

ಪ್ರೀತಿಯ ಭೂಮಿ,
ಎಲೆಗೆ ಆತುಕೊಂಡು ನಿಂತ ಮಳೆ ಹನಿಯಂತೆ, ಜಗದ ಜಂಜಾಟಕ್ಕೆ ಜೋತು ಬಿದ್ದ ನನ್ನನ್ನು ನಿನ್ನೊಲವು ಆವಿಗೊಳಿಸಿ ಆಗಸದ ಆಲಯದಲ್ಲಿ ಗೊತ್ತು ಗುರಿ ಇಲ್ಲದ ದಾರಿಯಲ್ಲಿ ಅಲೆಯಲು ಬಿಟ್ಟಿದೆ.
ನೂರಾರು ಮೈಲು ದೂರದಲ್ಲಿ ನಿಂತು ಜಗದ ಸಕಲ ಇತಿಮಿತಿಗಳನ್ನೂ ಕಣ್ತುಂಬಿಕೊಳ್ಳುತ್ತಿರುವ ನನಗೆ ಎಲ್ಲವೂ, ಎಲ್ಲರೂ ಮಿತಿಯ ಮೂರ್ತ ರೂಪವೇ ಅನಿಸುತ್ತಿದೆ.
ನಮ್ಮೊಳಗೆ ಹುಟ್ಟುವ ಹುಚ್ಚು ಕಲ್ಪನೆಗಳು ಯಾರದೋ ನಿರೀಕ್ಷಗೆ ಮೂಗುದಾರ ಬಿಗಿಯುವುದು ವಿಚಿತ್ರವೆನಿಸುವ ವಾಸ್ತವ. ಇನ್ನೊಬ್ಬರ ಕನಸಿನ ಕೂಸಾಗಿ ಬಿಡುವ ನಾವು, ನಮ್ಮದೇ ಕನಸಿನ ಬಾಲ ಹಿಡಿದು ಹೊರಟರೆ ನಮ್ಮನ್ನಾಳಲು ಹೊರಟವರ ಮನಸ್ಸಿಗೆ ಘಾಸಿಯಾಗುತ್ತದೆ. ಅವರ ಭಾವನೆಗಳನ್ನು ಪುಸಲಾಯಿಸಲು ಹೋದಂತೆಲ್ಲ ನಮ್ಮ ಕನಸಿನ ಚಿತ್ರಗಳು ಬಣ್ಣ ಬದಲಿಸುತ್ತವೆ. ನಿನ್ನನ್ನು ನಾನ್ಯಕೆ ಪ್ರೀತಿಸಿದೆ? ಅನ್ನೋ ಪ್ರಶ್ನೆಗೆ ಉತ್ತರ ಅರಸುವ ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿದೆ. ಪ್ರೀತಿ ಹುಟ್ಟಲೂ ಒಂದು ಕಾರಣ ಬೇಕಾ? ಆ ಕಾರಣ ನಮ್ಮ ಗ್ರಹಿಕೆಗೆ ನಿಲುಕಲೇ ಬೇಕಾ? ಗಾಂಭೀರ್ಯದ ಸೋಗು ಹೊದ್ದುಕೊಂಡು ನಮ್ಮೊಳಗೆ ನಾವಿಳಿದಂತೆಲ್ಲ ಅಮೂರ್ತ ಸುಖದ ದರ್ಶನವಾಗುವುದು ಸುಳ್ಳಂತೂ ಅಲ್ಲ.
ಮುನಿಸು ಪ್ರೀತಿಯ ಅವಿಭಾಜ್ಯ ಅಂಗವೆಂಬುದರ ಅರಿವಾದದ್ದು ನಿನ್ನನ್ನು ಇಡಿಯಾಗಿ ಗ್ರಹಿಕೆಯ ಪರಿಧಿಯೊಳಗೆ ಕೂರಿಸಿಡಲು ಯತ್ನಿಸಿ ಸೋತಾಗಲೇ.
ಉಸಿರು ಬಿಗಿಹಿಡಿದು ನಿನ್ನನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ನನ್ನೊಳಗಿನ ನೆನಪಿನ ಗೂಡಲ್ಲಿ ಬೆಚ್ಚಗೆ ಕೂತಿದೆ. ನೀ ಕಂಡರೂ ಕಾಣದಂತೆ ನಟಿಸುವುದು, ಪ್ರೀತಿಯಿಂದ ಮುನಿದುಕೊಳ್ಳುವುದು, ನನ್ನ ತುಂಟತನದೆದುರು ಮಂಡಿಯೂರಿ ಕೂರುವುದು, ನಿನ್ನದೇ ಆದ ತಿಕ್ಕಲು ಕೀಟಲೆಯಿಂದ ನನ್ನನ್ನು ಕಂಗೆಡಿಸಿ ಅಳಿಸುವುದು ಪ್ರೀತಿಯ ಪುಸ್ತಕದ ಬಿಡಿ ಪುಟಗಳಂತೆ ನನಗೆ ತೋರಿವೆ. ಹಳೆ ನೋವುಗಳ ಸಮಾಧಿ ಮೇಲೆ ನಿಂತು ಹೊಸ ನಲಿವಿನ ಪುಟಗಳಂತೆ ನನಗೆ ತೋರಿವೆ. ಹಳೆ ನೋವುಗಳ ಸಮಾಧಿ ಮೇಲೆ ನಿಂತು ಹೊಸ ನಲಿವಿನ ಸಸಿ ನೆಡಲು ನಾ ಕರೆದಂತೆಲ್ಲ ನೀ ತಕರಾರು ತೆಗೆಯುವುದು ಸಹಜ ಪ್ರತಿಕ್ರಿಯೆಯಾಗಿ ಬಿಟ್ಟಿದೆ. ನೋವುಗಳನ್ನು ಧೇನಿಸುವುದರಲ್ಲೂ ವಿಚಿತ್ರ ಸುಖವಿದೆ ಅನ್ನುವುದು ನನಗೂ ತಿಳಿದಿದೆ. ಹಾಗಂತ ನೆನಪಿನೂರಿನ ಸ್ಮಶಾನದಲ್ಲಿ ನೆಲೆ ನಿಂತ ನೋವುಗಳನ್ನು ಪದೇ ಪದೇ ಬಡಿದೆಬ್ಬಿಸಿ, ತಲೆ ಮೇಲೆ ಕೂರಿಸಿಕೊಂಡು ಹೊತ್ತು ಮೆರೆಸುವುದೇ ಖಯಾಲಿ ಆಗಬಾರದಲ್ಲವೇ?
ಮನದ ತುಂಬಾ ಆವರಿಸಿದ ನಿರಾಶೆಗೆ ಮುಲಾಮು ತಿಕ್ಕುವ ಪ್ರೀತಿಗೆ ತಿಕ್ಕಲುತನವೇ ಜೀವ. ನಿನ್ನ ಮುನಿಸು, ನಾ ಹೆಣೆದ ಭವಿಷ್ಯದ ಹಸಿ ಕನಸು ಎಲ್ಲವೂ ಪ್ರೀತಿಯ ಪಯಣವನ್ನು ಮತ್ತಷ್ಟು ಆಪ್ತವಾಗಿಸುತ್ತಿವೆ.
ನಿನ್ನ ಮುನಿಸನ್ನು ಕ್ಷಣಕಾಲ ದೂರ ಸರಿಸಿ, ನನ್ನೊಂದಿಗೆ ತುಸು ತುಂಟಾಟಕ್ಕಿಳಿದರೂ ನಾನು ಧನ್ಯ
- ಎಚ್.ಕೆ.ಶರತ್