬುಕ್ ನೋಡ್ತಿದ್ದಾಗ್ಲೇ ನಂಗೆ ಡೌಟ್ ಬಂತು. ಥೂ. ನೀನ್ ಇಂಥ ಕಚಡಾ ಅಂತ ನಂಗ್ ಗೊತ್ತಿತ್ತು. ನಿನ್ ಬುದ್ಧಿ ತೋರಿಸಿಬಿಟ್ಯಲ್ಲಾ... ಇನ್ನು ನಿನ್ ಜೊತೆ ಇರಲ್ಲ. ನಿನ್ನ ಸಹವಾಸವೇ ಬೇಡ...
ಈ ಕಡೆ ಗಂಡ ಅನ್ನೋ ಪ್ರಾಣಿಗೆ ಏನೂ ಅರ್ಥ ಆಗ್ತಿಲ್ಲ. ಏನಾಯ್ತು ನಿಂಗೆ ಬೆಳಗ್ಗೆ ಬೆಳಗ್ಗೇನೆ ಅಂತ ಅವನು ಓಪನ್ ಮಾಡಿಟ್ಟಿದ್ದ ಚಾಟ್ ಮೆಸೇಜ್ ನೋಡಿದ. ಡು ಯು ವಾಂಟ್ ಮಿ ಆರ್ ನಾಟ್... ಅದರರ್ಥ, ನಿಂಗೆ ನಾನು ಬೇಕೋ ಬೇಡ್ವೋ ಹೇಳು ಅಂತ. ತನ್ನಿಂದಾದ ಪ್ರಮಾದಕ್ಕೆ ಅವಳಿಗೆ ಏನ್ ನಡೀತು ಅಂತ ಬಿಡಿಸಿ ಹೇಳೋಕೆ ಪ್ರಯತ್ನ ಪಟ್ಟ. ಆದ್ರೆ ಅದನ್ನು ನಂಬೋಕೇ ಅವಳು ರೆಡಿ ಇಲ್ಲ. ಅವರು ನನಗಿಂತ ತುಂಬಾ ದೊಡ್ಡವರು. ಅವರು ಒಂದಷ್ಟು ಬ್ರೋಶರ್ ಹಂಚೋಕೆ ಕೊಟ್ಟಿದ್ರು. ಅದ್ರಲ್ಲಿ ಏನೋ ಮಿಸ್ಟೇಕ್ ಇದೆ ಅಂತ ಹೇಳಿದ್ರು. ಅದಕ್ಕೆ ಅದನ್ನು ಹಂಚಬೇಕೋ ಬೇಡ್ವೋ ಅಂತ ಕೇಳೋಕೆ ಡು ಯು ವಾಂಟ್ ಮಿ ಟು ಆರ್ ನಾಟ್ ಅಂತ ಕಳಿಸ್ದೆ. ಆದ್ರೆ ಆತುರದಲ್ಲಿ ಅದು ಡು ಯು ವಾಂಟ್ ಮಿ ಅಥವಾ ನಾಟ್ ಆಗಿದೆ ಅಂತ ಗೋಗರೆದ. ಆದ್ರೆ ಅವಳದು ಒಂದೇ ರಾಗ. ಜೊತೆಗೆ ಸಿಚ್ಯುಯೇಶನ್‌ಗೆ ತಕ್ಕಷ್ಟು ಕಣ್ಣೀರು. ಏನೂ ತಪ್ಪು ಮಾಡದ ಗಂಡ ಮಾತ್ರ ಅವಳನ್ನ ಸಮಾಧಾನ ಮಾಡೋದ್ರಲ್ಲಿ ಬಿಜಿ. ಗಂಡ ನೋಡೋ ತನಕ ನೋಡಿ, ಏನೂ ಮಾಡಲಾಗದೆ ಆಫೀಸಿಗೆ ಹೊರಟ.
 ಅವಳ ಮೆಸೇಜ್ ಬಾಣಗಳು ಶುರುವಾದ್ವು. 'ನಿಂಗೆ ಆಟ ಆಡೋಕೆ ನನ್ ಲೈಫೇ ಬೇಕಿತ್ತಾ...? ನನ್ ಶಾಪ ನಿನಗೆ ತಟ್ಟದೇ ಇರಲ್ಲ' ಅವನು ತಾಳ್ಮೆಯಿಂದಲೇ ರಿಪ್ಲೆ ಮಾಡ್ತಿದ್ದ. 'ಚಿನ್ನಾ ನಂಗೆ ನಿನ್ ಬಿಟ್ರೆ ಪ್ರೀತ್ಸೋಕೆ ಯಾರೂ ಇಲ್ಲ ಕಣೇ. ಪ್ಲೀಸ್ ನನ್ನ ನಂಬು' ಅವಳ ರಾಗ ಬದಲಾಗಲೇ ಇಲ್ಲ. 'ನಾನೂ ನಿನ್ ತರಾನೇ ಫ್ಲರ್ಟ್ ಮಾಡೋಕೆ ಶುರು ಮಾಡ್ತೀನಿ. ಸಿಕ್ಕ ಸಿಕ್ಕವನ ಜೊತೆ ತಿರುಗ್ತೀನಿ. ಆಗ ನಿಂಗೂ ಗೊತ್ತಾಗುತ್ತೆ' ಎಂದು ಉತ್ತರ ಕಳಿಸಿದಳು. ಅವಳಿಗೆ ನಡೆದಿದ್ದನ್ನು ವಿವರಿಸಲು ಮತ್ತೆ ಕಾಲ್ ಮಾಡಿದ. ಅವಳು ಕಟ್ ಮಾಡಿದ್ಲು. 4, 5 ಸಲ ಮಾಡಿದ್ರೂ ಕಾಲ್ ಕಟ್ ಮಾಡಿದ್ಲು.
ಇವನಿಗೆ ಮನಸ್ಸು ತಡೀಲಿಲ್ಲ. ಪ್ಲೀಸ್ ರಿಸೀವ್ ಮಾಡು ಅಂತ ಮೆಸೇಜ್ ಕಳಿಸ್ದ. ನೋ ರಿಪ್ಲೆ... ನಾನು ಸಿಕ್ಕ ಸಿಕ್ಕವನ ಜೊತೆ ತಿರುಗ್ತೀನಿ ಅಂತ ಹೆಂಡತಿ ಹೇಳಿದ ಮಾತನ್ನ ಅವನಿಗೆ ಅರಗಿಸಿಕೊಳ್ಳೋಕೇ ಆಗ್ಲಿಲ್ಲ... ಮತ್ತೆ ಮೊಬೈಲ್ ತೆಗೆದು ಬೈಕ್ ಓಡಿಸ್ಕೊಂಡೇ ಹೆಂಡತಿಗೆ ಡಯಲ್ ಮಾಡ್ದ. ಅವಳು ಮತ್ತೆ ಕಾಲ್ ಕಟ್ ಮಾಡಿದ್ಲು. ಅವನು ಹೆಲ್ಮೆಟ್ ಒಳಗಿನಿಂದ ಮೊಬೈಲ್ ತೆಗೆಯುವಾಗ ಮೊಬೈಲ್ ಅವನ ಕೈಯಿಂದ ಜಾರಿಬಿದ್ದು ಅದನ್ನ ಹಿಡಿಯೋಕೆ ಹೋದ ಅವನೂ ಬೈಕಿಂದ ಬಿದ್ದ. ಬಿದ್ದ ತಕ್ಷಣ ಅವನ ಮೇಲೆ ಸ್ಪೀಡ್‌ನಲ್ಲಿದ್ದ ಲಾರಿ ಹತ್ತಿಬಿಡ್ತು. ಅವನ ಪ್ರಾಣ ಪಕ್ಷಿ ಹಾರಿಹೋಯ್ತು. ಅಲ್ಲಿದ್ದವರಲ್ಲಿ ಯಾರೋ ಒಬ್ಬರು ಅಲ್ಲೆಲ್ಲೋ ಬಿದ್ದಿದ್ದ ಅವನ ಫೋನ್ ತಗೊಂಡು ಲಾಸ್ಟ್ ಡಯಲ್ ನಂಬರ್‌ಗೆ ಕಾಲ್ ಮಾಡಿದ್ರು.
ಕಾಲಿಂಗ್ ಸ್ವೀಟ್ ಹಾರ್ಟ್. ಅವಳು ಸಿಟ್ಟಲ್ಲೇ ಫೋನ್ ರಿಸೀವ್ ಮಾಡಿದ್ಲು. ಏನ್ರೀ ನಿಮ್ ಗೋಳು. ನಂಗೆ ನೀವ್ ಬೇಡ ಅಷ್ಟೆ. ಆ ಕಡೆಯಿಂದ ಬಂದ ಧ್ವನಿ ಗಂಡನದಲ್ಲ. 'ಮೇಡಂ. ತುಮಕೂರು ರೋಡ್ ಫ್ಲೈ ಓವರ್ ಮೇಲೆ ಆಕ್ಸಿಡೆಂಟ್ ಆಗಿದೆ. ಇವರು ಸ್ಪಾಟ್ ಡೆತ್....' ಆ ಕಡೆಯಿಂದ ರಿಪ್ಲೆ ಬರಲಿಲ್ಲ. ಅವಳು ಕುಸಿದು ಬಿಟ್ಳು... ಅವಳ ಅನುಮಾನ ಅವಳ ಗಂಡನನ್ನ ಕೊಂದುಬಿಟ್ಟಿತ್ತು.

- ಕೀರ್ತಿ ಶಂಕರಘಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com