

ಮಹರ್ಷಿ ಅತ್ರಿಗಳ ಪತ್ನಿ ಅನುಸೂಯಾ ದೇವಿ ಮಹಾ ತಪಸ್ವಿನಿಯಾಗಿದ್ದಳು. ಪತಿವ್ರತಾ ಶಿರೋಮಣಿ. ಅತಿಥಿ ಸತ್ಕಾರದಲ್ಲಂತೂ ಎತ್ತಿದ ಕೈ. ಒಮ್ಮೆ ಅವಳ ಪಾತಿವ್ರತ್ಯವನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಯಾಚಕರ ರೂಪವನ್ನು ತಾಳಿ ಅತ್ರಿಗಳ ಆಶ್ರಮಕ್ಕೆ ಬಂದರಂತೆ. ಆಗ ಮಹರ್ಷಿಗಳು ಆಶ್ರಮದಲ್ಲಿರಲಿಲ್ಲ. ನದಿಗೆ ಸ್ನಾನಕ್ಕೆ ಹೋಗಿದ್ದ ಸಮಯ. ಅನುಸೂಯೆಯನ್ನು ಕುರಿತು "ತಾಯಿ, ನಿಮ್ಮ ಆತಿಥ್ಯದ ಹಿರಿಮೆಯನ್ನು ಕೇಳಿ ಬಹುದೂರದಿಂದ ಬಂದಿದ್ದೇವೆ. ಹಸಿದು ಬಂದಿರುವ ನಮಗೆ ಇಂದು ನಿನ್ನ ಮನೆಯಲ್ಲಿ ಭೋಜನವಾಗಬೇಕು" ಎಂದರು. ಅನುಸೂಯೆ ತ್ವರೆಯಿಂದ ಪಾಕಗಳನ್ನು ಸಿದ್ಧಪಡಿಸಿ, ಎಲೆಗಳನ್ನು ಹಾಕಿ ಅವರನ್ನು ಊಟಕ್ಕೆ ಕರೆದಳು. ಅವರು, 'ಅಮ್ಮಾ, ನಮ್ಮದೊಂದು ಪದ್ಧತಿಯಿದೆ. ನೀನು ವಿವಸ್ತ್ರಳಾಗಿ ನಮಗೆ ಉಣ-ಬಡಿಸಿದರೆ ಮಾತ್ರ ನಾವು ಊಟ ಮಾಡುತ್ತೇವೆ. ಇದು ನಮ್ಮ ಪದ್ಧತಿ" ಎಂದರು. ಮುನಿ ಪತ್ನಿ ಕ್ಷಣಕಾಲ ಗೊಂದಲಕ್ಕೊಳಗಾದಳು. "ಇವರು ಸಾಮಾನ್ಯ ಯಾಚಕರಲ್ಲ, ಯಾರೋ ದೇವತೆಗಳೋ, ದಾನವರೋ ಇರಬೇಕು. ಯಾರಾದರಾಗಲಿ, ಇವರು ಇಂದಿನ ಅತಿಥಿಗಳು. ನನಗೆ ಮಕ್ಕಳ ಸಮಾನರು. ಅಂದ ಮೇಲೆ ಇವರ ಅಪೇಕ್ಷೆಯಂತೆ ಉಣಬಡಿಸಲು ಏಕೆ ಅಂಜಬೇಕು?" ಎಂದು ಯೋಚಿಸಿ, ಸಮಾಧಾನದಿಂದ, "ಆಗಬಹುದು ಊಟಕ್ಕೆ ದಯಮಾಡಿಸಿ" ಎಂದಳು.
ತಾನು ಒಳಗೆ ಹೋಗಿ ಮನ್ಸಸಿನಲ್ಲೇ ಭಕ್ತಿಯಿಂದ ಪತಿಯ ಪಾದಪದ್ಮಗಳನ್ನು ಧ್ಯಾನಿಸಿ, ಪತಿ ಪಾದೋದಕವನ್ನು ಆ ಮೂವರು ಯಾಚಕರ ಮೇಲೆ ಸಿಂಪಡಿಸಿದಳು. ಮೂವರೂ ಮೂರು ಮುದ್ದು ಶಿಶುಗಳಾಗಿ ಮಾರ್ಪಟ್ಟು ಜೋರಾಗಿ ಅಳಲಾರಂಭಿಸಿದವು. ಅನಸೂಯೆಗೆ ಮಾತೃವಾತ್ಸಲ್ಯದಿಂದ ಸ್ತನಗಳಲ್ಲಿ ಹಾಲು ತುಂಬಿ ಸುರಿಯತೊಡಗಿತು. ಯಾಚಕರ ಅಪೇಕ್ಷೆಯಂತೆ ವಿವಸ್ತ್ರಳಾಗಿ ಮಕ್ಕಳನ್ನು ಒಬ್ಬೊಬ್ಬರಾಗಿ ತೊಡೆಯ ಮೇಲೆ ಎತ್ತಿಟ್ಟುಕೊಂಡು, ಪುತ್ರ-ವಾತ್ಸಲ್ಯದಿಂದ ಹೊಟ್ಟೆ ತುಂಬ ಹಾಲುಣಿಸಿದಳು. ನಂತರ ವಸ್ತ್ರ ಧರಿಸಿ ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಿ ತೂಗಿದಳು.
ಆಶ್ರಮಕ್ಕೆ ಹಿಂದಿರುಗಿದ ಅತ್ರಿ ಋಷಿಗಳ ಜ್ಞಾನ ದೃಷ್ಟಿಗೆ ಶಿಶುಗಳು ತ್ರಿಮೂರ್ತಿಗಳೆಂದು ಗೊತ್ತಾದ ಕೂಡಲೇ ಅವರಿಗೆ ತುಂಬಾ ಸಂತೋಷವಾಯಿತು. ಪತ್ನಿಯನ್ನು ಮನಸಾರೆ ಕೊಂಡಾಡಿದರು. ದಂಪತಿಗಳು ಭಕ್ತಿಭಾವದಿಂದ ಕೈ ಮುಗಿದು ಸಾಷ್ಟಾಂಗವೆರಗಿದ ಕೂಡಲೇ ಶಿಶುಗಳಿಗೆ ನಿಜರೂಪ ಲಭಿಸಿ, ಎದುರಿಗೆ ತ್ರಿಮೂರ್ತಿಗಳು ನಗುತ್ತ ನಿಂತರು. "ಅಮ್ಮಾ ನಿಮ್ಮ ಪಾತಿವ್ರತ್ಯದೆದರು ನಾವು ಸೋತು ಶಿಶುಗಳಾಗಿ ಹೋದೆವು. ನಿಮಗೆ ಬೇಕಾದ ವರವನ್ನು ಕೇಳಿರಿ" ಎಂದರು. ಅನಸೂಯಾ ದೇವಿ ಪತಿಯ ಅಭಿಪ್ರಾಯವನ್ನು ತಿಳಿದು, "ನೀವು ಮೂವರೂ ನಮ್ಮ ಮಕ್ಕಳಾಗಿಯೇ ಉಳಿಯಬೇಕೆಂದು" ಪ್ರಾರ್ಥಿಸಿ ಅದರಂತೆ ವರ ಪಡೆದು ಕೃತಾರ್ಥಳಾದಳು.
- ಬ್ರಹ್ಮಾಣಿ ಪಿ. ರಾವ್