

ಹಾಸ್ಟೆಲ್ ಎಂದರೆ ಏನೆಂದು ಸರಿಯಾಗಿ ತಿಳಿಯದಿರುವ ವಯಸ್ಸಿನಲ್ಲಿಯೇ, ಅನಿರೀಕ್ಷಿತ ಹಾಗು ಅಚಾನಕ್ಕಾಗಿ ದೂರದ ಊರಿನ ಬೇರೆ (ತುಳು) ಭಾಷೆ ಮಾತನಾಡುವ ಜನರಿರುವ ಊರಿನ ವಿದ್ಯಾರ್ಥಿ ನಿಲಯಕ್ಕೆ ಹೊರಟು ನಿಂತಾಗ ಮನದಲ್ಲೇನೊ ಕಂಪನ, ಭಯ, ಆತಂಕ ಮತ್ತು ಕೊಂಚವೇ ಕುತೂಹಲ. ಅಲ್ಲಿ ಸೇರಿಕೊಂಡ ಮೊದಲ ದಿನವೇ ಚಡ್ಡಿ, ಪಟ್ಟಾಪಟ್ಟೆ ಟಿ-ಶರ್ಟ್ ಧರಿಸಿ 7ನೇ ತರಗತಿಯಲ್ಲಿ ಹೋಗಿ ಕುಳಿತಿದ್ದು ಇನ್ನೂ ನನ್ನ ಮನಸಿನಲಿ ಹಸಿರು. ಆಟಕ್ಕೆ ಮೀಸಲಾಗಿದ್ದ ದಿನದ ಕೊನೆಯ ಅವಧಿಯಲ್ಲಿ ಎಲ್ಲರೂ ಆಟವಾಡುತ್ತಾ ಮೈಮರೆತಿದ್ದಾರೆ. ನಾನು ಮಾತ್ರ ಮನೆಯ ನೆನಪಲ್ಲಿ ಕಣ್ಣಾಲಿ ತುಂಬಿಸಿಕೊಂಡು ಮೈದಾನದ ಮೂಲೆಯಲ್ಲಿ ನಿಂತಿದ್ದೆ. ಅಲ್ಲಿ ಅಷ್ಟೊಂದು ಜನರಿದ್ದರೂ ನಾನು ಏಕಾಂಗಿ ಅನಿಸಿತ್ತು. ಆಗ ನನ್ನ ಸನಿಹ ಬಂದು ಮಾತನಾಡಿಸಿದಳು ಆ ನನ್ನ ಕ್ಲಾಸ್‌ಮೇಟ್.
"ಈತ ಓದಿನಲ್ಲಿ ಹುಷಾರು' ಎಂಬ ವಿಶೇಷಣದೊಂದಿಗೆ ಟೀಚರ್ ನನ್ನನ್ನು ಕ್ಲಾಸಿಗೆ ಪರಿಚಯಿಸಿದ್ದೇ, ಆಕೆ ಬಂದು ನನ್ನ ಜೊತೆ ಮಾತನಾಡಲು ಕಾರಣವಾಯಿತು ಅನಿಸುತ್ತೆ. ಯಾಕೆಂದರೆ ಹಿಂದಿನ ಆರು ವರ್ಷಗಳಿಂದಲೂ ತರಗತಿಗೆ ಮೊದಲನೆಯವಳಾಗಿದ್ದ ಆಕೆಗೆ ಎಲ್ಲಿ ತನ್ನ ಸ್ಥಾನಕ್ಕೆ ಕುತ್ತು ಬರುವುದೊ ಎಂಬ ಆತಂಕವೇ ಅವಳು ನನ್ನಲ್ಲಿ ಬಂದು ಮಾತನಾಡುವಂತೆ ಮಾಡಿತ್ತು. ಆ ಮಾತುಗಳೂ ಕೂಡ ವಿಚಾರಿಸಿಕೊಳ್ಳುವ ಧಾಟಿಯಲ್ಲಿ ಇದ್ದರೂ, ಕೊಂಚ ಗಟ್ಟಿತನ, ನೇರ ನುಡಿಯ ದಿಟ್ಟತನ, ಎಳೆಯ ಪ್ರಭುತ್ವ, ವಯಸ್ಸಿಗೆ ಮೀರಿದ ಹಿಡಿತ ಸಾಧಿಸುವ ಹಾಗು ಕೊಂಚ ಬೆದರಿಸುವ ಧ್ವನಿ ಕೂಡಾ ಆಕೆಯ ಮಾತುಗಳ ಮರೆಯಲ್ಲಿ ಸಾವಧಾನದಿಂದ ಇಣುಕಿದ್ದವು! ಅಷ್ಟಿಷ್ಟು ಅಹಮಿಕೆ ಜೊತೆ ಇದ್ದರೂ ಅದೇನೂ ಅತಿಯೆನಿಸಿರಲಿಲ್ಲ. ಆದರೂ ಸಹಪಾಠಿಗಳು ಅವಳ ಜೊತೆ ಮಾತನಾಡಲೂ ಹಿಂದೇಟು ಹಾಕುತ್ತಿದ್ದರು. ಮುಂದೆ ನಡೆದ ಪರೀಕ್ಷೆಗಳು ಅದರ ಅಂಕಗಳು ನಮ್ಮ ನಡುವೆ ಒಂದು ಆರೋಗ್ಯಕರ ಪೈಪೋಟಿಯ ಹಣಾಹಣೆಗೆ ಹೇತುವಾದವು. ಅವಳೆಣಿಕೆಯಂತೆ ಆ ವರ್ಷದ ವಾರ್ಷಿಕ (ಪಬ್ಲಿಕ್) ಪರೀಕ್ಷೆಯಲ್ಲಿ ನಾನೇ ಕ್ಲಾಸ್‌ಗೆ ಮೊದಲ ರ್ಯಾಂಕ್ ಬಂದೆ. ಅಂದಿನಿಂದ ನಮ್ಮ ನಡುವಿನ ಸ್ಪರ್ಧಾ ಕಾವು ಹೆಚ್ಚಿತು. ಅದಕ್ಕೆ ಹಲವು ಸಹಸ್ಪರ್ಧಿಗಳೂ ಸೇರ್ಪಡೆಗೊಂಡರು. ಅದರ ಪರಿಣಾಮ ಹೇಗಿತ್ತೆಂದರೆ ಪರೀಕ್ಷೆಗಳ ಉತ್ತರ ಪತ್ರಿಕೆ ಕೊಟ್ಟಾಗ ಕುಳಿತಲ್ಲಿಂದಲೇ ಎಲ್ಲರ ಅಂಕಗಳ ವಿವರ ಪಡೆಯುತ್ತಿದ್ದ ಆಕೆ, ಅದಕ್ಕೆ ಪ್ರತಿಯಾಗಿ ತನ್ನ ಮಾರ್ಕ್ಸ್ ಹೇಳಬೇಕಾಗಿ ಬಂದಾಗ "ಇಷ್ಟು" ಎಂದು ಕೈಸನ್ನೆ ಮಾಡಿ ಗೌಪ್ಯ ಕಾಯ್ದುಕೊಳ್ಳುತ್ತಿದ್ದ ಚತುರೆ ಆಕೆ. ಅವಳು ಜೋರು ಎಂಬ ಭಾವ ಸಹಪಾಠಿಗಳಲ್ಲಿ ಇದ್ದಿದ್ದರಿಂದ ಆಕೆಗೆ ಅಪ್ಪಿ ತಪ್ಪಿ ಏನಾದರೂ ಪನಿಶ್‌ಮೆಂಟ್ ಕೊಟ್ರೆ ಅದಕ್ಕೆ ಸಂಭ್ರಮಿಸುವ ದೊಡ್ಡ ಗುಂಪೇ ಇತ್ತು.
ನಾನು ನನ್ನ ಕ್ಲಾಸ್‌ಮೇಟ್ ಅತ್ಯಂತ ಆಪ್ತರಾಗಿರದಿದ್ದರೂ ಪರಸ್ಪರ ಗೌರವ ಭಾವ ಇತ್ತೆಂದು ತಿಳಿದದ್ದು ಆ ಪರಿಧಿಯಿಂದ ಹೊರಬಂದ ಮೇಲೇನೇ ಆ ಹಣಾಹಣಿ, ಕೋಪ, ಒಟ್ಟಾಗಿ ಹೋಗಿ ಬರೆದಿದ್ದ ಪ್ರತಿಭಾ ಪರೀಕ್ಷೆಗಳು, ಸ್ಪರ್ಧಾಕೂಟಗಳು, ಇಕೊ ಕ್ಲಬ್- ಸಾಹಿತ್ಯ ಕ್ಲಬ್ ಕಾರ್ಯಗಳು, ಚಟುವಟಿಕೆಗಳು ಕ್ಲಾಸ್‌ಮೇಟ್ ನೆನಪುಗಳ ಸ್ಪುಟವಾದ ಚಿತ್ರಗಳು. ಅಂದು ಕೇವಲ ಕ್ಲಾಸ್‌ಮೇಟ್ಸ್ ಆಗಿದ್ದ ನಾವು ಜೀವನದ ಪಥದಲ್ಲಿ ಬಹುದೂರ ಕ್ರಮಿಸಿದ್ದರೂ ಇಂದು ಆ ಹಣಾಹಣಿ ಮಾಯವಾಗಿ ಅತ್ಯಂತ ಆಪ್ತ ಗೆಳೆಯರಾಗಿ ಮಾತಿಗಿಳಿದಾಗೆಲ್ಲಾ ಆ ದಿನಗಳ ನೆನಪುಗಳು ಬಿಟ್ಟೂಬಿಡದೆ ಕಾಡುತ್ತಿರುತ್ತವೆ.
- ಸಂದೇಶ್ ಎಚ್. ನಾಯ್ಕ್ ಹಕ್ಲಾಡಿ