ಜನರಲ್ಲಿ 'ಪರಿಸರ ಪ್ರಜ್ಞೆ' ಮೂಡಿಸಲು ತೀರ್ಮಾನಿಸಿದ ಗುಂಪೊಂದು, ದಾರಿಯುದ್ದಕ್ಕೂ ಫ್ಲೆಕ್ಸ್ ಹಾಕಿಸಿಕೊಂಡು, ಪಟಾಕಿ ಸಿಡಿಸಿಕೊಂಡು ಬೈಕ್ನಲ್ಲಿ ಜಾಥಾ ಹೊರಟಿತು.
=
ಆಕಸ್ಮಿಕವಾಗಿ ಸಿಕ್ಕ ಸಿರಿವಂತನ ಜತೆ ಸಲುಗೆಯಿಂದ ವರ್ತಿಸಿ ಅವನ ಮೊಬೈಲ್ ನಂಬರ್ ಪಡೆದಳು. ಊರಿಗೆ ಮರಳಿದ 2 ದಿನಗಳ ನಂತರ 'ನಿನ್ನನ್ನು ನೋಡುವ ಆಸೆಯಾಗಿದೆ, ದಯಮಾಡಿ ಬಾ' ಎಂದು ಪೋನ್ ಮಾಡಿ ಕರೆದಳು. ಬೆಡಗಿಯ ಕರೆಗೆ ಓಗೊಟ್ಟು ಆಸೆಯಿಂದ, ಅವಳ ಮಾತಿನಂತೆ ಪಟ್ಟಣದ ಹೊರವಲಯಕ್ಕೆ ಹೋದಾಗ, ಮೊದಲೇ ರೂಪಿಸಿದ್ದ ಯೋಜನೆಯಂತೆ ಕರೆತಂದಿದ್ದ ರೌಡಿಗಳಿಂದ ಸಿರಿವಂತನನ್ನು ತದುಕಿಸಿ, ಅವನ ಮೈಮೇಲಿದ್ದ ಆಭರಣಗಳನ್ನು ದೋಚಿಕೊಂಡು ಪರಾರಿಯಾದಳು !
=
ಅವಳ 'ರೂಪ ರಾಶಿ'ಗೆ ಮನಸೋತು ಪ್ರೀತಿಸಿ, ಸಲುಗೆ ಕೊಟ್ಟನು. ಅವಳು ಅವನ 'ಸುಲಿಗೆ' ಮಾಡಿ ಮತ್ತೊಬ್ಬನ ಮಡದಿಯಾದಳು!
=
ಕೈಲಾಗದ ಮುದುಕನೊಬ್ಬನು ಹೊಟ್ಟೆಪಾಡಿಗಾಗಿ ಚೀಲಗಳನ್ನು ತುಂಬಿದ್ದ ಕೈಗಾಡಿ ಎಳೆಯುತ್ತಿದ್ದನು. ಅದೇ ದಾರಿಯಲ್ಲಿ ಸದೃಢ ಯುವಕನೊಬ್ಬನು ಹೊಟ್ಟೆಪಾಡಿಗಾಗಿ ದೇವರ ಫೋಟೋ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದನು!
- ಬಸವನಗೌಡ ಹೆಬ್ಬಳಗೆರೆ
ಚನ್ನಗಿರಿ, ದಾವಣಗೆರೆ.