ಕೌಶಿಕನೆಂಬ ಮಹಾರಾಜನಿದ್ದ. ಒಂದು ಸಲ ದಿಗ್ವಿಜಯ ಯಾತ್ರೆಯನ್ನು ಕೈಗೊಂಡ. ತನ್ನೆಲ್ಲ ರಾಜಪರಿವಾರ ಮತ್ತು ಸೈನಿಕರೊಂದಿಗೆ ಹೊರಟ. ಎಲ್ಲ ಮುಗಿಸಿಕೊಂಡು ಮರಳಿ ಬರುವಾಗ ತುಂಬಾ ಆಯಾಸವಾಗಿತ್ತು. ಹಾದಿ ಮಧ್ಯೆ ವಸಿಷ್ಠ ಮುನಿಗಳ ಆಶ್ರಮ ಕಂಡಿತು. ಗುರುಗಳ ಆಶೀರ್ವಾದ ಪಡೆದುಕೊಳ್ಳಲು ಎಲ್ಲರೂ ಆಶ್ರಮದೊಳಗೆ ಹೋದರು. ವಸಿಷ್ಠರ ಭೇಟಿಯೂ ಆಯಿತು.
ಇವರ ಬಳಲಿಕೆ ಕಂಡ ವಸಿಷ್ಠರು 'ಇಲ್ಲಿಯೇ ಊಟ ಮಾಡಿಕೊಂಡು ವಿಶ್ರಾಂತಿ ಪಡೆದುಕೊಂಡು ಹೋಗಿ' ಎಂದರು. ಕೌಶಿಕ ಸಂಕೋಚದಿಂದಲೇ ಒಪ್ಪಿಕೊಂಡ. ಎಲ್ಲ ರಾಜ ಪರಿವಾರಕ್ಕೂ 'ಕಾಮಧೇನು' ಎಂಬ ಹಸು ಆಹಾರವನ್ನು ಪೂರೈಸಿತು. ಇದನ್ನು ಕಂಡ ಕೌಶಿಕ ಆಶ್ಚರ್ಯಚಕಿತನಾದ. ಇದು ತನ್ನ ಬಳಿಯಿರಬೇಕೆಂದು ಮುನಿಗಳಿಗೆ ತಿಳಿಸಿದ. ವಸಿಷ್ಠರು ಕೊಡಲು ಒಪ್ಪಲಿಲ್ಲ. ಆಗ ಸಿಟ್ಟಿಗೆದ್ದ ಕೌಶಿಕ ಬಲವಂತದಿಂದ ಎಳೆದುತರಲು ಸೈನಿಕರಿಗೆ ಆಜ್ಞಾಪಿಸಿದ. ಸೈನಿಕರು ಹಿಡಿಯಲು ಮುಂದಾದಾಗ ಕಾಮಧೇನುವೇ ಹಲವು ಸೈನಿಕರನ್ನು ಸೃಷ್ಟಿಸಿತು. ಆಗ ಯುದ್ಧವೇ ನಡೆದುಹೋಯಿತು. ಕೌಶಿಕ ಮತ್ತು ಆತನ ಸೈನಿಕರು ಸೋತರು.
ಕೌಶಿಕನಿಗೆ ಬಹಳ ಅವಮಾನವಾಯಿತು. ಸೇಡು ತೀರಿಸಿಕೊಳ್ಳಲು ರಾಜಪರಿವಾರ ತ್ಯಜಿಸಿ ಹಿಮಾಲಯಕ್ಕೆ ತೆರಳಿದ. ಅಲ್ಲಿ ಉಗ್ರ ತಪಸ್ಸು ಮಾಡಿ ಶಿವನಿಂದ ಹಲವು ಅಸ್ತ್ರಗಳನ್ನು ಪಡೆದುಕೊಂಡು ಮರಳಿ ವಸಿಷ್ಠರ ಆಶ್ರಮಕ್ಕೆ ಬಂದ. ಆಶ್ರಮದ ಮೇಲೆ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸತೊಡಗಿದ. ಆಶ್ರಮಕ್ಕೆ ಬೆಂಕಿ ತಗುಲಿತು. ಎಲ್ಲೆಡೆ ಹಾಹಾಕಾರವೆದ್ದಿತು. ಆಕ್ರಂದನ ಮುಗಿಲು ಮುಟ್ಟಿತು. ಈ ಅನಾಹುತಕ್ಕೆ ಕಾರಣ ತಿಳಿದುಕೊಂಡ ವಸಿಷ್ಠರು ಎಲ್ಲರನ್ನೂ ಸಂತೈಸಿದರು. ಬ್ರಹ್ಮದಂಡವನ್ನು ಎತ್ತಿ ಹಿಡಿದರು. ಅದು ಎಲ್ಲ ಬೆಂಕಿಯನ್ನು ನುಂಗಿತು. ಕೌಶಿಕನ ಎಲ್ಲ ಅಸ್ತ್ರಗಳನ್ನು ಬಲಿ ತೆಗೆದುಕೊಂಡಿತು. ಅಸ್ತ್ರಗಳಲ್ಲೇ ದೊಡ್ಡ ಆಸ್ತ್ರ ಬ್ರಹ್ಮಾಸ್ತ್ರ. ಇದನ್ನು ಪ್ರಯೋಗಿಸಲು ಕೌಶಿಕ ಮುಂದಾದಾಗ ಇಡೀ ಜಗತ್ತು ತಲ್ಲಣಿಸಿತು. ಭೂಮಿ ನಡುಗಿತು. ಪ್ರಾಣಿ ಪಕ್ಷಿಗಳೆಲ್ಲ ದಿಕ್ಕೆಟ್ಟು ಓಡತೊಡಗಿದವು. ದೇವಾನು ದೇವತೆಗಳು ಗಾಬರಿಯಾದರು. ಇಂತಹ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿದಾಗ ವಸಿಷ್ಠರು ಸ್ವಲ್ಪವೂ ವಿಚಲಿತರಾಗದೇ ಬ್ರಹ್ಮದಂಡವನ್ನು ಮುಂದು ಮಾಡಿದರು. ಬ್ರಹ್ಮದಂಡ ಬ್ರಹ್ಮಾಸ್ತ್ರವನ್ನೂ ನುಂಗಿತು. ಎಲ್ಲರೂ ನಿಟ್ಟುಸಿರನ್ನು ಬಿಟ್ಟರು. ಕೌಶಿಕ ಮತ್ತೆ ಸೋತ.
ಕೌಶಿಕನಿಗೆ ಪಶ್ಚಾತ್ತಾಪವಾಯಿತು. ತಪಸ್ಸಿನ ಶಕ್ತಿ ಮುಂದೆ ಯಾವ ಬಲವೂ ನಡೆಯೋದಿಲ್ಲ ಎಂದು ತಿಳಿದುಕೊಂಡ. ತಪಸ್ಸಿನ ಶಕ್ತಿಯನ್ನು ಪಡೆಯಲು, ತಾನೂ ಖುಷಿಯಾಗಲು ಮತ್ತೆ ಹಿಮಾಲಯಕ್ಕೆ ತೆರಳಿದ. ಉಗ್ರ ತಪಸ್ಸನ್ನು ಮಾಡಿದ. ಅನೇಕ ತೊಂದರೆಗಳು, ಘಟನೆಗಳು ನಡೆದವು. ಅವೆಲ್ಲವನ್ನೂ ಸಹಿಸಿಕೊಂಡ. ಹಂತಹಂತವಾಗಿ ಅಧ್ಯಾತ್ಮದಲ್ಲಿ ಮೇಲೆ ಏರತೊಡಗಿದ. ಆಗಲೇ ಮೇನಕೆ ಬಂದಿದ್ದು. ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದ. ಒಂದು ಮಗುವನ್ನೂ ಪಡೆದಾಗ ಅರಿಯವಾಯಿತು. ಗುರಿ ಮುಟ್ಟುವ ಮೊದಲೇ ಹಾದಿ ತಪ್ಪಿದ್ದು ತಿಳಿಯಿತು. ಮತ್ತೆ ತಪಸ್ಸು ಮಾಡತೊಡಗಿದ. ಋಷಿಯಾದ, ರಾಜರ್ಷಿಯಾದ. ತಪಸ್ಸಿನ ಬಲದಿಂದ ಬ್ರಹ್ಮಋಷಿಯೂ ಆದ. ವಸಿಷ್ಠರಿಂದಲೇ 'ವಿಶ್ವಾಮಿತ್ರ' ಎಂದು ಕರೆಸಿಕೊಂಡ ಇಡೀ ಬ್ರಹ್ಮಾಂಡದಲ್ಲೆ ಶ್ರೇಷ್ಠ ಋಷಿಯೆಂದು ಖ್ಯಾತಿ ಪಡೆದ.
- ರಾಜಶೇಖರ ಗುಬ್ಬಿ