ಬಿಡದೇ ಕಾಡುವ ನೆನಪುಗಳು...

ಅದು ನಮ್ಮ ಏಳನೇ ತರಗತಿಯ ಮುಕ್ತಾಯದ ಸಮಯ....
ಬಿಡದೇ ಕಾಡುವ ನೆನಪುಗಳು...
Updated on: 

ಅದು ನಮ್ಮ ಏಳನೇ ತರಗತಿಯ ಮುಕ್ತಾಯದ ಸಮಯ. ಸಹಜವಾಗಿಯೇ ನಮ್ಮ ಬೀಳ್ಕೊಡುಗೆಯ ಸಮಾರಂಭ ಏರ್ಪಾಡಾಗಿತ್ತಾದರೂ ಅಷ್ಟೇನೂ ಬೇಜಾರಾಗಿರಲಿಲ್ಲ. ಏಕೆಂದರೆ, ಹೈಸ್ಕೂಲ್‌ನಲ್ಲಿ ಎಲ್ಲಾ ಗೆಳೆಯರು ಸಿಕ್ತಾರೆ ಎನ್ನುವ ಧೈರ್ಯವಿತ್ತು. ಇನ್ನು ಹತ್ತನೇ ತರಗತಿಯ ಅಂತ್ಯದಲ್ಲಿ ಬೇಜಾರಿತ್ತಾದರೂ ಕಾಲೇಜೆಂಬ ಮೋಜಿನ ತಾಣ, ಅರ್ಧದಷ್ಟು ಗೆಳೆಯರು ಕಾಲೇಜಲ್ಲಿ ಸಿಗೋಣ ಎಂದು ನೀಡಿದ ಭಾಷೆ ಎಲ್ಲವನ್ನೂ ಮರೆಸಿತ್ತು. ಇನ್ನು ಪಿಯುಸಿಯ ಫೇರ್‌ವೆಲ್ ಪಾರ್ಟಿಯಲ್ಲಿ ತುಂಬಾ ನೋವಾಯ್ತು. ಕಾರಣ, ಪದವಿಯಲ್ಲಿ ಗೆಳೆಯರ ಸಂಖ್ಯೆ ಬರೀ ಐದರಿಂದ ಆರಕ್ಕಷ್ಟೇ ಸೀಮಿತವಾಗುವ ಎಲ್ಲಾ ಲಕ್ಷಣಗಳು ಗೋಚರವಾಗಿ ಮನಸ್ಸನ್ನು ಸೂತಕವಾಗಿಸಿದ್ದವು. ಆದರೆ ಈ ಪದವಿ ಹಂತದ ಇಳಿ ಸಂಜೆಯಲಿ ಏರ್ಪಾಡಾಗೋ ಗ್ಯಾದರಿಂಗ್ ಇದೆಯಲ್ಲಾ ಆ ಸಂದರ್ಭದ ದುಃಖದ ಮಡುವು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.
ಹೌದು. ಪದವಿ ಹಂತ ಎಂಬುದೊಂದು ನೆನಪುಗಳ ಗಣಿ. ಗೆಳೆಯರೊಂದಿಗಿನ ಆ ಹರಟೆ, ಬಂಕ್ ಹೊಡೆದು ನೋಡಿದ ಸಿನೆಮಾ, ಚಂದದ ಹುಡುಗಿಯರ ಅಂದದ ಕಿರುನೋಟ, ಭಯದ ನಡುವೆಯೂ ಮಾಡಿದ ಸೆಮಿನಾರ್‌ಗಳು, ಕ್ಲಾಸಲ್ಲಿ ಬೇಕಂತಲೇ ಮಾಡಿದ ಮೊಬೈಲ್ ರಿಂಗಣಗಳು, ಒಂದು ಪ್ಲೇಟ್ ಕೇಸರಿಬಾತನ್ನು ನಾಲ್ಕು ಜನ ಹಂಚಿಕೊಂಡು ತಿಂದು ಹೋಟೆಲ್ ಮಾಣಿಗೆ ಅಚ್ಚರಿಪಡಿಸಿದ ಸ್ನೇಹದ ದಿನಗಳು! ಹೀಗೆ ಎಗ್ಗಿಲ್ಲದೇ ಮಗ್ಗಲು ತಿರುವುತ್ತವೆ ಕಾಲೇಜು ದಿನದ ನೆನಪುಗಳು. ಖಂಡಿತವಾಗಿಯೂ ಇನ್ನು ಮುಂದೆ ಬೋರ್ ಹೊಡೆಸೋ ಕ್ಲಾಸ್‌ಗಳಿರೋಲ್ಲ. ಅಸೈನ್‌ಮೆಂಟ್‌ಗಳ ಕಾಟ ಇರೋಲ್ಲ. ಆಂತರಿಕ ಅಂಕಗಳ ಭಯ ಇಲ್ಲಾ. ಆದರೆ ಮುಂದೆ ಜೀವನ ಅನ್ನೋ ಸುದೀರ್ಘ ಪಯಣವಿದೆ. ಜವಾಬ್ದಾರಿಗಳಿವೆ. ಕನಸುಗಳ ಆಗರವಿದೆ. ಇವೆಲ್ಲಾ ನೆನಪಾದಾಗ ಮೂರು ವರ್ಷದ ಪದವಿ ಮೂರು ತಾಸಿನ ಸಿನಿಮಾದಂತೆ ಕಳೆದುಹೋಯಿತಲ್ಲಾ ಅನ್ನೋ ಬೇಜಾರು ಮನಸಲ್ಲಿ ಒತ್ತರಿಸಿ ಬಂದಿದೆ.
ಮೊನ್ನೆ ನಮ್ಮ ಕಾಲೇಜಿನ ಜ್ಯೂನಿಯರ್ಸ್ ಬಂದು, ನಿಮ್ಮ ಬೀಳ್ಕೊಡುಗೆಯ ಸಮಾರಂಭಕ್ಕಾಗಿ ನಮ್ಮಲ್ಲೇ ಹಣ ಒಗ್ಗೂಡಿಸುತ್ತಿದ್ದೇವೆ. ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದಾಗ ಇದೆಲ್ಲಾ ನೆನಪಾಯಿತು. ಇನ್ನು ತಿಂಗಳೊಪ್ಪತ್ತಿನಲ್ಲಿ ನಾವು ಪದವಿ ಕಾಲೇಜೆಂಬ ಸುಂದರ ಲೋಕದಿಂದ ದೂರ ಸಾಗುತ್ತಿದ್ದೇವೆ. ಬರಿಗೈಯಿಂದಲ್ಲ ನೆನಪುಗಳ ಮೂಟೆಯನ್ನು ಹೊತ್ತುಕೊಂಡು...
ಇಷ್ಟಕ್ಕೂ ಮೈಲ್ಸ್ ಟು ಗೋ ಬಿಫೋರ್ ವಿ ಸ್ಲೀಪ್....

- ಬಿ. ಸೋಮಶೇಖರ್, ಸುರಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com