ಒಳಗೆ ಆತ ದೇವರಿಗೆ ಕಾದೂ ಕಾದು
ಸುಸ್ತಾಗಿ ಕೈ ಮುಗಿದು ನಿಂತಿದ್ದಾನೆ
ಹೊರಗೆ ಮಕ್ಕಳು
ಅವನ ಚಪ್ಪಲಿ ಕಾಯುತ್ತಿವೆ
=
ಪ್ರೇಮಿಗಳು ಮದುವೆಯಾಗಿ
ಮಗು ನಗುವಾಗ
ಪ್ರೇಮದ ಕೊನೆಯ ಮೆಟ್ಟಿಲು
ಕಾಮವಾಗಿಯೇ ಉಳಿದುಕೊಂಡಿತು.
=
ಗೆಳತಿ, ನಿನ್ನೊಂದಿಗೆ ಕಳೆದ
ಮಧುರ ಕ್ಷಣಗಳಿಗೆ
ಬಣ್ಣ ಬಣ್ಣದ ಬಟ್ಟೆ ತೊಡಿಸಿ
ಮನೆ ಮುಂದೆ
ನೇತು ಹಾಕಿದ್ದೇನೆ
ಗುರುತು ಸಿಕ್ಕಿದರೆ ಮತ್ತೆ ಬಾ
=
ನಿನ್ನೆ ಕನಸ್ಸಿನಲ್ಲಿ ನನ್ನವಳಿಗೊಂದು
ಪ್ರೇಮಸೌಧ ಕಟ್ಟಿಸಿದ್ದೆ
ಮುಂಜಾನೆ ಎದ್ದಾಗ
ಟೀ ಕುಡಿಯಲೂ ದುಡ್ಡಿರಲಿಲ್ಲ.
=
ಭೋರ್ಗರೆದು ಬಂದ
ಹೊಸ ನೀರು
ಹಳೆಯ ನೀರನ್ನು
ಕೊಚ್ಚಿಕೊಂಡು
ಹೋಯಿತು.
ಕೊನೆಗುಳಿದದ್ದು ಕೆಸರು!
=
ಜೀವನವೆಂದರೆ ಹೂವಿನಂತೆ
ಹೂ ಮೃದುವಿನೊಂದಿಗೆ
ಮುಳ್ಳಿರುತ್ತದೆ ಎನ್ನುವುದು
ಜೀವನವೆಂದರೆ ಕರಿದ ಮೀನಿನಂತೆ
ರುಚಿಯೊಂದಿಗೆ
ಅಲ್ಲಲ್ಲಿ ಮುಳ್ಳಿರುತ್ತದೆ
ಎನ್ನುವುದಕ್ಕೆ ಸಮ.
- ಮೋಹನ್ ವಿ. ಕೊಳ್ಳೆಗಾಲ