

ಥ್ರಿಲ್ಲರ್ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥರಿಗೆ 'ವ್ಯಕ್ತಿತ್ವ ವಿಕಸನದ ಗುರು' ಎಂಬ ಬಿರುದೂ ಇದೆ. ದೇಶದ ಮೂಲೆ ಮೂಲೆಗಳಿಂದ ಉಪನ್ಯಾಸ ನೀಡಲು ಅವರಿಗೆ ಆಹ್ವಾನ ಬರುತ್ತದೆ. ಇದರಿಂದಲೇ ಅವರು ಲಕ್ಷ ಲಕ್ಷ ಎಣಿಸುತ್ತಾರೆ. ಆದರೆ, ಆ ಹಣವನ್ನು ಏನು ಮಾಡುತ್ತಾರೆ? ಎನ್ನುವುದು ಪ್ರಶ್ನೆ.
ಈ ಸಾಹಿತಿಯೊಳಗೊಬ್ಬ ಮಹಾನ್ ದಾನಿ ಇದ್ದಾನೆ. ಕರ್ನಾಟಕ- ಆಂಧ್ರದ ಗಡಿಯಲ್ಲಿರುವ ಶಾಲೆಗಳ ಮಕ್ಕಳ ಮೇಲೆ ಯಂಡಮೂರಿಗೆ ಮಮತೆ ಹೆಚ್ಚು. ಒಮ್ಮೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಒಂದು ಶಾಲೆಗೆ ಯಂಡಮೂರಿ ಹೋಗಿದ್ದರು. ಆ ಶಾಲೆಯ ಒಬ್ಬ ವಿದ್ಯಾರ್ಥಿಯ ಕಾಲಲ್ಲೂ ಚಪ್ಪಲಿ ಇರಲಿಲ್ಲ. ಯಂಡಮೂರಿ ಕೂಡಲೇ ಸಮೀಪದ ಶೋರೂಮ್‌ಗೆ ಹೋಗಿ ಎಲ್ಲ ಮಕ್ಕಳಿಗೂ ಚಪ್ಪಲಿ ತಂದು ತೊಡಿಸಿದರು. ಇಂಥ ಕೆಲಸವನ್ನವರು ಬೇಕಾದಷ್ಟು ಸಲ ಮಾಡಿದ್ದಾರೆ.