ಕಣ್ಣಲ್ಲಿ ನೀರು ತುಂಬಿದೆ
ನೀ ಸಿಕ್ಕ ಖುಷಿಗೆ
ಎದೆಯನ್ನು ನೋವು ತೊರೆದಿದೆ
ನೀ ನಕ್ಕ ಪರಿಗೆ
ನಿನ್ನ ತುಂಟಾಟಕ್ಕಿಂತ
ಹಿತವಾದ ತಂಗಾಳಿ
ಹೊಂಗೆ ಮರದ ಮಡಿಲಲ್ಲೂ
ಸೋಕಲಿಲ್ಲ
ನಿನ್ನ
ಅಪ್ಪುಗೆಯ ಬಿಸಿ
ನನ್ನೊಡಲ ಕನಸಿಗೆ
ಕಾವು ಕೊಡುತ್ತಿದೆ
ಮಳೆಗೆ
ಮನಸು ಒಡ್ಡಿದ್ದೇನೆ
ನಿನ್ನ ನೆನಪುಗಳು
ಹಸಿ ಹಸಿಯಾಗಿರಲಿ ಎಂದು
ನಿನ್ನ ಒಲವಿನ ಏಣಿ ಏರಿ
ನಾ ನಲಿವಿನ ಲೋಕಕ್ಕೆ
ರಾಯಭಾರಿಯಾದೆ
ನೀ ಬಂದು
ನನ್ನೊಳಗೆ ಕುಳಿತ ಮೇಲೆ
ಕಣ್ಣೀರು ಸಿಹಿಯಾಗಿದೆ
ನೋವು ತಣ್ಣಗಿದೆ
ನೊಂದುಕೊಳ್ಳವ
ನೆಪಕ್ಕಾದರೂ
ನೆನಪಾಗುವ ನೀನು
ಅಮೂರ್ತ ಕನ್ನಡಿ ಮೇಲೆ
ಮೂಡಿದ
ಮೂರ್ತ ಭಾವಚಿತ್ರ
- ಎಚ್.ಕೆ.ಶರತ್