ಮುಚ್ಚುತ್ತಿರುವ ಕಣ್ಣಲ್ಲಿ
ಅವನ ಒಲವಿನ
ಒಡನಾಟದ ಚಿತ್ರಗಳು
ನಸುನಗುತ್ತಿವೆ.
=
ಮಗು
ಕನ್ನಡಿಯೊಳಗಿನ
ಪ್ರತಿಬಿಂಬವ ಕಂಡು
ಸ್ನೇಹಕೆ ಕೈ ಚಾಚಿದೆ
ತಾನೆಂಬ ಅರಿವಿಲ್ಲದೆ.
=
ಎದುರಾದ ಪ್ರಶ್ನೆಗೆ
ನಿರುತ್ತರದ ಮೌನ
ಅವಳ ಕೊಲ್ಲುತ್ತಿದೆ.
=
ಗಾಳಿಯ ರಭಸಕ್ಕೆ
ಚದುರಿ ನಿಂತ
ನೆನಪಿನಾಳದ ಪುಟ
ಮಳೆಯ ಹನಿಯೊಂದಿಗೆ
ಉಸಿರುಗಟ್ಟಿದೆ.
=
ಪದೇ ಪದೇ ಲೊಚಗುಡುತ್ತಿರುವ
ಹಲ್ಲಿಯ ಮಾತಿಗೆ
ಕಿವಿಗೊಟ್ಟವಳಲ್ಲಿ
ಯಾವ ಉತ್ತರ ಸರಿ
ಎಂಬ ಗೊಂದಲ
ಮನೆಮಾಡಿದೆ.
=
ನಲಿಯುತ್ತಾ ಹಾರಿ ಬಂದ ಹಕ್ಕಿ
ಗೂಡು ಕಟ್ಟಿದ ಮೇಲೆ
ಮರುಗುತ್ತಿದೆ
ದೂರದ ಬೆಟ್ಟ ನುಣ್ಣಗೆಂದು.
=
- ಕಾವೇರಿ ಎಸ್.ಎಸ್.